KSRTC ನೌಕರರು ಪ್ರತಿಭಟನೆ ಆರಂಭಿಸಿದ್ದು ಇಂದಿನಿಂದ ಬಸ್ ಸಂಚಾರ ಸ್ಥಗಿತವಾಗಿದೆ. ಈ ನಿಟ್ಟಿನಲ್ಲಿ  ಸಾಮಾನ್ಯ ಜನರು ಪ್ರಯಾಣ ಮಾಡಲು ಪರದಾಡುವ ಸ್ಥಿತಿ ಎದುರಾಯಿತು. 

ಬೆಂಗಳೂರು (ಏ.07): ಸಾರಿಗೆ ನೌಕರರು ರಾಜ್ಯಾದ್ಯಂತ ಬುಧವಾರ ಕರೆ ನೀಡಿರುವ ಮುಷ್ಕರದ ಬಿಸಿ ಸಾರ್ವಜನಿಕರಿಗೆ ಒಂದು ದಿನ ಮುಂಚಿತವಾಗಿಯೇ ತಟ್ಟಿತು. ಕೆಎಸ್‌ಆರ್‌ಟಿಸಿ, ವಾಯವ್ಯ ಹಾಗೂ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸುಮಾರು ಶೇ.25ರಿಂದ 30ರಷ್ಟುನೌಕರರು ಮಂಗಳವಾರ ಮಧ್ಯಾಹ್ನದಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದ ಸುಮಾರು ಶೇ.30ರಿಂದ 35ರಷ್ಟುಬಸ್‌ಗಳ ಓಡಾಟ ಬಂದ್‌ ಆಗಿ ಪ್ರಯಾಣಿಕರು ಪರದಾಡಬೇಕಾಯಿತು.

ಮುಖ್ಯವಾಗಿ ದಿನದ ಎರಡನೇ ಪಾಳಿ ಅಂದರೆ ಮಂಗಳವಾರ ಮಧ್ಯಾಹ್ನದಿಂದ ಕಾರ್ಯನಿರ್ವಹಿಸುವ ಮತ್ತು ದೂರದೂರಿಗೆ ಸಂಚರಿಸುವ ಬಸ್‌ಗಳ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿದ್ದರು. ಈ ಪಾಳಿಯ ಕರ್ತವ್ಯಕ್ಕೆ ಹಾಜರಾದರೆ ಮುಷ್ಕರದಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಬಹುದು, ಮುಷ್ಕರ ವಿಫಲವಾಗಬಹುದು ಎಂಬ ಕಾರಣಕ್ಕೆ ಹೆಚ್ಚಿನ ಸಿಬ್ಬಂದಿ ಗೈರಾಗಿದ್ದರು. ಇದರಿಂದಾಗಿ ಬೆಂಗಳೂರು, ಧಾರವಾಡ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಧ್ಯಾಹ್ನದ ನಂತರ ಅನೇಕ ಬಸ್‌ಗಳ ಓಡಾಟ ಬಂದ್‌ ಆಗಿ ಪ್ರಯಾಣಿಕರು ಪರದಾಡಬೇಕಾಯಿತು.

ಮುಷ್ಕರದ ಹಿನ್ನೆಲೆಯಲ್ಲಿ ಧಾರವಾಡ, ಬೆಳಗಾವಿ, ಗದಗ ಸೇರಿ ಆರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ಸೇರಿದ ಶೇ.30ಕ್ಕೂ ಅಧಿಕ ನೌಕರರು ಒಂದು ದಿನ ಮೊದಲೇ ಕೆಲಸಕ್ಕೆ ಗೈರಾಗಿದ್ದರು. ಇದರಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬಸ್‌ಗಳ ಓಡಾಟದಲ್ಲಿ ವ್ಯತ್ಯಯ ಆಗಿ ಜನ ಪರದಾಡಿದರು.

6ನೇ ವೇತನ ಆಯೋಗ ನಿರೀಕ್ಷೆಯಲ್ಲಿದ್ದ ಸಾರಿಗೆ ನೌಕರರಿಗೆ ಬಿಗ್ ಶಾಕ್ ಕೊಟ್ಟ ಸಿಎಂ

ಇನ್ನು ಕಲಬುರಗಿ, ಬೀದರ್‌ ಸೇರಿ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ 2063 ಬಸ್‌ಗಲ್ಲಿ 246ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಶೇ.5ರಿಂದ 10ರಷ್ಟುಸಿಬ್ಬಂದಿ ಕರ್ತವ್ಯದಿಂದ ದೂರವುಳಿದಿದ್ದರು ಎನ್ನಲಾಗಿದೆ.

ಬೆಂಗಳೂರಿನಲ್ಲಿ ಪರದಾಟ: ಕೆಎಸ್‌ಆರ್‌ಟಿಸಿ ಮತ್ತು ಬೆಂಗಳೂರು ನಗರ ಸಾರಿಗೆಯಾದ ಬಿಎಂಟಿಸಿಯಲ್ಲೂ 2ನೇ ಪಾಳಿಯ ಶೇ.40ರಷ್ಟುಸಿಬ್ಬಂದಿ ಗೈರಾಗಿದ್ದ ಕಾರಣ ಶೇ.30ರಷ್ಟುಬಸ್‌ಗಳ ಓಡಾಟ ಸ್ಥಗಿತಗೊಂಡಿತ್ತು. ಇದರಿಂದ ಬೆಂಗಳೂರಿಂದ ಪರವೂರಿಗೆ ತೆರಳುವವರು ತೀವ್ರ ಪರದಾಡಿದರು. ಕಚೇರಿಗೆ ತೆರಳಲು ಬಿಎಂಟಿಸಿಯನ್ನೇ ನಂಬಿಕೊಂಡಿರುವ ಮಂದಿಯೂ ಸಂಜೆ ಬಳಿಕ ಮನೆ ತಲುಪಲು ಟ್ಯಾಕ್ಸಿ, ರಿಕ್ಷಾಗಳನ್ನೇ ಅವಲಂಬಿಸಬೇಕಾಯಿತು. ರಸ್ತೆಗಿಳಿದಿದ್ದ ಬಸ್‌ಗಳು ಬಹುತೇಕ ಭರ್ತಿಯಾಗಿದ್ದವು.