Asianet Suvarna News Asianet Suvarna News

ವೇತನ ಹೆಚ್ಚಳ: ಅ.11ಕ್ಕೆ ಕೆಎಸ್‌ಆರ್‌ಟಿಸಿ ನೌಕರರ ಸಮಾವೇಶ

ನಾಲ್ಕು ಸಾರಿಗೆ ನಿಗಮಗಳಲ್ಲಿ ಸುಮಾರು 1.07 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಿಗಮಗಳಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡುವ ಪರಂಪರೆ ಇದೆ .ಆದರೆ ಈಗ ಕಳೆದೆರಡು ವರ್ಷಗಳಿಂದ ವೇತನ ಪರಿಷ್ಕರಣೆ ಆಗಿಲ್ಲ ಎಂದ ವಿಜಯ ಭಾಸ್ಕರ್‌ 

KSRTC Employees Convention Will Be Held on October 11th For Salary Increase grg
Author
First Published Oct 8, 2022, 12:00 AM IST

ಬೆಂಗಳೂರು(ಅ.08): ರಾಜ್ಯ ಸಾರಿಗೆ ನಿಗಮಗಳ ವೇತನ ಪರಿಷ್ಕರಣೆ ಮತ್ತು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಅಕ್ಟೋಬರ್‌ 11ರಂದು ಬೆಂಗಳೂರಿನ ಶೇಷಾದ್ರಿಪುರಂ ಗುಂಡೂರಾವ್‌ ಸಭಾಂಗಣದಲ್ಲಿ ಜಂಟಿ ಕ್ರಿಯಾ ಸಮಿತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಶನ್‌ ಅಧ್ಯಕ್ಷ ಡಿ.ಎ. ವಿಜಯ ಭಾಸ್ಕರ್‌, ನಾಲ್ಕು ಸಾರಿಗೆ ನಿಗಮಗಳಲ್ಲಿ ಸುಮಾರು 1.07 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಿಗಮಗಳಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡುವ ಪರಂಪರೆ ಇದೆ .ಆದರೆ ಈಗ ಕಳೆದೆರಡು ವರ್ಷಗಳಿಂದ ವೇತನ ಪರಿಷ್ಕರಣೆ ಆಗಿಲ್ಲ ಎಂದರು.

ವೇತನ, ಬಾಟ ಇತ್ಯಾದಿಗಳ ಹೆಚ್ಚಳ, ಉತ್ತಮ ವೈದ್ಯಕೀಯ ಸೌಲಭ್ಯ, ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿಗದಿ ಪಡಿಸುವುದು( ಫಾರಂ -4 ) , ಮಹಿಳಾ ನೌಕರರಿಗೆ ಸಂಬಂಧಪಟ್ಟ ಕೆಲವು ಬೇಡಿಕೆಗಳು, ಉತ್ತಮವಾದ ಪೆನ್ಷನ್‌, ಕೈಗಾರಿಕಾ ಒಪ್ಪಂದಗಳಂತೆ ಗ್ರಾಚ್ಯುಯಿಟಿ ಕೊಡುವುದು ಹಾಗೂ ಮುಷ್ಕರದ ಸಂಧರ್ಭದಲ್ಲಿ ವಜಾ ಆಗಿರುವ ಎಲ್ಲ ನೌಕರರನ್ನು ಬೇಷರತ್ತಾಗಿ ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳುವುದು ಮುಂತಾದ ಬೇಡಿಕೆಗಳ ಬಗ್ಗೆ ಕೆ.ಎಸ್‌.ಆರ್‌.ಟಿ.ಸಿ ಆಡಳಿತ ವರ್ಗಕ್ಕೆ ವಿವರವಾಗಿ ತಿಳಿಸಿದ್ದೇವೆ . ಈವರೆಗೂ ನಮ್ಮ ಸಮಿತಿಗೆ ಆಡಳಿತ ವರ್ಗದಿಂದ ಮಾತುಕತೆಗಳ ಬಗ್ಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾಡಹಬ್ಬದ ದಿನವೇ ಸಾರಿಗೆ ಸಂಸ್ಥೆಯಲ್ಲಿ ನಾಡಿಗೆ ಅಪಮಾನ!

ವೇತನ ಪರಿಷ್ಕರಣೆಯ ಬಗ್ಗೆ ಮುಖ್ಯ ಮಂತ್ರಿಗಳಿಗೂ ಪತ್ರ ಬರೆದು ಚರ್ಚಿಸಲು ಸಮಯ ಕೇಳಿದ್ದೇವೆ .ಇಲ್ಲಿಯವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಅಥವಾ ಮಾತುಕತೆ ನಡೆಸುವಂತೆ ಸಾರಿಗೆ ನಿಗಮಗಳಿಗೆ ಆದೇಶ ಬಂದಿಲ್ಲ . ಆದ್ದರಿಂದ ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುವ 6 ಸಂಘಟನೆಗಳು ಜಂಟಿ ಕ್ರಿಯಾ ಸಮಿತಿಯನ್ನು ರಚಿಸಿ ಬೇಡಿಕೆಗಳ ಇತ್ಯರ್ಥಕ್ಕೆ ಚಳವಳಿಯನ್ನು ರೂಪಿಸಲು ತೀರ್ಮಾನಿಸಿವೆ. ಈ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.
ವಿವಿಧ ಸಾರಿಗೆ ನೌಕರರ ಸಂಘಟನೆಗಳ ಮುಖಂಡರಾದ ಬಿ ಜಯದೇವರಾಜ ಅರಸು, ಎಚ್‌. ಡಿ. ರೇವಪ್ಪ, ಕೆ. ಆರ್‌. ವಿಜಯ ಕುಮಾರ್‌, ವೆಂಕಟರಮಣಪ್ಪ, ಮಲ್ಲಿಕಾರ್ಜುನ ಮೂರ್ತಿ ಉಪಸ್ಥಿತರಿದ್ದರು.  
 

Follow Us:
Download App:
  • android
  • ios