ಮೈಸೂರು[ಫೆ.19]: ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರಗಳ ಸಂಗಮ ಸ್ಥಳ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ ಮಹಾಕುಂಭಮೇಳದ 2ನೇ ದಿನವಾದ ಸೋಮವಾರದಂದು ಸಹಸ್ರಾರು ಭಕ್ತರು ಪುಣ್ಯಸ್ನಾನ ಮಾಡಿದರು. ಒಂದೆಡೆ ಶೈವ ಪರಂಪರೆಯ ಅಗಸ್ತ್ಯೇಶ್ವರ, ಮತ್ತೊಂದೆಡೆ ವಿಷ್ಣು ಪರಂಪರೆಯ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ ತಟದ ಈ ಕ್ಷೇತ್ರಕ್ಕೆ ಭೇಟಿ ನೀಡಿ ಭಕ್ತರು ಮಾಘ ಸ್ನಾನ ಮುಗಿಸಿ, ಎರಡೂ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಬೆಳಗ್ಗೆ 6 ಗಂಟೆಗೆ ಮಾಘಶುದ್ಧ ಚತುರ್ದಶಿ ಆಶ್ಲೇಷ ನಕ್ಷತ್ರ, ಪುಣ್ಯಾಹದಂದು ನವಗ್ರಹಪೂಜೆ, ಜಪ, ನವಗ್ರಹ ಹೋಮ ನೆರವೇರಿತು. ಸಂಜೆ 3.45ರ ಸುಮಾರಿಗೆ ಸುದರ್ಶನ ಪೂಜೆ, ಹೋಮ ನಡೆಯಿತು. ಬಳಿಕ ಕುಂಭಮೇಳದಲ್ಲಿ ಪಾಲ್ಗೊಂಡ ವಿವಿಧ ಯತಿಗಳು ಗುಂಜಾನರಸಿಂಹಸ್ವಾಮಿ ದೇವಸ್ಥಾನದಿಂದ ತ್ರಿವೇಣಿ ಸಂಗಮದವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಮಂಗಳವಾದ್ಯ, ಕಂಸಾಳೆ, ಪೂಜಾ ಕುಣಿತ, ವೀರಗಾಸೆ, ಭಜನಾ ತಂಡ, ಕೊಂಬು, ಕಹಳೆ, ಗಾರುಡಿ ಕುಣಿತ, ಕೋಲಾಟ, ವೀರಮಕ್ಕಳ ಕುಣಿತದ ಕಲಾವಿದರು ಪಾಲ್ಗೊಂಡು ರಂಗುತುಂಬಿದರು. ವಿವಿಧ ವೇದಿಕೆಗಳಲ್ಲಿ ಕಲಾವಿದರು, ನೃತ್ಯ, ಸಂಗೀತ ಮತ್ತು ನಾಟಕ ಪ್ರದರ್ಶನ ನೀಡಿದರು.

ಎಲ್ಲ ವ್ಯವಸ್ಥೆಯೂ ಅಚ್ಚುಕಟ್ಟು:

ಪೊಲೀಸರ ಬಿಗಿ ಬಂದೋಬಸ್ತ್, ಮೂರ್ನಾಲ್ಕು ಕಡೆ ಸ್ನಾನ ಮಾಡಲು ಅವಕಾಶ ಕಲ್ಪಿಸಿದ್ದರಿಂದ ಯಾವುದೇ ನೂಕುನುಗ್ಗಲು ಉಂಟಾಗಲಿಲ್ಲ. ಒಂದೆಡೆ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ, ಮತ್ತೊಂದೆಡ ಅಗಸ್ತ್ಯೇಶ್ವರ ದೇವಸ್ಥಾನದ ಬಳಿ ಹಾಗೂ ನದಿ ಆಚೆಯ ಭಿಕ್ಷೇಶ್ವರ ಗದ್ದುಗೆಯ ಬಳಿ ಸಾರ್ವಜನಿಕರು ಸ್ನಾನ ಮಾಡಲು ಅನುಕೂಲವಾಗು ವಂತೆ ನೀರನ್ನು ತಡೆದು ನಿಲ್ಲಿಸಲಾಗಿತ್ತು.

ಕರ್ನಾಟಕದ ಬೆಂಗಳೂರು, ಬೆಳಗಾವಿ, ಕೊಪ್ಪಳ, ರಾಯಚೂರು, ಗದಗ, ಶಿವಮೊಗ್ಗ, ದಾವಣಗೆರೆ ಮತ್ತು ಜಿಲ್ಲೆಯ ಸುತ್ತಮುತ್ತಲ ಗ್ರಾಮಸ್ಥರು, ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಅತಿ ಹೆಚ್ಚು ಮಂದಿ ಭಕ್ತರು ಭೇಟಿ ನೀಡಿದ್ದರು. ಬೆಳಗ್ಗೆ ವಿರಳವಾಗಿದ್ದ ಪ್ರವಾಸಿಗರ ಸಂಖ್ಯೆ ಮಧ್ಯಾಹ್ನದ ವೇಳೆ ಹೆಚ್ಚಾಗಿತ್ತು. ನದಿಯಲ್ಲಿ ಯಾರಾದರೂ ಮುಳುಗಿದರೆ ರಕ್ಷಿಸಲು ಭಾರತೀಯ ಸೇನೆಯ ಐವರು ಯೋಧರು ಬೋಟ್ ನಲ್ಲಿ ಸಿದ್ಧವಾಗಿದ್ದರು. ಅಲ್ಲದೆ ನುರಿತ ೪೨ ಮಂದಿ ಈಜುಗಾರರು ಇದ್ದರು. ಬೆಳಗಿನ ಧಾರ್ಮಿಕ ಸಭೆಯಲ್ಲಿ ಆದಿಚುಂಚನಗಿರಿ ಶಾಖಾ ಮಠದ ಸೋಮನಾಥಸ್ವಾಮೀಜಿ, ಬೆಂಗಳೂರಿನ ಓಂಕಾರ ಆಶ್ರಮದ ಮಧುಸೂದನಾಂದಪುರಿ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಷಡಕ್ಷರಿ ಸ್ವಾಮೀಜಿ, ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಪ್ರಯಾಗ ರೀತಿ ದಕ್ಷಿಣ ಕುಂಭಮೇಳ ಕ್ಷೇತ್ರ ಅಭಿವೃದ್ಧಿ: ಎಚ್‌ಡಿ

ಉತ್ತರ ಭಾರತದ ಪ್ರಯಾಗದ ಮಾದರಿಯಲ್ಲಿ ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ತಿಳಿಸಿದರು. ಕ್ಷೇತ್ರದಲ್ಲಿ ನಡೆಯುತ್ತಿರುವ 11 ನೇ ಕುಂಭಮೇಳದ ಗಂಗಾ ಪೂಜೆ ಹಾಗೂ ದೀಪಾರತಿ ಕಾರ್ಯ ಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇಲ್ಲಿನ ಕುಂಭಮೇಳ ಉತ್ತರ ಭಾರತ ನಗರಗಳಲ್ಲಿ ನಡೆಯುವ ರೀತಿಯಲ್ಲೇ ಪ್ರಸಿದ್ಧಿಯಾಗ ಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಚಿಂತನೆ ಮಾಡುವುದಾಗಿ ಹೇಳಿದರು.

-ಮಹೇಂದ್ರ ದೇವನೂರು