ಬೆಂಗಳೂರು(ಫೆ.12): ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಸಾಲದ ಮೊರೆ ಹೋಗಲು ಮುಂದಾಗಿವೆ. ಕಳೆದೆರಡು ತಿಂಗಳ ಹಿಂದೆ ಬಿಎಂಟಿಸಿ ಸಾಲ ಪಡೆದ ಬೆನ್ನಲ್ಲೇ ಇದೀಗ ಕೆಎಸ್‌ಆರ್‌ಟಿಸಿ ಸಹ 220 ಕೋಟಿ ರು. ಸಾಲ ಪಡೆಯಲು ಮುಂದಾಗಿದೆ.

ಡೀಸೆಲ್‌ ಬೆಲೆ ಏರಿಕೆ, ಸಿಬ್ಬಂದಿ ವೇತನ ಹೆಚ್ಚಳ, ಕೊರೋನಾ ಸೋಂಕಿನ ಕಾರಣದಿಂದ ಪ್ರಯಾಣಿಕರ ಕೊರತೆ ಸೇರಿ ಇನ್ನಿತರ ಕಾರಣಗಳಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ನಷ್ಟದಲ್ಲಿವೆ. ಇದನ್ನು ಸರಿಪಡಿಸಲು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕ್‌ಗಳಿಗಾಗಿ ಟೆಂಡರ್‌ ಆಹ್ವಾನಿಸುತ್ತಿವೆ.

ಕಳೆದ ಎರಡು ತಿಂಗಳ ಹಿಂದೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಬಿಎಂಟಿಸಿ 230 ಕೋಟಿ ರು. ಸಾಲ ಪಡೆಯಲು ಟೆಂಡರ್‌ ಆಹ್ವಾನಿಸಿತ್ತು. ಅದಕ್ಕಾಗಿ ಬಿಎಂಟಿಸಿ ಒಡೆತನದ ಬಸ್ಸುಗಳು, ಭೂಮಿ ಮತ್ತು ಕಟ್ಟಡಗಳನ್ನು ಅಡಮಾನ ಇಡುವ ಬಗ್ಗೆಯೂ ತಿಳಿಸಿತ್ತು. ಇದೀಗ ಕೆಎಸ್ಸಾರ್ಟಿಸಿ ಕೂಡ ಸಾಲ ಪಡೆಯಲು ಮುಂದಾಗಿದ್ದು, ಒಟ್ಟು 220 ಕೋಟಿ ರು. ಸಾಲ ಪಡೆಯುತ್ತಿದೆ. ಅದರಂತೆ ಸಾಲ ನೀಡುವ ಬ್ಯಾಂಕ್‌ಗಾಗಿ ಹುಡುಕಾಟ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹದಗೆಟ್ಟ ಆರ್ಥಿಕ ಸ್ಥಿತಿ: ಸಾಲಕ್ಕಾಗಿ ಬಸ್‌ ನಿಲ್ದಾಣವನ್ನೇ ಅಡವಿಟ್ಟ ಬಿಎಂಟಿಸಿ..!

ಸಾಲ ನೀಡಲು ಷರತ್ತು:

ಸಾಲ ನೀಡುವುದಕ್ಕಾಗಿ ಕೆಲ ಷರತ್ತು ವಿಧಿಸಲಾಗಿದ್ದು, ಒಂದೇ ಕಂತಿನಲ್ಲಿ 220 ಕೋಟಿ ರು. ಸಾಲ ನೀಡಬೇಕು. ಸಾಲದ ಮರುಪಾವತಿ ಅವಧಿ ಏಳು ವರ್ಷಕ್ಕೆ ನಿಗದಿ ಮಾಡಬೇಕು ಹಾಗೂ ಸಾಲ ಮರುಪಾವತಿ ಆರು ತಿಂಗಳ ಮೊರಟೋರಿಯಂ ನಂತರ ಪ್ರಾರಂಭವಾಗುತ್ತದೆ ಎಂದು ಟೆಂಡರ್‌ ದಾಖಲೆಯಲ್ಲಿ ತಿಳಿಸಲಾಗಿದೆ.

ನಷ್ಟದ ವಿವರ (2020ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ)

ನಿಗಮ ನಷ್ಟ(ಕೋಟಿ ರು.ಗಳಲ್ಲಿ)

ಕೆಎಸ್ಸಾರ್ಟಿಸಿ 829.74
ಬಿಎಂಟಿಸಿ 696.67
ವಾಯುವ್ಯ 587.77
ಈಶಾನ್ಯ 452.33
ಒಟ್ಟು 2,566.71