Asianet Suvarna News Asianet Suvarna News

ಕರ್ನಾಟಕದ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಭೀತಿ, ಹೆಚ್ಚಾದ ಆತಂಕ..!

ದಿನದಿಂದ ದಿನಕ್ಕೆ ಮಳೆ ಕೊರತೆ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ, ಬರ ಉದ್ಬವಿಸುವ ತಾಲೂಕುಗಳ ಪಟ್ಟಿ ದೊಡ್ಡದಾಗುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 20 ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳು ಬರದ ಪಟ್ಟಿಗೆ ಸೇರಲಿವೆ ಎಂಬ ಆತಂಕ ವ್ಯಕ್ತಪಡಿಸಿದ ತಜ್ಞರು 

Drought Fear in More than 200 Taluks of Karnataka grg
Author
First Published Aug 31, 2023, 8:03 AM IST

ವಿಶ್ವನಾಥ ಮಲೇಬೆನ್ನೂರು 

ಬೆಂಗಳೂರು(ಆ.31): ರಾಜ್ಯದಲ್ಲಿ ಬರ ಉದ್ಬವಿಸುವ 113 ತಾಲೂಕುಗಳ ಪಟ್ಟಿಯನ್ನು ಸದ್ಯ ರಾಜ್ಯ ಸರ್ಕಾರ ಸಿದ್ಧಪಡಿಸಿಕೊಂಡಿದೆ. ಆದರೆ, ರಾಜ್ಯದಲ್ಲಿ ಇದೇ ರೀತಿ ಮಳೆ ಕೊರತೆ ಮುಂದುವರೆದರೆ, ರಾಜ್ಯದ 236 ತಾಲೂಕುಗಳ ಪೈಕಿ ಶೇ.80ರಷ್ಟು ತಾಲೂಕುಗಳು ಬರ ಪೀಡಿತ ಪಟ್ಟಿಗೆ ಸೇರುವ ಆತಂಕ ವ್ಯಕ್ತವಾಗಿದೆ.

ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.20 ರಿಂದ 59 ರಷ್ಟು ಹಾಗೂ ಅದಕ್ಕಿಂತ ಹೆಚ್ಚಿನ ಮಳೆ ಕೊರತೆ ಎದುರಿಸುತ್ತಿರುವ 113 ತಾಲೂಕುಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಸಿದ್ಧಪಡಿಸಿದೆ. ಆದರೆ, ದಿನದಿಂದ ದಿನಕ್ಕೆ ಮಳೆ ಕೊರತೆ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ, ಬರ ಉದ್ಬವಿಸುವ ತಾಲೂಕುಗಳ ಪಟ್ಟಿ ದೊಡ್ಡದಾಗುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 20 ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳು ಬರದ ಪಟ್ಟಿಗೆ ಸೇರಲಿವೆ ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಶೇ.32ರಷ್ಟು ಮಳೆ ಕೊರತೆ: ಈ ವರ್ಷದ ಆಗಸ್ಟ್‌ನದ್ದು 122 ವರ್ಷಗಳಲ್ಲೇ ಭೀಕರವೆನಿಸಿದ ಬರ!

ಮುಂಗಾರು ಆರಂಭಗೊಂಡ ಜೂನ್‌ನಿಂದ ಈವರೆಗೆ ವಾಡಿಕೆ ಪ್ರಕಾರ ರಾಜ್ಯದಲ್ಲಿ 686 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ, ಈವರೆಗೆ ಕೇವಲ 496 ಮಿ.ಮೀ ನಷ್ಟುಮಳೆಯಾಗಿದ್ದು, ಶೇ.28 ರಷ್ಟುಮಳೆ ಕೊರತೆ ಉಂಟಾಗಿದೆ. 31 ಜಿಲ್ಲೆಗಳಲ್ಲಿ 19 ಜಿಲ್ಲೆಗಳು ಮಳೆ ಕೊರತೆ ಎದುರಿಸುತ್ತಿದ್ದು, ಉಳಿದ 12 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ.

ಕೊರತೆ ತಾಲೂಕು 135ಕ್ಕೆ ಏರಿಕೆ:

ಕಳೆದ ಆಗಸ್ಟ್‌ 19ಕ್ಕೆ ಕೆಎಸ್‌ಎನ್‌ಡಿಎಂಸಿ 113 ತಾಲೂಕುಗಳಲ್ಲಿ ಮಳೆ ಕೊರತೆ ಇದೆ ಎಂದು ಪಟ್ಟಿಮಾಡಿ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಆದರೆ, ಆಗಸ್ಟ್‌ 26ರ ವೇಳೆ ಮಳೆ ಕೊರತೆ ತಾಲೂಕುಗಳ ಸಂಖ್ಯೆ 135ಕ್ಕೆ ಹೆಚ್ಚಳವಾಗಿದೆ. ಸೆಪ್ಟಂಬರ್‌ನಲ್ಲಿ ಇದೇ ರೀತಿ ಮಳೆ ಕೊರತೆ ಮುಂದುವರೆದರೆ ಇನ್ನಷ್ಟುತಾಲೂಕುಗಳು ಮಳೆ ಕೊರತೆ ಪಟ್ಟಿಗೆ ಸೇರ್ಪಡೆಯಾಗಲಿವೆ.

2 ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಕೊರತೆ:

ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.20 ರಿಂದ 59 ರಷ್ಟುಮಳೆ ಕೊರತೆ ಉಂಟಾಗಿದೆ. ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಶೇ.60ಕ್ಕಿಂತ ಹೆಚ್ಚಿನ ಪ್ರಮಾಣ ಮಳೆ ಕೊರತೆ ಉಂಟಾಗಿದೆ.

ಜಂಟಿ ಸಮೀಕ್ಷೆ:

ಕಳೆದ ಸೋಮವಾರದಿಂದ ರಾಜ್ಯದಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಜಂಟಿ ಪರಿಶೀಲನೆ ಆರಂಭಿಸಲಾಗಿದೆ. ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಜಂಟಿ ಸಮೀಕ್ಷೆ ನಡೆಸಿ ಬೆಳೆ ಪರಿಸ್ಥಿತಿ ವಾಸ್ತವ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ. ಆ.31ರ ವರೆಗೆ ಅಧ್ಯಯನ ನಡೆಯಲಿದೆ. ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಲಿದೆ.

ಸದ್ಯ ಎರಡು ಮಾನದಂಡ ಆಧಾರಿಸಿ ಬೆಳೆ ವಾಸ್ತವ ಸಿದ್ಧಪಡಿಸಲಾಗುತ್ತಿದೆ. ಮೊದಲನೆಯದಾಗಿ ಶೇ.60ಕ್ಕಿಂತ ಹೆಚ್ಚಿನ ಮಳೆ ಕೊರತೆ ಇರುವ ತಾಲೂಕುಗಳು. ಎರಡನೇಯದಾಗಿ ಸತತ ಕಳೆದ ಮೂರು ವಾರಗಳದಿಂದ ಮಳೆ ಕೊರತೆ ಎದುರಿಸುತ್ತಿರುವ ತಾಲೂಕುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ:

ಬೆಳೆ ಪರಿಸ್ಥಿತಿ ವಾಸ್ತವ ವರದಿಯ ಅಂಶಗಳನ್ನು ಆಧರಿಸಿ ಬರ ತಾಲೂಕುಗಳನ್ನು ಸರ್ಕಾರ ಘೋಷಣೆ ಮಾಡಲಿದೆ. ಬಳಿಕ ಬೆಳೆ ನಷ್ಟದ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುತ್ತದೆ.

ಯಾವ ಜಿಲ್ಲೆಯ ಎಷ್ಟು ತಾಲೂಕಿನಲ್ಲಿ ಮಳೆ ಕೊರತೆ?

ಬೆಂಗಳೂರು ನಗರ 4, ಬೆಂಗಳೂರು ಗ್ರಾಮಾಂತರ 3, ರಾಮನಗರ 5, ಕೋಲಾರ 5, ಚಿಕ್ಕಬಳ್ಳಾಪುರ 6, ತುಮಕೂರು 8, ಚಿತ್ರದುರ್ಗ4, ದಾವಣಗೆರೆ 2, ಚಾಮರಾಜನಗರ 2, ಮೈಸೂರು 4, ಮಂಡ್ಯ 5, ಬಳ್ಳಾರಿ 4, ಕೊಪ್ಪಳ 5, ರಾಯಚೂರು 4, ಕಲಬುರಗಿ 3, ಬೀದರ್‌ 4, ಬೆಳಗಾವಿ 6, ಬಾಗಲಕೋಟೆ 8, ವಿಜಯಪುರ 6, ಗದಗ 2, ಹಾವೇರಿ 4, ಧಾರಾವಾಡ 1, ಯಾದಗಿರಿ 3, ವಿಜಯನಗÃ 3, ಶಿವಮೊಗ್ಗ 5, ಹಾಸನ 6, ಚಿಕ್ಕಮಗಳೂರು 7, ಕೊಡಗು 4, ದಕ್ಷಿಣ ಕನ್ನಡ 6, ಉಡುಪಿ3, ಉ. ಕನ್ನಡ 2

6 ಅಂಶ ಆಧಾರಿಸಿ ಬರ ನಿರ್ಧಾರ

1 ಮಳೆ ಕೊರತೆ
2 ಸತತ ಮೂರು ವಾರ ಮಳೆ ಕೊರತೆ
3 ಶೇ.75ಕ್ಕಿಂತ ಹೆಚ್ಚು ಕೃಷಿ ಬಿತ್ತನೆ ಕೊರತೆ
4 ಉಪಗ್ರಹ ಆಧಾರಿತ ಬೆಳೆ ಆರೋಗ್ಯ ಸೂಚ್ಯಂಕ
5 ತೇವಾಂಶ ಕೊರತೆ
6 ಅಂತರ್ಜಲ ಮಟ್ಟದ ಸೂಚ್ಯಂಕ

ರಾಜ್ಯ ಸರ್ಕಾರ ತಕ್ಷಣವೇ ಬರಗಾಲ ಘೋಷಿಸಿ: ಬಿಎಸ್‌ವೈ, ಬೊಮ್ಮಾಯಿ ಆಗ್ರಹ

ಬೆಳೆ ಪರಿಸ್ಥಿತಿ ವಾಸ್ತವ ಅಧ್ಯಯನ ಹೇಗೆ?

ಮಳೆ ಕೊರತೆ ಇರುವ ತಾಲೂಕುಗಳಲ್ಲಿ ಶೇ.10 ರಷ್ಟು ಆಯ್ದ ಗ್ರಾಮಗಳಲ್ಲಿ ಜಮೀನುಗಳಲ್ಲಿನ ಕನಿಷ್ಠ 5 ಬೆಳೆಗಳ ಬಗ್ಗೆ ಬೆಳೆ ಪರಿಸ್ಥಿತಿ ನೈಜ ಪರಿಶೀಲನೆ (ಗ್ರೌಂಡ್‌ ಟ್ರೂತ್‌ ವೆರಿಫಿಕೇಷನ್‌) ನಡೆಸುವುದು. ಅವುಗಳನ್ನು ಇ-ಆಡಳಿತ ಇಲಾಖೆ ಸಿದ್ಧಪಡಿಸಿರುವ ಆ್ಯಪ್‌ ಮೂಲಕ ಸ್ಥಳದಲ್ಲೇ ನೋಂದಣಿ ಮಾಡಲಾಗುತ್ತದೆ.

ರಾಜ್ಯದ ಮಳೆ ಕೊರತೆ ವಿವರ (ಜೂ.1 ರಿಂದ ಆ.30)
ಪ್ರದೇಶ ವಾಡಿಕೆ ಮಳೆ ಬಿದ್ದ ಮಳೆ ಶೇಕಡವಾರು ಕೊರತೆ
ದಕ್ಷಿಣ ಒಳನಾಡು 231 163 ಶೇ.30
ಉತ್ತರ ಒಳನಾಡು 334 274 ಶೇ.18
ಮಲೆನಾಡು 1369 798 ಶೇ.42
ಕರಾವಳಿ 2778 2106 ಶೇ.24
ಒಟ್ಟು ರಾಜ್ಯ 686 496 ಶೇ.28

ಯಾವ ಜಿಲ್ಲೆಯ ಎಷ್ಟು ತಾಲೂಕಿನಲ್ಲಿ ಮಳೆ ಕೊರತೆ?: ಜಿಲ್ಲೆ ಒಟ್ಟು ತಾಲೂಕು ಮಳೆ ಕೊರತೆ ತಾಲೂಕು

ಬೆಂಗಳೂರು ನಗರ 5 4
ಬೆಂಗಳೂರು ಗ್ರಾಮಾಂತರ 4 3
ರಾಮನಗರ 5 5
ಕೋಲಾರ 6 5
ಚಿಕ್ಕಬಳ್ಳಾಪುರ 6 6
ತುಮಕೂರು 10 8
ಚಿತ್ರದುರ್ಗ 6 4
ದಾವಣಗೆರೆ 6 2
ಚಾಮರಾಜನಗರ 5 2
ಮೈಸೂರು 9 4
ಮಂಡ್ಯ 7 5
ಬಳ್ಳಾರಿ 5 4
ಕೊಪ್ಪಳ 7 5
ರಾಯಚೂರು 7 4
ಕಲಬುರಗಿ 11 3
ಬೀದರ್‌ 8 4
ಬೆಳಗಾವಿ 15 6
ಬಾಗಲಕೋಟೆ 9 8
ವಿಜಯಪುರ 13 6
ಗದಗ 7 2
ಹಾವೇರಿ 8 4
ಧಾರಾವಾಡ 8 1
ಯಾದಗಿರಿ 6 3
ವಿಜಯನಗರ 6 3
ಶಿವಮೊಗ್ಗ 7 5
ಹಾಸನ 8 6
ಚಿಕ್ಕಮಗಳೂರು 9 7
ಕೊಡಗು 5 4
ದಕ್ಷಿಣ ಕನ್ನಡ 7 6
ಉಡುಪಿ 7 3
ಉತ್ತರ ಕನ್ನಡ 12 2
ಒಟ್ಟು 236 134

Follow Us:
Download App:
  • android
  • ios