ಬೆಂಗಳೂರು(ಫೆ.19): ಮೈಸೂರು, ತುಮಕೂರು, ಮಂಡ್ಯ, ಚಿತ್ರದುರ್ಗ, ಧಾರವಾಡ, ಹಾವೇರಿ, ಕೊಪ್ಪಳ, ಗದಗ, ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಗುರುವಾರ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಅಕಾಲಿಕವಾಗಿ ಸುರಿದ ದಿಢೀರ್‌ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.

ಖಾನಾಪುರದಲ್ಲಿ ಯುವಕ ಬಲಿ:

ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕು ಅಸು ಗ್ರಾಮದ ಗುರುನಾಥ ಪಾಂಡುರಂಗ ನಾರ್ವೇಕರ್‌ (20) ಮೃತ ಯುವಕ. ಇಟ್ಟಿಗೆ ನಿರ್ಮಾಣ ಕಾರ್ಯಕ್ಕಾಗಿ ತನ್ನ ಕುಟುಂಬದೊಂದಿಗೆ ಗುರುನಾಥ ನಿಡಗಲ… ಗ್ರಾಮಕ್ಕೆ ಆಗಮಿಸಿದ್ದ. ಗುರುವಾರ ಸಂಜೆ ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ತಾವು ನಿರ್ಮಿಸುತ್ತಿದ್ದ ಇಟ್ಟಿಗೆ ಪೆಟ್ಟಿಗೆಗೆ ಪ್ಲಾಸ್ಟಿಕ್‌ ಚೀಲ ಹೊದಿಸುವಾಗ ಸಿಡಿಲು ಬಡಿದು ಗುರುನಾಥ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಅಕಾಲಿಕ ಮಳೆ: ಅಪಾರ ಬೆಳೆ ನಷ್ಟ

ಧಾರವಾಡ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ನವಲಗುಂದ, ಕಲಘಟಗಿ ಸೇರಿದಂತೆ ಹಲವೆಡೆ ಸಂಜೆ 7ರ ವೇಳೆಗೆ ಆರಂಭಗೊಂಡ ಮಳೆ ಸುಮಾರು ಮುಕ್ಕಾಲು ತಾಸು ಆರ್ಭಟಿಸಿತು. ಹಾವೇರಿ ಜಿಲ್ಲೆಯ ಹಾವೇರಿ, ಹಿರೇಕೆರೂರು, ಬ್ಯಾಡಗಿ, ಹಾನಗಲ್‌, ರಾಣಿಬೆನ್ನೂರಲ್ಲಿ ಆಲಿಕಲ್ಲು ಮಳೆಯಾದರೆ, ಗದಗ, ಮುಂಡರಗಿ, ಲಕ್ಷ್ಮೇಶ್ವರ, ಕೊಪ್ಪಳ, ಕನಕಗಿರಿ, ಗಂಗಾವತಿ, ಬಳ್ಳಾರಿ ಜಿಲ್ಲೆಯ ಹೂವನಹಡಗಲಿ, ಹಗರಿಬೊಮ್ಮನಹಳ್ಳಿಯಲ್ಲೂ ಭರ್ಜರಿ ಮಳೆ ಆಗಿದೆ.

ತೆಂಗಿನ ಮರಕ್ಕೆ ಸಿಡಿಲು:

ಕುಂದಾ ನಗರಿ ಬೆಳಗಾವಿಯಲ್ಲಿ ಮಧ್ಯಾಹ್ನ 3ರ ವೇಳೆಗೆ ಆರಂಭಗೊಂಡ ಮಳೆ ತಂಪೆರೆದಿದ್ದು, ನಗರದಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿ ಉರಿದ ಬಗ್ಗೆ ವರದಿಯಾಗಿದೆ. ಬಾಗಲಕೋಟೆ, ಮಂಡ್ಯ, ತುಮಕೂರು, ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ತುಂತುರು ಮಳೆಯಾಗಿದ್ದು, ಚಿತ್ರದುರ್ಗದ ಹೊಸದುರ್ಗದಲ್ಲಿ ಗುಡುಗು ಸಹಿತ, ಆಲಿಕಲ್ಲು ಮಳೆಯಾಗಿದೆ.