ಕೆಎಸ್‌ಆರ್‌ಟಿಸಿ ನೌಕರರಿಗೆ ಬಂಪರ್ ಕೊಡುಗೆ: ಮುಷ್ಕರ ರದ್ದು
ಮೂಲವೇತನವನ್ನು ಶೇ. 15ರಷ್ಟು ಹೆಚ್ಚಿಸಿದ್ದ ಅಧಿಸೂಚನೆ ಒಪ್ಪಿದ್ದೇವೆ. ಆದರೆ, ಅದರ ಜೊತೆಗೆ ಇನ್ನೂ ಶೇ. 2ರಷ್ಟು ಹೆಚ್ಚಳದ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ನೀಡಲಾಗುವುದು: ವಿ.ಅನ್ಬುಕುಮಾರ್

ಬೆಂಗಳೂರು(ಮಾ.19): ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಹೆಚ್ಚಿಸಿರುವ ಸರ್ಕಾರದ ನಿರ್ಧಾರಕ್ಕೆ ಕೊನೆಗೂ ಒಪ್ಪಿಕೊಳ್ಳುವ ಜತೆಗೆ ವೇತನ ಪರಿಷ್ಕರಣೆ ಅವಧಿ, ಹಿಂಬಾಕಿ ಕುರಿತು ಅಸ್ಪಷ್ಟತೆ ನಿವಾರಣೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಾ.21ರಿಂದ ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರವನ್ನು ವಾಪಸ್ ಪಡೆದಿದೆ.
ಶನಿವಾರ ಸಂಜೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಜೊತೆಗೆ ನಡೆದ ಮೂರು ಗಂಟೆಗಳ ಸಭೆ ಬಳಿಕ ಈ ನಿರ್ಧಾರವನ್ನು ಸಮಿತಿ ತಿಳಿಸಿತು. ಮೂಲವೇತನವನ್ನು ಶೇ. 15ರಷ್ಟು ಹೆಚ್ಚಿಸಿದ್ದ ಅಧಿಸೂಚನೆ ಒಪ್ಪಿದ್ದೇವೆ. ಆದರೆ, ಅದರ ಜೊತೆಗೆ ಇನ್ನೂ ಶೇ. 2ರಷ್ಟು ಹೆಚ್ಚಳದ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ನೀಡಲಾಗುವುದು. ನಮ್ಮ ಬೇಡಿಕೆಯಂತೆ 2020ರ ಜನವರಿಯಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಮಾಡುವ ಬಗ್ಗೆ ಭರವಸೆ ದೊರೆತಿದೆ. ಜೊತೆಗೆ ಹಿಂಬಾಕಿ ಕುರಿತು ಅಧಿಸೂಚನೆಯಲ್ಲಿದ್ದ ಅಸ್ಪಷ್ಟತೆ ನಿವಾರಣೆಯಾಗಿದೆ ಎಂದು ಜಂಟಿ ಕ್ರಿಯಾಸಮಿತಿಯ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ತಿಳಿಸಿದ್ದಾರೆ.
ಸಿಎಂ ಆಫರ್ ತಿರಸ್ಕಾರ: ಮಾ.21ರಿಂದ ಕೆಎಸ್‌ಆರ್‌ಟಿಸಿ ಬಸ್ ಮುಷ್ಕರ
ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಮುಖಂಡ ಜಯದೇವ ಅರಸ್, ಅಧಿಸೂಚನೆಯಲ್ಲಿ 2023ರಿಂದ ವೇತನ ಪರಿಷ್ಕರಣೆ ಮಾಡುವುದಾಗಿ ತಿಳಿಸಲಾಗಿತ್ತು. ಆದರೆ, ನಾವು 2020ರ ಜನವರಿಯಿಂದ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದ್ದೆವು. ಜತೆಗೆ 2020ರಿಂದ 2022ರ ಡಿಸೆಂಬರ್‌ವರೆಗಿನ ವೇತನ ಪರಿಷ್ಕರಣ ಅವಧಿಯನ್ನು ಸೇರ್ಪಡೆ ಮಾಡಬೇಕು ಎಂದು ಕೋರಿದ್ದೆವು. ಅದಕ್ಕೆ ವ್ಯವಸ್ಥಾಪಕ ನಿರ್ದೇಶಕರು ಒಪ್ಪಿದ್ದಾರೆ ಎಂದರು. ಹಿಂದಿನ 38 ತಿಂಗಳ ಹಿಂಬಾಕಿ ನೀಡುವಂತೆ ನಮ್ಮ ಬೇಡಿಕೆ ಇತ್ತು. ಇದೀಗ ಅದು ಸಾಧ್ಯವಾಗದಿದ್ದರೆ ತುರ್ತಾಗಿ 2 ವರ್ಷದ ಹಿಂಬಾಕಿಯನ್ನು ನೀಡುವಂತೆ ಒತ್ತಾಯಿಸಿದ್ದು, ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ದೊರೆತಿದೆ ಎಂದರು.
ಮರುನೇಮಕ:
ಹಿಂದಿನ ಹೋರಾಟದಲ್ಲಿ ವಜಾಗೊಂಡ ಸಿಬ್ಬಂದಿಯನ್ನು ಮರುನೇಮಕ ಮಾಡಿಕೊಳ್ಳಬೇಕು. ದಿನದ ಭತ್ಯೆಯನ್ನು ಐದು ಪಟ್ಟು ಹೆಚ್ಚಿಸಬೇಕು ಎಂಬ ಬೇಡಿಕೆ ಹಾಗೂ ಸಿಬ್ಬಂದಿ ಮೇಲೆ ದಾಖಲಾಗಿದ್ದ ದೂರನ್ನು ಹಿಂಪಡೆಯಬೇಕು ಹಾಗೂ ಮುಷ್ಕರದ ವೇಳೆ ವರ್ಗಾವಣೆ ಆಗಿದ್ದ ನೌಕರರನ್ನು ಮರು ನಿಯೋಜನೆ ಮಾಡಬೇಕು ಎಂಬ ಬೇಡಿಕೆಗಳ ಕುರಿತು ಸಭೆ ನಡೆಸಿ ಸಾರಿಗೆ ನೌಕರರ ಪರವಾಗಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ಜತೆಗೆ ಹಬ್ಬ, ಹಾಗೂ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಜನತೆಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಸದ್ಯಕ್ಕೆ ಮುಷ್ಕರ ಕೈಬಿಟ್ಟಿದ್ದೇವೆ ಎಂದು ಜಂಟಿ ಕ್ರಿಯಾಸಮಿತಿ ತಿಳಿಸಿದೆ.
24ರಿಂದ ಮುಷ್ಕರ: ಇನ್ನೊಂದು ಸಾರಿಗೆ ಬಣ
ಇನ್ನೊಂದೆಡೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ವತಿಯಿಂದ ಮುಷ್ಕರ ನಡೆಯುತ್ತದೆ. ಕ್ರಿಯಾ ಸಮಿತಿಯವರು ತರಾತುರಿಯಲ್ಲಿ ಮುಷ್ಕರ ವಾಪಸ್ ಪಡೆದಿದ್ದಾರೆ. ಆದರೆ ನಮ್ಮ ಸಂಘಟನೆಯಿಂದ ದ ಮಾ.24 ರಿಂದ ಮುಷ್ಕರ ನಡೆಯುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್ ತಿಳಿಸಿದ್ದಾರೆ.