ಮಳೆ ಕೊರತೆ: ಆಹಾರ ಉತ್ಪಾದನೆ ಅರ್ಧಕ್ಕರ್ಧ ಕುಸಿತ!
ರಾಜ್ಯದಲ್ಲಿ ಸಕಾಲಕ್ಕೆ ಮಳೆ ಆಗದಿರುವುದರಿಂದ ವ್ಯಾಪಕ ಬೆಳೆ ಹಾನಿ ಆಗಿದ್ದು, ಜೊತೆಗೆ ಇಳುವರಿಯೂ ಕಡಿಮೆ ಆಗುವುದರಿಂದ ಈ ವರ್ಷ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಅರ್ಧಕ್ಕೂ ಅಧಿಕ ಕುಂಠಿತವಾಗಲಿದೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ನ.06): ರಾಜ್ಯದಲ್ಲಿ ಸಕಾಲಕ್ಕೆ ಮಳೆ ಆಗದಿರುವುದರಿಂದ ವ್ಯಾಪಕ ಬೆಳೆ ಹಾನಿ ಆಗಿದ್ದು, ಜೊತೆಗೆ ಇಳುವರಿಯೂ ಕಡಿಮೆ ಆಗುವುದರಿಂದ ಈ ವರ್ಷ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಅರ್ಧಕ್ಕೂ ಅಧಿಕ ಕುಂಠಿತವಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿಯೂ ತಟ್ಟುವುದು ಬಹುತೇಕ ಖಚಿತವಾಗಿದೆ. ಪ್ರಸಕ್ತ 2023ರ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು 82.35 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಿತ್ತಾದರೂ 74.32 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಸಕಾಲಕ್ಕೆ ಮಳೆ ಆಗದೆ ಬರ ಉಂಟಾಗಿದ್ದು, ಆಹಾರ ಧಾನ್ಯಗಳ ಇಳುವರಿ ಭಾರೀ ಕುಂಠಿತವಾಗಲಿದೆ.
ಮುಂಗಾರಿನಲ್ಲಿ 96.56 ಲಕ್ಷ ಟನ್ ಏಕದಳ ಧಾನ್ಯ, 15.36 ಲಕ್ಷ ಟನ್ ದ್ವಿದಳ ಧಾನ್ಯ, 9.89 ಲಕ್ಷ ಟನ್ ಎಣ್ಣೆಕಾಳುಗಳ ಉತ್ಪಾದನೆ ಆಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿತ್ತಾದರೂ ಕೇವಲ 58 ಲಕ್ಷ ಟನ್ ಉತ್ಪಾದನೆ ಆಗುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಬಿತ್ತನೆ ಕುಂಠಿತವಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಬೆಳೆದ ಬೆಳೆಗಳು ಹಸಿರುಮಯವಾಗಿ ಕಾಣಿಸುತ್ತವೆಯಾದರೂ ಕಾಳು ಕಟ್ಟದೆ ಇಳುವರಿ ಭಾರೀ ಕಡಿಮೆಯಾಗಲಿದೆ.
ತಾನೆಷ್ಟು ದಿನ ಸಿಎಂ ಅಂತ ಸಿದ್ದರಾಮಯ್ಯಗೆ ಗೊತ್ತಿಲ್ಲ: ಪ್ರಧಾನಿ ಮೋದಿ
ಯಾವ್ಯಾವ ಬೆಳೆ ಎಷ್ಟೆಷ್ಟು ಹಾನಿ?: ಮುಂಗಾರಿನಲ್ಲಿ ಒಟ್ಟಾರೆ 43.50 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತಿದ್ದ ಬೆಳೆ ಹಾನಿ ಉಂಟಾಗಿದೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದ್ದು, ಪ್ರಮುಖವಾಗಿ 13.43 ಲಕ್ಷ ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ, 7 ಲಕ್ಷ ಹೆಕ್ಟೇರ್ ತೊಗರಿ, ತಲಾ 4 ಲಕ್ಷ ಹೆಕ್ಟೇರ್‌ನ ಹತ್ತಿ, ರಾಗಿ, 3 ಲಕ್ಷ ಹೆಕ್ಟೇರ್ ಶೇಂಗಾ, 2.15 ಲಕ್ಷ ಹೆಕ್ಟೇರ್ ಪ್ರದೇಶದ ಕಬ್ಬು, 2.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಸೋಯಾಬೀನ್ ಬೆಳೆಗೆ ಹಾನಿಯಾಗಿದೆ.
ಜಿಲ್ಲಾವಾರು ಕೃಷಿ ಸ್ಥಿತಿಗತಿ: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಭಾರೀ ಪ್ರಮಾಣದಲ್ಲಿ ಇಳುವರಿ ಕಡಿಮೆ ಆಗಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಂತೂ ರಾಗಿ, ಮೆಕ್ಕೆಜೋಳ, ಶೇಂಗಾ ಮತ್ತಿತರ ಬೆಳೆಗಳಲ್ಲಿ ಶೇ.90 ರವರೆಗೂ ಇಳುವರಿಗೆ ಹೊಡೆತ ಬಿದ್ದಿದೆ. ಆದರೆ ಈಗ ಅಲ್ಲಲ್ಲಿ ಸ್ವಲ್ಪ ಮಳೆ ಬೀಳುತ್ತಿರುವುದರಿಂದ ಇಳುವರಿ ಒಂದಷ್ಟು ಸುಧಾರಿಸುವ ಆಶಾಭಾವನೆಯಿದೆ.
ರಾಗಿ ಬೆಳೆ ರಾಮನಗರದಲ್ಲಿ ಶೇ.50ರಿಂದ 60ರಷ್ಟು ಇಳುವರಿ ಕುಂಠಿತವಾಗಿದೆ. ಕೋಲಾರದಲ್ಲಿ ಶೇ.70ರಿಂದ 80, ಚಿಕ್ಕಬಳ್ಳಾಪುರದಲ್ಲಿ ಶೇ.75 ರಿಂದ ಶೇ.90, ತುಮಕೂರು- ಶೇ.75 ರಿಂದ ಶೇ.95, ಚಿತ್ರದುರ್ಗ- ಶೇ.80 ರಿಂದ ಶೇ.85, ಚಾಮರಾಜನಗರ, ಹಾಸನ - ಶೇ.80 ರಿಂದ ಶೇ.90, ಮೈಸೂರು- ಶೇ.80 ರಿಂದ ಶೇ.85, ಮಂಡ್ಯ- 70 ರಿಂದ 90, ವಿಜಯಪುರದಲ್ಲಿ ಶೇ.60 ರಿಂದ ಶೇ.74 ರಷ್ಟು ಹೊಡೆತ ಬಿದ್ದಿದೆ.
ಮೆಕ್ಕಜೋಳದ ವಿಷಯಕ್ಕೆ ಬಂದರೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.80ರಿಂದ 90ರಷ್ಟು ಇಳುವರಿ ಕಡಿಮೆಯಾಗಿದೆ. ಚಿಕ್ಕಬಳ್ಳಾಪುರ-ಶೇ.78ರಿಂದ ಶೇ.90, ತುಮಕೂರು- ಶೇ.70ರಿಂದ ಶೇ.75, ಚಿತ್ರದುರ್ಗ, ವಿಜಯಪುರ, ಗದಗ, ಶಿವಮೊಗ್ಗ, ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಯಲ್ಲಿ ಶೇ.60ರಿಂದ 80 ರವರೆಗೂ ಇಳುವರಿ ಕೈಕೊಟ್ಟಿದೆ.
ಶೇಂಗಾ ಇಳುವರಿಯೂ ಗಣನೀಯವಾಗಿ ಕಡಿಮೆಯಾಗಿದ್ದು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಪ್ಪಳ, ವಿಜಯಪುರ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಶೇ.60ರಿಂದ 80ರವೆಗೂ ಇಳುವರಿ ಕುಂಠಿತವಾಗಿದೆ. ತುಮಕೂರು, ಬೆಳಗಾವಿ ಮತ್ತಿತರ ಜಿಲ್ಲೆಗಳಲ್ಲಿ ತೊಗರಿ ಇಳುವರಿಗೆ ಸಾಕಷ್ಟು ಹೊಡೆತ ಬಿದ್ದಿದೆ. ಮೈಸೂರು, ಚಾಮರಾಜನಗರ, ರಾಯಚೂರು, ಕಲಬುರಗಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಹತ್ತಿ ಇಳುವರಿ ಅರ್ಧಕ್ಕರ್ಧ ಕಡಿಮೆಯಾಗಿದೆ.
ಇನ್ನುಳಿದಂತೆ ಮೈಸೂರು ಜಿಲ್ಲೆಯಲ್ಲಿ ದ್ವಿದಳ ಧಾನ್ಯ, ಬಳ್ಳಾರಿಯಲ್ಲಿ ಸಿರಿಧಾನ್ಯ, ಕೊಪ್ಪಳದಲ್ಲಿ ಮೆಣಸಿನಕಾಯಿ, ಈರುಳ್ಳಿ, ಸೂರ್ಯಕಾಂತಿ ಇಳುವರಿ ಕುಂಠಿತವಾಗುವ ಅಂದಾಜಿದೆ. ಮಂಡ್ಯ, ಕಲಬುರಗಿ, ಬಾಗಲಕೋಟೆ, ಉತ್ತರ ಕನ್ನಡದಲ್ಲಿ ಕಬ್ಬು ಹಾಗೂ ಚಿಕ್ಕಮಗಳೂರು, ಮಂಡ್ಯ, ರಾಯಚೂರು, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತದ ಇಳುವರಿ ಕಡಿಮೆಯಾಗುವ ನಿರೀಕ್ಷೆ ಇದೆ. ಇದೆಲ್ಲವನ್ನೂ ಸಮಗ್ರವಾಗಿ ಪರಾಮರ್ಶಿಸಿದರೆ ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂದು ತಜ್ಞರು ಖಚಿತಪಡಿಸಿದ್ದಾರೆ.
ಆಗಸ್ಟ್ ಮಳೆಯ ಕೊರತೆಯೇ ಕಾರಣ: ಆಗಸ್ಟ್ ಮಾಹೆಯಲ್ಲಿ ರಾಜ್ಯದಲ್ಲಿ ಉಂಟಾದ ಮಳೆಯ ಕೊರತೆಯು ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದೇ ಇಳುವರಿ ಕುಂಠಿತವಾಗಲು ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ವಾಡಿಕೆಯ 220 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 60 ಮಿ.ಮೀ. ಮಾತ್ರ ವರುಣಾಗಮನವಾಗಿದ್ದು, ಶೇ.73ರಷ್ಟು ಕೊರತೆ ಉಂಟಾಗಿತ್ತು. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಶೇ.-71 ಮತ್ತು ಮಲೆನಾಡು ಭಾಗದಲ್ಲೇ ಶೇ.-80 ಮಳೆ ಅಭಾವ ಕಂಡುಬಂದಿತ್ತು.
ಧಾರವಾಡಕ್ಕೆ ಲಾಡ್ ಓಡಾಟ ಯಾಕೆ ಜಾಸ್ತಿಯಾಗಿದೆ?: ಮೇಯರ್ ಫೋನ್ ಇನ್‌ಗೆ ಕಮಿಷನರ್ ಬೀಗ!
ಮುಂಗಾರು ಹಂಗಾಮಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುರಿಯುವ ಮಳೆಯು ಬಿತ್ತನೆ, ಬೆಳೆಗಳ ಸರಿಯಾದ ಬೆಳವಣಿಗೆ ಪೂರಕವಾಗಿರುತ್ತದೆ. ಆದರೆ ಈ ಬಾರಿ ಆಗಸ್ಟ್ ಮಾಹೆಯಲ್ಲೇ ಮಳೆ ಕೈಕೊಟ್ಟು ಬರ ಉಂಟಾಗಿದೆ. ಕೃಷಿ ಇಲಾಖೆಯ ಮನವಿಯ ಮೇರೆಗೆ ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳು ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ಕೈಗೊಂಡಿದ್ದು, ಇಳುವರಿ ನಿಕೃಷ್ಟ ಆಗುವುದನ್ನು ಅಂಕಿ ಅಂಶಗಳು ಬಹಿರಂಗಗೊಳಿಸಿವೆ. ಸೆ.15 ರವರೆಗೂ ರಾಜ್ಯದ 31 ಜಿಲ್ಲೆಯಲ್ಲಿ ಬೆಳೆಗಳ ವಿಸ್ತೀರ್ಣ, ಪ್ರಸ್ತುತ ಸ್ಥಿತಿಗತಿ, ನಿರೀಕ್ಷಿತ ಇಳುವರಿ ಮತ್ತಿತರ ಅಂಶಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದ್ದು ಇಳುವರಿ ಕುಂಠಿತವಾಗುವುದನ್ನು ಬೊಟ್ಟು ಮಾಡಲಾಗಿದೆ.