ರಾಜ್ಯದಲ್ಲಿ ಬಸ್‌ ಇದ್ದರೂ ಪ್ರಯಾಣಿಕರೇ ಬರ್ತಿಲ್ಲ..!

*  ಪ್ರಯಾಣಿಕರಿಗಾಗಿ ಕಾದು ನಿಂತ ಚಾಲಕ, ನಿರ್ವಾಹಕರು
* ಮಂಗಳವಾರ ರಾಜ್ಯಾದ್ಯಂತ 1700 ಕೆಎಸ್ಸಾರ್ಟಿಸಿ ಬಸ್‌ ಸಂಚಾರ
* ತೆಲಂಗಾಣಕ್ಕೆ ಬಸ್‌ ಓಡಲಿಲ್ಲ
 

Lack of Passengers to KSRTC Buses on Karnataka on June 22nd grg

ಬೆಂಗಳೂರು(ಜೂ.23): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ವು ಮಂಗಳವಾರ ರಾಜ್ಯದಲ್ಲಿ ಪ್ರಯಾಣಿಕರ ಕೊರತೆ ನಡುವೆ ಸುಮಾರು 1,700 ಬಸ್‌ ಕಾರ್ಯಾಚರಣೆ ಮಾಡಿದೆ.

ಅನ್‌ಲಾಕ್‌ ಹಿನ್ನೆಲೆಯಲ್ಲಿ ಸೋಮವಾರವಷ್ಟೇ ಬಸ್‌ ಸೇವೆ ಪುನರಾರಂಭಿಸಿದ್ದ ಕೆಎಸ್‌ಆರ್‌ಟಿಸಿ ಎರಡನೇ ದಿನವೂ ಪ್ರಯಾಣಿಕರ ಕೊರತೆ ಎದುರಿಸಿತು. ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಹೊರತಾಗಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಬಸ್‌ಗಳು ಸಂಚರಿಸಿದವು. ಆದರೆ, ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. ಬೆಳಗ್ಗೆ ಹಾಗೂ ಸಂಜೆಯ ಪೀಕ್‌ ಅವರ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಕೊಂಚ ಹೆಚ್ಚಾಗಿತ್ತು. ಉಳಿದಂತೆ ಬಸ್‌ಗಳಲ್ಲಿ ಬೆರಳೆಣಿಕೆ ಸಂಖ್ಯೆಯ ಪ್ರಯಾಣಿಕರು ಸಂಚರಿಸಿದರು.

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಮೈಸೂರು ರಸ್ತೆಯ ಸ್ಯಾಟಲೆಟ್‌ ಬಸ್‌ ನಿಲ್ದಾಣಗಳಲ್ಲಿ ಬೆಳಗ್ಗೆ ಹತ್ತು ಗಂಟೆ ಬಳಿಕ ಬಸ್‌ ಚಾಲಕರು ಪ್ರಯಾಣಿಕರಿಗಾಗಿ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು. ಸದಾ ಪ್ರಯಾಣಿಕರ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಈ ಎರಡೂ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀವ್ರ ಕುಸಿದಿತ್ತು. ಮಧ್ಯಾಹ್ನ ಪ್ರಯಾಣಿಕರ ಸಂಖ್ಯೆಗಿಂತ ಬಸ್‌ಗಳ ಸಂಖ್ಯೆಯೇ ಹೆಚ್ಚಿತ್ತು. ಸೋಮವಾರವೂ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. ಮಂಗಳವಾರವೂ ಅದೇ ಸ್ಥಿತಿ ಮುಂದುವರಿದಿತ್ತು.

ಬಸ್ ಸಂಚಾರ ಆರಂಭ: ಪ್ರಯಾಣಿಕರನ್ನು ಕೂಗಿ ಕೂಗಿ ಕರೆಯುತ್ತಿರುವ ಸಾರಿಗೆ ಸಿಬ್ಬಂದಿ..!

ಸೋಮವಾರ 1.10 ಲಕ್ಷ ಮಂದಿ ಪ್ರಯಾಣ:

ಬಸ್‌ ಸೇವೆ ಪುನರಾರಂಭದ ಮೊದಲ ದಿನ ಕೆಎಸ್‌ಆರ್‌ಟಿಸಿ ರಾಜ್ಯದಲ್ಲಿ 1,810 ಬಸ್‌ ಕಾರ್ಯಾಚರಣೆ ಮಾಡಿದ್ದು, ಸುಮಾರು 1.10 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಆದರೆ, ಮಂಗಳವಾರ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

ತೆಲಂಗಾಣಕ್ಕೆ ಬಸ್‌ ಓಡಲಿಲ್ಲ!:

ಕೆಎಸ್‌ಆರ್‌ಟಿಸಿ ಮಂಗಳವಾರ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಅಂತರ್‌ ರಾಜ್ಯ ಬಸ್‌ ಸೇವೆ ಪುನಾರಂಭಿಸಿತು. ಆದರೆ, ತೆಲಂಗಾಣಕ್ಕೆ ತೆರಳಲು ಪ್ರಯಾಣಿಕರೇ ಬಾರದಿದ್ದ ಹಿನ್ನೆಲೆಯಲ್ಲಿ ಒಂದೇ ಒಂದೂ ಬಸ್‌ ಕಾರ್ಯಾಚರಣೆ ಮಾಡಲಿಲ್ಲ. ಆದರೆ, ಅಂಧ್ರಪ್ರದೇಶದ ವಿವಿಧೆಡೆಗೆ ತೆರಳಲು ಪ್ರಯಾಣಿಕರು ಮುಂದಾಗಿದ್ದರಿಂದ 63 ಬಸ್‌ ಕಾರ್ಯಾಚರಣೆ ಮಾಡಲಾಯಿತು.
 

Latest Videos
Follow Us:
Download App:
  • android
  • ios