ಬೆಂಗಳೂರು (ಏ.07):  ರಾಜ್ಯಾದ್ಯಂತ ಸಾರಿಗೆ ನೌಕರರು ಬುಧವಾರ ಮುಷ್ಕರ ಹೂಡುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಅನನುಕೂಲ ಉಂಟಾಗದಂತೆ ರಾಜ್ಯ ಸರ್ಕಾರವು ಸಾಲು-ಸಾಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಖಾಸಗಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿದೆ.

ಖಾಸಗಿ ಬಸ್ಸುಗಳು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ಸು ನಿಲ್ದಾಣಗಳಿಂದ ಕಾರ್ಯನಿರ್ವಹಿಸಲು ರಾಜ್ಯಾದ್ಯಂತ ಅವಕಾಶ ನೀಡಿ ಆದೇಶ ಹೊರಡಿಸಿದೆ. ತರಬೇತಿ ನಿರತ 2 ಸಾವಿರ ಚಾಲಕರ ಸಹಾಯದಿಂದ ಸಾರಿಗೆ ಬಸ್ಸುಗಳನ್ನು ರಸ್ತೆಗಿಳಿಸಲು ಕ್ರಮ ಕೈಗೊಂಡಿದೆ.

6ನೇ ವೇತನ ಆಯೋಗ ನಿರೀಕ್ಷೆಯಲ್ಲಿದ್ದ ಸಾರಿಗೆ ನೌಕರರಿಗೆ ಬಿಗ್ ಶಾಕ್ ಕೊಟ್ಟ ಸಿಎಂ .

ಅಲ್ಲದೆ, ಖಾಸಗಿ ಮ್ಯಾಕ್ಸಿ ಕ್ಯಾಬ್‌, ಬಸ್‌, ಶಾಲಾ-ಕಾಲೇಜು ವಾಹನಗಳು ಸಾರ್ವಜನಿಕ ಸೇವೆ ನೀಡಲು ತಾತ್ಕಾಲಿಕ ಅನುಮತಿ ನೀಡಲಾಗಿದೆ. ಹೀಗಾಗಿ ಬುಧವಾರದಿಂದ 2 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ಸುಗಳು ರಸ್ತೆಗಳಿಯುವ ಸಾಧ್ಯತೆ ಇದೆ. ಮುಷ್ಕರದ ವೇಳೆ ಅನಗತ್ಯವಾಗಿ ಹೆಚ್ಚು ಶುಲ್ಕ ವಸೂಲಿ ಮಾಡದಂತೆ ಎಲ್ಲಾ ಖಾಸಗಿ ವಾಹನಗಳ ಚಾಲಕರಿಗೆ ಸೂಚನೆ ನೀಡಲಾಗಿದೆ.

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳಿಗೆ ಮುಕ್ತವಾಗಿ ಸೇವೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರಾಜ್ಯದ ಪ್ರಮುಖ 14 ಜಿಲ್ಲೆಗಳಲ್ಲಿ ಬುಧವಾರದಿಂದ 2 ಸಾವಿರಕ್ಕೂ ಅಧಿಕ ಖಾಸಗಿ ಬಸ್ಸುಗಳ ಸೇವೆ ಆರಂಭವಾಗಲಿದೆ. ಈ ಬಗ್ಗೆ ಸಂಬಂಧಪಟ್ಟಜಿಲ್ಲೆಗಳಲ್ಲಿ ಖಾಸಗಿ ಬಸ್‌ ಮಾಲಿಕರೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದು, ಖಾಸಗಿ ಬಸ್ಸುಗಳಿಗೆ ಸರ್ಕಾರಿ ಬಸ್‌ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅನುಮತಿ ನೀಡಲಾಗಿದೆ.