ಬೆಂಗಳೂರು(ಜು.24): ಕೊರೋನಾ ವಾರಿಯರ್ಸ್‌ಗಳಾಗಿ ದುಡಿಯುತ್ತಿರುವ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮದ ನೌಕರರ ವೇತನ ಪಾವತಿಗೆ ರಾಜ್ಯ ಸರ್ಕಾರ ಎರಡು ದಿನಗಳಲ್ಲಿ ಅನುದಾನ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಸಾರಿಗೆ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ವೇತನ ನೀಡಲು ಅನುದಾನ ನೀಡುವಂತೆ ನಿಗಮಗಳು ಮಾಡಿದ ಮನವಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಶೀಘ್ರವೇ ಸರ್ಕಾರದಿಂದ ನಿಗಮಗಳಿಗೆ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಶೇ.30 ಪಠ್ಯ ಕಡಿತದ ಬಗ್ಗೆ ವಾರದಲ್ಲಿ ಆದೇಶ..!

ನಾಲ್ಕು ಸಾರಿಗೆ ನಿಗಮಗಳಲ್ಲಿ ಸುಮಾರು 1.30 ಲಕ್ಷ ನೌಕರರು ಇದ್ದು, ಜು.23 ಕಳೆದರೂ ಜೂನ್‌ ತಿಂಗಳ ವೇತನ 360 ಕೋಟಿ ರು. ಪಾವತಿಯಾಗಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ಆದಾಯ ಇಲ್ಲದೆ ನೌಕರರಿಗೆ ವೇತನ ಪಾವತಿಸದಷ್ಟೂಸಂಕಷ್ಟಕ್ಕೆ ಸಿಲುಕಿವೆ.

ಹೀಗಾಗಿ ಕಳೆದ ಮೂರು ತಿಂಗಳಿಂದ ರಾಜ್ಯ ಸರ್ಕಾರವೇ ಸಾರಿಗೆ ನಿಗಮಗಳ ನೌಕರರ ವೇತನ ಪಾವತಿಗೆ ಅನುದಾನ ನೀಡುತ್ತಾ ಬಂದಿದೆ. ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಬಾರದ ಹಿನ್ನೆಲೆಯಲ್ಲಿ ಈವರೆಗೂ ನೌಕರರಿಗೆ ಜೂನ್‌ ತಿಂಗಳ ವೇತನ ಪಾವತಿ ಸಾಧ್ಯವಾಗಿಲ್ಲ. ಹೀಗಾಗಿ ಸಾರಿಗೆ ನಿಗಮಗಳು ಅನುದಾನಕ್ಕಾಗಿ ಮತ್ತೊಮ್ಮೆ ಸರ್ಕಾರದ ಕದ ತಟ್ಟಿದ್ದವು.

ಹೊಸ ಕೈಗಾರಿಕಾ ನೀತಿಗೆ ಅಸ್ತು: 5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ

ಜುಲೈ ತಿಂಗಳ ವೇತನಕ್ಕಾಗಿ ಅನುದಾನ ಕೋರಿ ಜೂನ್‌ 19ರಂದು ನಾಲ್ಕು ರಸ್ತೆ ಸಾರಿಗೆ ನಿಗಮಗಳ ಪರವಾಗಿ ಕೆಎಸ್‌ಆರ್‌ಟಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಆರ್ಥಿಕ ಇಲಾಖೆಯು ಆ ಪ್ರಸ್ತಾವನೆ ಪರಿಶೀಲಿಸಿ ಅನುದಾನ ನೀಡಲು ಸಮ್ಮತಿ ಸೂಚಿಸಿದೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಸಾರಿಗೆ ನಿಗಮಗಳಿಗೆ ಅನುದಾನ ಬಿಡುಗಡೆಯಾಗಲಿದ್ದು, ಬಳಿಕ ನೌಕರರ ಖಾತೆಗೆ ವೇತನ ಜಮೆಯಾಗಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ತನ್ನನ್ನು ಕೊಲ್ಲಲು ಯತ್ನಿಸಿದ ತಂದೆಯನ್ನೇ ಕೊಂದ 15 ವರ್ಷದ ಬಾಲಕಿ..!

ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಇರುವುದರಿಂದ ನೌಕರರಿಗೆ ವೇತನ ಪಾವತಿ ವಿಳಂಬವಾಗಿದೆ. ಈಗಾಗಲೇ ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಹೀಗಾಗಿ ಶೀಘ್ರದಲ್ಲೇ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.