ಬೆಂಗಳೂರು (ನ.02):  ಕೊರೋನಾದಿಂದ ಮೃತರಾದ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರು. ಪರಿಹಾರ, ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ‘ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್‌’ ನೇತೃತ್ವದಲ್ಲಿ ನ.5ರಂದು ಬೆಳಗ್ಗೆ 11ಕ್ಕೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಲಾಕ್‌ಡೌನ್‌ ಸಡಿಲಿಕೆ ಬಳಿಕ ಸಾರಿಗೆ ನೌಕರರಿಗೆ ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ನೌಕರರನ್ನು ಕರ್ತವ್ಯಕ್ಕೆ ನಿಯೋಜಿಸಲು ಘಟಕದ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಪೂರ್ಣ ಪ್ರಮಾಣದ ವೇತನ ನೀಡುವುದಾಗಿ ಸಾರಿಗೆ ಸಚಿವರು ಹೇಳಿದ್ದರು. ಆದರೆ, ನೌಕರರ ಖಾತೆಯಲ್ಲಿದ್ದ ರಜೆಗಳನ್ನು ವಜಾ ಮಾಡಿಕೊಂಡು ವೇತನ ನೀಡಲಾಗಿದೆ. ನೌಕರರಿಗೆ ನೀಡಲಾಗುತ್ತಿದ್ದ ಹಲವು ಭತ್ಯೆಗಳನ್ನು ಕಡಿತಗೊಳಿಸಲಾಗಿದೆ ಎಂದು ಫೆಡರೇಶನ್‌ ಆರೋಪಿಸಿದೆ.

ಬಿಎಂಟಿಸಿಯಿಂದ ಮತ್ತಷ್ಟು ಎಲೆಕ್ಟ್ರಿಕ್‌ ಬಸ್‌ ಸಂಚಾರ ...

ಬಸ್‌ ಕಾರ್ಯಾಚರಣೆ ಹಿಂದಿನ ಸ್ಥಿತಿಗೆ ಮರಳುವವರೆಗೂ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ವೇತನ ನೀಡಬೇಕು. ಕಾರ್ಮಿಕರ ಖಾತೆಯಿಂದ ಕಡಿತಗೊಳಿಸಿರುವ ರಜೆಗಳನ್ನು ಹಿಂದಿರುಗಿಸಬೇಕು. ಬಿಎಂಟಿಸಿಯಲ್ಲಿ ಪಾಳಿ ವ್ಯವಸ್ಥೆಯಲ್ಲಿ ಬಸ್‌ ಕಾರ್ಯಾಚರಣೆ ಮಾಡಬೇಕು. ನೌಕರರ ಅಂತರ್‌ ನಿಗಮ ವರ್ಗಾವಣೆಗೆ ಅವಕಾಶ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ಯಾಕೇಜ್‌ ರೂಪದಲ್ಲಿ ಸಾರಿಗೆ ನಿಗಮಗಳಿಗೆ ಅನುದಾನ ನೀಡಬೇಕು. ಖಾಸಗೀ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಕಾರ್ಯಾಚರಣೆ ನಿರ್ಧಾರ ಕೈಬಿಟ್ಟು ಸರ್ಕಾರದ ಒಡೆತನದಲ್ಲೇ ಎಲೆಕ್ಟ್ರಿಕ್‌ ಬಸ್‌ ಕಾರ್ಯಾಚರಣೆ ಮಾಡಬೇಕು ಎಂದು ಫೆಡರೇಶನ್‌ ಆಗ್ರಹಿಸಿದೆ.