ನವದೆಹಲಿ[ಜ.21]: ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಮತ್ತು ಪೇಪರ್‌ ಕಪ್‌ಗಳ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಿಂದ ಕುಲ್ಹಾಡ್ಸ್‌ (ಮಣ್ಣಿನ ಕಪ್‌)ಗಳನ್ನು ಮರು ಪರಿಚಯಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್‌ ಯಾದವ್‌ 15 ವರ್ಷಗಳ ಹಿಂದೆ ರೈಲಿನಲ್ಲಿ ಟೀ ಹಾಗೂ ಕಾಫಿಯನ್ನು ಮಣ್ಣಿನ ಕಪ್‌ಗಳಲ್ಲಿ ನೀಡುವುದನ್ನು ಪರಿಚಯಿಸಿದ್ದರು.

ವಾರಾಣಸಿ ಹಾಗೂ ರಾಯ್‌ಬರೇಲಿ ನಿಲ್ದಾಣಗಳಲ್ಲಿ ಟೆರಾಕೋಟಾ ಲೇಪಿತ ಮಣ್ಣಿನ ಕಪ್‌ಗಳು, ಲೋಟ ಹಾಗೂ ಪ್ಲೇಟ್‌ಗಳನ್ನು ಪರಿಚಯಿಸುವಂತೆ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಸೂಚಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತಾಜಾತನದ ಅನುಭವ ದೊರೆಯುವುದರ ಜೊತೆಗೆ ಕುಂಬಾರರಿಗೆ ಉತ್ತಮ ಮಾರುಕಟ್ಟೆಲಭ್ಯವಾಗಲಿದೆ.

ವಾರಾಣಸಿ ಹಾಗೂ ರಾಯ್‌ ಬರೇಲಿ ರೈಲ್ವೆ ನಿಲ್ದಾಣಗಳಲ್ಲಿ ಸ್ಥಳೀಯವಾಗಿ ಉತ್ಪಾದಿಸಿದ ಮತ್ತು ಪರಿಸರ ಸ್ನೇಹಿ ಟೆರಾಕೋಟಾ ಲೇಪಿತ ಮಣ್ಣಿನ ಕಪ್‌, ಲೋಟಾ ಮತ್ತು ಪ್ಲೇಟ್‌ಗಳು ಪ್ರಯಾಣಿಕರಿಗೆ ಲಭ್ಯವಾಗುವುದನ್ನು ಖಾತರಿಪಡಿಸಿಕೊಳ್ಳುವಂತೆ ರೈಲ್ವೆ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.