ಬೆಂಗಳೂರು (ನ.20):  ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ ಹಾಗೂ ರಾಜ್ಯ ರಸ್ತೆ ಸಾರಿಗೆ ಒಕ್ಕಲಿಗರ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ನೇತೃತ್ವದಲ್ಲಿ ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪತ್ರ ಚಳವಳಿ ನಡೆಯಿತು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌, ಹಿಂದೂ ಜಾಗೃತಿ ಸೇನೆ ಅಧ್ಯಕ್ಷ ಡಾ.ವಿನಯ್‌ ಗೌಡ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಚಳವಳಿಯಲ್ಲಿ ಪಾಲ್ಗೊಂಡು ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

'ಸಿಎಂ ಅಂಕಲ್ ಅಪ್ಪನಿಗೆ ಸಂಬಳ ಕೊಡಿ ಪ್ಲೀಸ್, ಮನೆಯಲ್ಲಿ ಹಬ್ಬವಿಲ್ಲ' .

ಸಾರಿಗೆ ನೌಕರರು ಹಾಗೂ ಸರ್ಕಾರಿ ನೌಕರರ ವೇತನದ ನಡುವೆ ಭಾರೀ ವ್ಯತ್ಯಾಸವಿದೆ. ಆರೋಗ್ಯ ಸೇವೆ, ವರ್ಗಾವಣೆ, ಕಾಲಮಿತಿ ವೇತನ ಬಡ್ತಿ ಸೇರಿದಂತೆ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಸರ್ಕಾರಿ ನೌಕರರೆಂದು ಘೋಷಿಸುವಂತೆ ಆಗ್ರಹಿಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸದಿರಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ಪತ್ರಚಳವಳಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇವೆ ಎಂದು ನೌಕರರ ಮುಖಂಡ ಹರೀಶ್‌ಗೌಡ ತಿಳಿಸಿದರು.

ಪ್ರಧಾನಿಗೆ 3 ಲಕ್ಷ ಪತ್ರ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿಂದ ಪತ್ರ ಚಳವಳಿ ನಡೆದಿದ್ದು, ಈವರೆಗೆ ಸುಮಾರು ಮೂರು ಲಕ್ಷ ಪತ್ರಗಳನ್ನು ಸಂಗ್ರಹಿಸಲಾಗಿದೆ. ಈ ಪತ್ರಗಳನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾಜರಾಜೇಶ್ವರಿನಗರ ಅಂಚೆ ಕಚೇರಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಲಾಗುವುದು ಎಂದು ಹೇಳಿದರು.