ಬೆಂಗಳೂರು (ಅ.12):  ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ತನ್ನ ‘ಪ್ರವಾಸಿ ಪ್ಯಾಕೇಜ್‌’ಗಳನ್ನು ಪುನಾರಂಭಿಸಿದೆ. ದೇಶದ ಪ್ರಸಿದ್ಧ ಪ್ರವಾಸಿ ತಾಣಗಳು, ಪಾರಂಪರಿಕ ಸ್ಥಳಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುವವರಿಗೆ ಇನ್ನುಮುಂದೆ ಕೆಎಸ್‌ಟಿಡಿಸಿ ಸೇವೆ ಸಿಗಲಿದೆ.

ಕೊರೋನಾ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಪ್ರವಾಸೋದ್ಯಮ ಇಲಾಖೆಯು ಬೆಂಗಳೂರಿನಿಂದ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸ ಕೈಗೊಳ್ಳುವ ಕೆಎಸ್‌ಟಿಡಿಸಿ ಪ್ಯಾಕೇಜ್‌ಗಳನ್ನು ನಿಲ್ಲಿಸಿತ್ತು. ಅದಕ್ಕೀಗ ಮತ್ತೆ ಚಾಲನೆ ನೀಡಿದೆ.

ಸ್ಥಗಿತಗೊಂಡಿದ್ದ ಈ ಮಾರ್ಗದ ಬಸ್‌ ಸಂಚಾರ ಮತ್ತೆ ಆರಂಭ .

ಧಾರ್ಮಿಕ, ಪ್ರಾಕೃತಿಕ ರಮಣೀಯ ಸ್ಥಳಗಳು, ಐತಿಹಾಸಿಕ ಪ್ರಸಿದ್ಧ ತಾಣಗಳು, ಕಡಲತೀರಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಬೆಂಗಳೂರಿನಿಂದ ಮತ್ತೆ ಕೆಎಸ್‌ಟಿಡಿಸಿ ಪ್ಯಾಕೇಜ್‌ ಪ್ರವಾಸ ಆರಂಭವಾಗಲಿದೆ. ಪ್ರಮುಖವಾಗಿ ಬೆಂಗಳೂರಿನಿಂದ ತಿರುಪತಿ, ಮದುರೈ ಮೀನಾಕ್ಷಿ, ಕನ್ಯಾಕುಮಾರಿ, ಊಟಿ, ಮುನ್ನಾರ್‌, ಶಿರಡಿ, ಗೋವಾ, ಮಡಿಕೇರಿ, ಮೈಸೂರು, ವಿಜಯಪುರ, ಕೂಡಲಸಂಗಮ, ಹಂಪಿ, ಮುರ್ಡೇಶ್ವರ, ಹಳೆಬೀಡು, ಬೇಲೂರು ಮುಂತಾದ ತಾಣಗಳಿಗೆ ಪ್ಯಾಕೇಜ್‌ ಪ್ರವಾಸಗಳಿವೆ.

ದಕ್ಷಿಣ ಭಾರತದ ಪ್ರವಾಸಿ ತಾಣಗಳು, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಉತ್ತರ ಕರ್ನಾಟಕದ ಪಾರಂಪರಿಕ ಸ್ಥಳಗಳಾದ ಹಂಪಿ, ಬಾದಾಮಿ, ಐಹೊಳೆ, ವಿಜಯಪುರ, ಕೂಡಲ ಸಂಗಮ ಮುಂತಾದ ಸ್ಥಳಗಳಿಗೆ 4-5 ದಿನದ ಪ್ಯಾಕೇಜ್‌ ಘೋಷಿಸಿದೆ. ಅದೇ ರೀತಿ ಮೈಸೂರು, ಮಡಿಕೇರಿ, ಊಟಿ, ಕೊಡೈಕೆನಾಲ್‌ಗೆ ಮೂರು ದಿನ, ಬೆಂಗಳೂರಿನ ಸುತ್ತಲಿನ ನಂದಿ ಬೆಟ್ಟಒಳಗೊಂಡ ಸ್ಥಳಗಳಿಗೆ ಭೇಟಿ ನೀಡಲು ಒಂದು ದಿನದ ಟೂರ್‌ ಆರಂಭವಾಗಿದೆ.

ಸರ್ಕಾರದ ಮಾರ್ಗಸೂಚಿ ಪಾಲನೆ: ಪ್ರವಾಸಿಗರ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರವು ಸೂಚಿಸಿರುವ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಾಹನಗಳನ್ನು ಸ್ಯಾನಿಟೈಸ್‌ ಮಾಡುವುದು, ಪ್ರವಾಸಕ್ಕೆ ನಿಯೋಜಿಸಿರುವ ಸಿಬ್ಬಂದಿಗೆ ಪ್ರತಿ ದಿನ ಥರ್ಮಲ್‌ ಸ್ಕ್ಯಾನಿಂಗ್‌, ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ.

ಕೊರೋನಾದಿಂದ ಸ್ಥಗಿತಗೊಂಡಿದ್ದ ಪ್ರವಾಸಿ ಪ್ಯಾಕೇಜ್‌ಗಳನ್ನು ಪುನಾರಂಭಿಸಲಾಗಿದೆ. ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಕೊರೋನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ. ಕಳೆದ ಆರು ತಿಂಗಳಿನಿಂದ ಪ್ರವಾಸ ಕೈಗೊಳ್ಳದವರಿಗೆ ಪ್ರವಾಸೋದ್ಯಮ ಇಲಾಖೆ ಮತ್ತೆ ಅವಕಾಶ ಕಲ್ಪಿಸಿದೆ.

- ಕುಮಾರ್‌ ಪುಷ್ಕರ್‌, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಟಿಡಿಸಿ