ಹವಾಮಾನ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ಮುನ್ಸೂಚನೆ ಪ್ರಕಾರ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಳೆನಾಡು ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರೆಯಲಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆ ಪ್ರಮಾಣದಷ್ಟು ಮಾತ್ರ ಮಳೆಯಾಗಲಿದೆ. ಹೀಗಾಗಿ, ರಾಜ್ಯದಲ್ಲಿ ಸೆಪ್ಟಂಬರ್‌ನಲ್ಲಿಲೂ ಮಳೆ ಕೊರತೆ ಮುಂದುವರೆಯಲಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಸೆ.01): ಪ್ರಸಕ್ತ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆಯು ಕಳೆದ 123 ವರ್ಷದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಆಗಿರಲಿಲ್ಲ. ಇದು ಶತಮಾನದ ಮಳೆ ಕೊರತೆಯಾಗಿದೆ. ಆಗಸ್ಟ್‌ನಲ್ಲಿ ವಾಡಿಕೆ ಪ್ರಕಾರ 22 ಸೆಂ.ಮೀ ಮಳೆಯಾಗಬೇಕು. ಆದರೆ, ರಾಜ್ಯದಲ್ಲಿ ಕೇವಲ 6 ಸೆಂ.ಮೀ ಮಳೆಯಾಗಿದ್ದು, ಬರೋಬ್ಬರಿ ಶೇ.74 ರಷ್ಟುಮಳೆ ಕೊರತೆ ಉಂಟಾಗಿದೆ. ಇಷ್ಟೊಂದು ಪ್ರಮಾಣ ಮಳೆ ಕೊರತೆ ಹವಾಮಾನ ಇಲಾಖೆಯ ದಾಖಲೆಗಳಲ್ಲಿ ಇಲ್ಲ. ಈ ಮೂಲಕ 2023ರ ಆಗಸ್ಟ್‌ ತಿಂಗಳು ಶತಮಾನದ ಮಳೆ ಕೊರತೆಯ ತಿಂಗಳಾಗಿ ದಾಖಲೆ ಪುಟಕ್ಕೆ ಸೇರ್ಪಡೆಯಾಗಿದೆ.

ಹವಾಮಾನ ಇಲಾಖೆಯು 1901ರಿಂದ ದೇಶದಲ್ಲಿ ಮಳೆ ಪ್ರಮಾಣವನ್ನು ದಾಖಲು ಮಾಡುವ ಕಾರ್ಯ ಆರಂಭಿಸಿದೆ. ಈ ಪ್ರಕಾರ ಕಳೆದ 123 ವರ್ಷದ ಆಗಸ್ಟ್‌ನಲ್ಲಿ ಶೇ.74 ರಷ್ಟು ಮಳೆ ಕೊರತೆ ಉಂಟಾಗಿರುವುದು ದಾಖಲಾಗಿಲ್ಲ.
1972 ಹಾಗೂ 2016ರಲ್ಲಿ ಶೇ.43 ರಷ್ಟು ಮಳೆ ಕೊರತೆ ಉಂಟಾಗಿತ್ತು. ಇದುವೇ ಅತಿ ಹೆಚ್ಚಿನ ಮತ್ತು ಕಳೆದೊಂದು ಶತಮಾನದ ಅತ್ಯಧಿಕ ಮಳೆ ಕೊರತೆಯಾಗಿತ್ತು. ಇದೀಗ ಪ್ರಸಕ್ತ ಆಗಸ್ಟ್‌ನ ಮಳೆ ಕೊರತೆ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ ಎಂದು ಹವಾಮಾನ ತಜ್ಞರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕರ್ನಾಟಕದ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಭೀತಿ, ಹೆಚ್ಚಾದ ಆತಂಕ..!

ಬೇರೆ ತಿಂಗಳಿನಲ್ಲಿಯೂ ಇಷ್ಟೊಂದು ಕೊರತೆ ಇಲ್ಲ

ಈ ಆಗಸ್ಟ್‌ನಲ್ಲಿ ಉಂಟಾಗಿರುವ ಶೇ.74 ರಷ್ಟು ಮಳೆ ಕೊರತೆಯು ಮಳೆಗಾಲದ ಬೇರೆ ಯಾವುದೇ ತಿಂಗಳಿನಲ್ಲಿಯೂ ಇಷ್ಟೊಂದು ಪ್ರಮಾಣ ಮಳೆ ಕೊರತೆ ಉಂಟಾದ ದಾಖಲೆಗಳಿಲ್ಲ. ಹೀಗಾಗಿ, ಆಗಸ್ಟ್‌ನ ಮಳೆ ಕೊರತೆಯೂ ಸಾರ್ವಕಾಲಿಕ ದಾಖಲೆಯಾಗಿದೆ.

ಸೆಪ್ಟಂಬರ್‌ನಲ್ಲಿಯೂ ಕೊರತೆ

ಹವಾಮಾನ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ಮುನ್ಸೂಚನೆ ಪ್ರಕಾರ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಳೆನಾಡು ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರೆಯಲಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆ ಪ್ರಮಾಣದಷ್ಟು ಮಾತ್ರ ಮಳೆಯಾಗಲಿದೆ. ಹೀಗಾಗಿ, ರಾಜ್ಯದಲ್ಲಿ ಸೆಪ್ಟಂಬರ್‌ನಲ್ಲಿಲೂ ಮಳೆ ಕೊರತೆ ಮುಂದುವರೆಯಲಿದೆ.

ಮಳೆ ಕೊರತೆ ನೀಗುವುದಿಲ್ಲ

ಜೂನ್‌ನಿಂದ ಮುಂಗಾರು ಆರಂಭಗೊಂಡಿದೆ. ಈಗಾಗಲೇ ಮೂರು ತಿಂಗಳು ಪೂರ್ಣಗೊಂಡಿದ್ದು, ವಾಡಿಕೆ ಪ್ರಕಾರ ಈವರೆಗೆ ರಾಜ್ಯದಲ್ಲಿ 69.1 ಸೆಂ.ಮೀ ಮಳೆಯಾಗಬೇಕಾಗಿತ್ತು. ಆದರೆ, ಕೇವಲ 49.7 ಸೆಂ.ಮೀ ಮಳೆಯಾಗುವ ಮೂಲಕ ಶೇ.28 ರಷ್ಟುಮಳೆ ಕೊರತೆ ಎದುರಾಗಿದೆ. ಒಟ್ಟಾರೆ ಮುಂಗಾರು ಅವಧಿಯಲ್ಲಿ (ಜೂನ್‌- ಸೆಪ್ಟಂಬರ್‌) ವಾಡಿಕೆ ಪ್ರಕಾರ ಒಟ್ಟು 85.2 ಸೆಂ.ಮೀ ಮಳೆಯಾಗಬೇಕು. ಇನ್ನೊಂದು ತಿಂಗಳು (ಸೆಪ್ಟಂಬರ್‌) ಮಾತ್ರ ಮುಂಗಾರು ಇರಲಿದೆ. ಈ ಅವಧಿಯಲ್ಲಿ ವಾಡಿಕೆ ಪ್ರಕಾರ 16.1 ಸೆಂ.ಮೀ ಮಳೆಯಾಗಬೇಕಾಗಿದೆ. ಕೊರತೆ ಸರಿದೂಗಿರುವುದಕ್ಕೆ ಮುಂದಿನ 30 ದಿನದಲ್ಲಿ 35.5 ಸೆಂ.ಮೀ ಮಳೆಯಾಗಬೇಕು. ಸೆಪ್ಟಂಬರ್‌ನಲ್ಲಿ ನಿಗದಿತ ವಾಡಿಕೆ ಪ್ರಮಾಣದಷ್ಟುಮಳೆಯಾದರೂ ಮುಂಗಾರು ಅವಧಿಯ ಮಳೆ ಕೊರತೆ ನೀಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕೊರತೆ ನೀಗದಿರಲು ಕಾರಣಗಳೇನು?

ಭಾರತೀಯ ಹವಾಮಾನ ಇಲಾಖೆಯು ಸೆಪ್ಟಂಬರ್‌ ತಿಂಗಳಿನ ಮಳೆ ವರದಿ ಬಿಡುಗಡೆ ಮಾಡಿದ್ದು, ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆ ಆಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಜತೆಗೆ, ಪ್ರಸಕ್ತ ವರ್ಷವೂ ಎಲ್‌ನಿನೋ ವರ್ಷ ಇದೆ. ಇದೀಗ ಎಲ್‌ ನಿನೋ ಪ್ರಭಾವ ಹೆಚ್ಚಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಭಾರೀ ಪ್ರಮಾಣದ ಮಳೆ ಕೊರತೆ ಉಂಟಾಗಿರುವುದು ಕೇವಲ 30 ದಿನದಲ್ಲಿ ನೀಗುವಷ್ಟುಮಳೆ ಆಗುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಮುಂಗಾರು ಮಳೆಯ ಕೊರತೆ ನೀಗುವುದು ಅಸಾಧ್ಯ ಎನ್ನಲಾಗುತ್ತಿದೆ.

8.5 ಟಿಎಂಸಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ 4.5 ಟಿಎಂಸಿ ಮಾತ್ರವೇ ನೀರು ಲಭ್ಯ!

ರಾಜ್ಯದಲ್ಲಿ ಆಗಸ್ಟ್‌ನ ಮಳೆ ಕೊರತೆ ವಿವರ (ಸೆಂ.ಮೀ): ಪ್ರದೇಶ ವಾಡಿಕೆ ಮಳೆ ಸುರಿದ ಮಳೆ ಕೊರತೆ ಪ್ರಮಾಣ (ಶೇಕಡಾ)

ದಕ್ಷಿಣ ಒಳನಾಡು 8.8 2.5 ಶೇ.71
ಉತ್ತರ ಒಳನಾಡು 11.8 3.5 ಶೇ.71
ಮಲೆನಾಡು 42.38.5 ಶೇ.80
ಕರಾವಳಿ 82.3 22.9 ಶೇ.72
ಒಟ್ಟು 22.0 6.0 ಶೇ.74

ಈ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ಉಂಟಾಗಿರುವ ಶೇ.74 ರಷ್ಟುಮಳೆ ಕೊರತೆಯು ಸಾರ್ವಕಾಲಿಕ ದಾಖಲೆಯಾಗಿದೆ. ಇಷ್ಟೊಂದು ಪ್ರಮಾಣದ ಮಳೆ ಕೊರತೆಯನ್ನು ಈ ಹಿಂದೆ ಆಗಸ್ಟ್‌ ತಿಂಗಳುಗಳಲ್ಲಿ ಮತ್ತು ಇತರೆ ಯಾವುದೇ ತಿಂಗಳಿನಲ್ಲಿ ದಾಖಲಾಗಿಲ್ಲ ಎಂದು ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.