ತಾನೆಷ್ಟು ದಿನ ಸಿಎಂ ಅಂತ ಸಿದ್ದರಾಮಯ್ಯಗೆ ಗೊತ್ತಿಲ್ಲ: ಪ್ರಧಾನಿ ಮೋದಿ
ಆರು ತಿಂಗಳ ಹಿಂದೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆ ರಾಜ್ಯವನ್ನೇ ಹಾಳು ಮಾಡಿದೆ. ಅಲ್ಲೀಗ ಅಭಿವೃದ್ಧಿ ಕೆಲಸಗಳು ನಿಂತುಹೋಗಿವೆ. ಅಲ್ಲಿನ ಮುಖ್ಯಮಂತ್ರಿಗೆ ತಾನು ರಾಜ್ಯವನ್ನು ಎಷ್ಟು ದಿನ ಮುನ್ನಡೆಸುತ್ತೇನೆ ಎಂಬುದೇ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.
ಖಂಡ್ವಾ (ಮ.ಪ್ರ.) (ನ.06): ಆರು ತಿಂಗಳ ಹಿಂದೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆ ರಾಜ್ಯವನ್ನೇ ಹಾಳು ಮಾಡಿದೆ. ಅಲ್ಲೀಗ ಅಭಿವೃದ್ಧಿ ಕೆಲಸಗಳು ನಿಂತುಹೋಗಿವೆ. ಅಲ್ಲಿನ ಮುಖ್ಯಮಂತ್ರಿಗೆ ತಾನು ರಾಜ್ಯವನ್ನು ಎಷ್ಟು ದಿನ ಮುನ್ನಡೆಸುತ್ತೇನೆ ಎಂಬುದೇ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಕರ್ನಾಟಕವನ್ನು ಲೂಟಿ ಹೊಡೆಯಲು ಮುಖ್ಯಮಂತ್ರಿ- ಉಪಮುಖ್ಯಮಂತ್ರಿ ನಡುವೆ ಪೈಪೋಟಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದ ಹೇಳಿಕೆಗಳು ಕೋಲಾಹಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಸಚಿವರ ಸಭೆ ನಡೆಸಿ, ಪಕ್ಷ ಹಾಗೂ ಸರ್ಕಾರಕ್ಕೆ ಡ್ಯಾಮೇಜ್ ಆಗುವಂತಹ ಹೇಳಿಕೆಗಳನ್ನು ನೀಡದಂತೆ ಕಾಂಗ್ರೆಸ್ಸಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರವಷ್ಟೇ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಭಾನುವಾರ ಮಧ್ಯಪ್ರದೇಶದ ಖಂಡ್ವಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಪಕ್ಷ ಎಡವಟ್ಟಿನಿಂದ ಯಾವಾಗೆಲ್ಲಾ ಸರ್ಕಾರ ರಚನೆ ಮಾಡುತ್ತದೋ, ಆಗೆಲ್ಲಾ ಅಧಿಕಾರಕ್ಕೇರಿದ ರಾಜ್ಯವನ್ನು ಲೂಟಿ ಮಾಡಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ಪೈಪೋಟಿ ಏರ್ಪಡುತ್ತದೆ. ಅಂತಹ ಸುದ್ದಿ ಇದೀಗ ಕರ್ನಾಟಕದಿಂದ ನಿಯಮಿತವಾಗಿ ಬರುತ್ತಿದೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು: ಕೆ.ಎಸ್.ಈಶ್ವರಪ್ಪ
ಅಧಿಕಾರ ಹಿಡಿದ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸಿ, ಆ ರಾಜ್ಯವನ್ನು ಹಾಳು ಮಾಡುವ ಕಾರ್ಯದಲ್ಲಿ ಕಾಂಗ್ರೆಸ್ ತೊಡಗುತ್ತದೆ. ಒಳಜಗಳದಲ್ಲಿ ಮುಳುಗುತ್ತದೆ. ಜನರಿಗೆ ನೀಡಲು ಅವರ ಬಳಿ ಸಮಯವೇ ಇರುವುದಿಲ್ಲ. ಇದೇ ಕಾಂಗ್ರೆಸ್ಸಿನ ಸಂಸ್ಕೃತಿ. ಒಳಜಗಳ ಮುಂದುವರಿದಾಗ, ದೆಹಲಿಯಲ್ಲಿ ಕುಳಿತಿರುವ ನ್ಯಾಯಾಧೀಶರು ಇತ್ಯರ್ಥ ಮಾಡಿ, ಅಂಗಡಿ ನಡೆಸಲು ಹೇಳುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ವಿರುದ್ಧ ಹರಿಹಾಯ್ದರು.
ಮಧ್ಯಪ್ರದೇಶದ ಜನರು ಬೇರೆ ರಾಜ್ಯಗಳಿಂದ ಈ ವಿಷಯವನ್ನು ತಿಳಿದುಕೊಳ್ಳಬೇಕು. ಸಮಾಜವನ್ನು ವಿಭಜಿಸುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ, ಸಿದ್ದರಾಮಯ್ಯಗೆ 2.5 ವರ್ಷ ಹಾಗೂ ಡಿಕೆಶಿಗೆ 2.5 ವರ್ಷ ಸಿಎಂ ಹುದ್ದೆ ಲಭಿಸಲಿದೆ ಎಂಬ ಮಾತುಗಳು ಆ ಪಕ್ಷದಲ್ಲೇ ನಡೆಯುತ್ತಿವೆ. ಆದರೆ ಸಿಎಂ ಬದಲಾವಣೆ ಕುರಿತು ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸುತ್ತಾ ಬಂದಿದ್ದಾರೆ.
ರಾಜಸ್ಥಾನ ಬಗ್ಗೆಯೂ ಕಿಡಿ: ರಾಜಸ್ಥಾನದಲ್ಲಿ ಬಹುಮತ ಪಡೆದ ಬಳಿಕವೂ ನಾಲ್ಕೂವರೆ ವರ್ಷಗಳಿಂದ ಪ್ರತಿದಿನ 24 ತಾಸುಗಳ ಕಾಲ ಎರಡು ಗುಂಪುಗಳು ಕಿತ್ತಾಟದಲ್ಲಿ ತೊಡಗಿವೆ. ಮಾಫಿಯಾರಾಜ್, ಭ್ರಷ್ಟಾಚಾರ, ಲೂಟಿಗೆ ಕಾಂಗ್ರೆಸ್ ಉತ್ತೇಜನ ನೀಡುತ್ತದೆ ಎಂದು ಕಿಡಿಕಾರಿದ ಮೋದಿ ಅವರು, ರಾಜಸ್ಥಾನದಲ್ಲಿ ಒಬ್ಬ ವ್ಯಕ್ತಿಯ ಕುತ್ತಿಗೆ ಸೀಳಿ ಸಂಭ್ರಮಾಚರಣೆ ಮಾಡುವುದು ಕಲ್ಪನೆಗೂ ಮೀರಿದ್ದು. ಇದು ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ನಡೆದಿದೆ ಎನ್ನುವ ಮೂಲಕ ರಾಜಸ್ಥಾನದ ಕನ್ಹಯ್ಯಲಾಲ್ ಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿದರು.
ಜಾತಿ ಗಣತಿ ವರದಿ ಬಿಡುಗಡೆ ಮಾಡ್ತೀರಾ ಇಲ್ವಾ?: ಕೆ.ಎಸ್.ಈಶ್ವರಪ್ಪ
ಮೋದಿ ಹೇಳಿದ್ದೇನು?
- ಕಾಂಗ್ರೆಸ್ ತಾನು ಅಧಿಕಾರಕ್ಕೇರುವ ರಾಜ್ಯವನ್ನು ಹಾಳು ಮಾಡುವ ಕೆಲಸ ಮಾಡುತ್ತದೆ
- ಅಧಿಕಾರ ಹಿಡಿದ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸಿ ಒಳಜಗಳದಲ್ಲಿ ಮುಳುಗುತ್ತದೆ
- ಜನರ ಸಮಸ್ಯೆ ಆಲಿಸಲು ಕಾಂಗ್ರೆಸ್ ನಾಯಕರಿಗೆ ಸಮಯವೇ ಇರುವುದಿಲ್ಲ
- ರಾಜ್ಯವನ್ನು ಲೂಟಿ ಮಾಡಲು ಸಿಎಂ-ಡಿಸಿಎಂ ನಡುವೆ ಪೈಪೋಟಿ ಏರ್ಪಡುತ್ತದೆ
- ಅಂತಹ ಸುದ್ದಿ ಇದೀಗ ಕರ್ನಾಟಕದಿಂದ ನಿಯಮಿತವಾಗಿ ಬರುತ್ತಲೇ ಇದೆ
- ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಹಾಳು ಮಾಡಿದೆ, ಅಲ್ಲಿ ಅಭಿವೃದ್ಧಿಯೇ ನಿಂತಿದೆ
- ಒಳಜಗಳ ಮುಂದುವರಿದಾಗ ದೆಹಲಿ ನ್ಯಾಯಾಧೀಶರು ಇತ್ಯರ್ಥಪಡಿಸುತ್ತಾರೆ
- ಅಂಗಡಿ ಮುಂದುವರಿಸಿಕೊಂಡು ಹೋಗಲು ಸೂಚಿಸುತ್ತಾರೆ. ಇದೇ ಅಲ್ಲಿನ ಸಂಸ್ಕೃತಿ
- ಮಧ್ಯಪ್ರದೇಶದ ಜನರು ಇಂತಹ ವಿಷಯಗಳನ್ನು ವಿವಿಧ ರಾಜ್ಯಗಳಿಂದ ತಿಳಿಯಬೇಕು
- ಸಮಾಜವನ್ನು ವಿಭಜಿಸುವ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಪ್ರಧಾನಿ