ಬೆಂಗಳೂರಿಂದ 5 ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್‌ ಬಸ್‌..!

ಡಿಸೆಂಬರ್‌ ಅಂತ್ಯಕ್ಕೆ 25 ಬಸ್‌ಗಳ ಸಂಚಾರ ಆರಂಭ, ಡಿ.4ಕ್ಕೆ 1 ಬಸ್‌ ಪ್ರಾಯೋಗಿಕ ಸಂಚಾರ, ಒಮ್ಮೆ ಚಾರ್ಜ್‌ ಮಾಡಿದರೆ 270 ಕಿ.ಮೀ. ಸಂಚಾ​ರ, ಕಿ.ಮೀ.​ಗೆ 55 ರು. ನಿರ್ವಹಣಾ ವೆಚ್ಚ: ವೋಲ್ವೊಗಿಂತ 15 ರು. ಕಡಿಮೆ 

KSRTC Electric Buses from Bengaluru to 5 Districts grg

ಬೆಂಗಳೂರು(ನ.29):  ಬಿಎಂಟಿಸಿ ಬಳಿಕ ಈಗ ಕೆಎಸ್‌ಆರ್‌ಟಿಸಿ ಕೂಡಾ ಎಲೆಕ್ಟ್ರಿಕ್‌ ಬಸ್‌ ಆರಂಭಿಸುತ್ತಿದ್ದು, ಡಿಸೆಂಬರ್‌ ಅಂತ್ಯದೊಳಗೆ ಹವಾನಿಯಂತ್ರಿತ ವೋಲ್ವೊ ಮಾದರಿಯ 25 ಎಲೆಕ್ಟ್ರಿಕ್‌ ಬಸ್‌ಗಳು ಬೆಂಗಳೂರಿನಿಂದ 5 ಜಿಲ್ಲೆಗಳಿಗೆ ಸಂಚಾರ ನಡೆಸಲಿವೆ. ಕೆಎಸ್‌ಆರ್‌ಟಿಸಿ ಒಟ್ಟು 50 ಎಲೆಕ್ಟ್ರಿಕ್‌ ಬಸ್‌ಗಳಿಗೆ ಹೈದರಾಬಾದ್‌ನ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಡಿಸೆಂಬರ್‌ 4ರಂದು ಪ್ರಾಯೋಗಿಕ ಸಂಚಾರಕ್ಕೆಂದು ಮೊದಲ ಬಸ್‌ ಲಭ್ಯವಾಗಲಿವೆ. ಆ ಬಳಿಕ ಡಿಸೆಂಬರ್‌ ಕೊನೆಯ ವಾರ 25 ಬಸ್‌ಗಳು ಲಭ್ಯವಾಗಲಿದ್ದು, ಇವುಗಳಲ್ಲಿ ಪ್ರಯಾಣಿಕ ಸಂಚಾರ ಆರಂಭಗೊಳ್ಳಲಿದೆ. ಉಳಿದ 25 ಬಸ್‌ಗಳು ಫೆಬ್ರವರಿಯಲ್ಲಿ ಲಭ್ಯವಾಗಲಿವೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಬಿಎಂಟಿಸಿ 300ಕ್ಕೂ ಅಧಿಕ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭಿಸಲಾ​ಗಿ​ದೆ. ಇದರಿಂದ ಬಸ್‌ಗಳ ನಿರ್ವಹಣಾ ವೆಚ್ಚದ ಜತೆಗೆ ಪರಿಸರ ಮಾಲಿನ್ಯ ಕೂಡಾ ತಗ್ಗಲಿದೆ. ಅದರಂತೆ ಕೆಎಸ್‌ಆರ್‌ಟಿಸಿ ಕೂಡಾ ಸದ್ಯ ವಿದ್ಯುತ್‌ ಚಾಲಿತ ಬಸ್‌ಗಳತ್ತ ಮುಖ ಮಾಡುತ್ತಿದೆ. ಆರಂಭದಲ್ಲಿ 50 ಬಸ್‌ಗಳನ್ನು ಖರೀದಿಸುತ್ತಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದು ಜತೆಗೆ ನಿಗಮಕ್ಕೂ ಲಾಭ ಬಂದರೆ ಮುಂದಿನ ದಿನಗಳಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.

KSRTC:ತಿಂಗಳಾಂತ್ಯದಲ್ಲಿ ಕೆಎಸ್‌ಆರ್ ಟಿಸಿಗೂ ಬರಲಿವೆ ಎಲೆಕ್ಟ್ರಿಕ್ ಬಸ್‌ಗಳು..!

43 ಆಸನ- ಒಮ್ಮೆ ಚಾರ್ಜ್‌  ಮಾಡಿದರೆ 270 ಕಿ.ಮೀ:

ಬಸ್‌ ಹವಾನಿಯಂತ್ರಿತ (ಎಸಿ) ವ್ಯವಸ್ಥೆ ಒಳಗೊಂಡಿದ್ದು, 43 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಇದೆ. ಒಮ್ಮೆ ಚಾರ್ಜ್‌ ಮಾಡಿದರೆ 250 ರಿಂದ 270 ಕಿ.ಮೀ ಸಾಗಲಿದೆ. ಬಸ್‌ಗಳ ಜಾರ್ಜಿಂಗ್‌ಗಾಗಿ ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ (ಮೆಜೆಸ್ಟಿಕ್‌), ಮೈಸೂರು, ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಚಾಜ್‌ರ್‍ ಸ್ಟೇಷನ್‌ ನಿರ್ಮಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

55 ರು. ನಿರ್ವಹಣಾ ವೆಚ್ಚ: ವೋಲ್ವೊಗಿಂತ ಕಡಿಮೆ:

ಕೆಎಸ್‌ಆರ್‌ಟಿಸಿ ಖರೀದಿಸುತ್ತಿರುವ ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣಾ ವೆಚ್ಚ ಪ್ರತಿ ಕಿ.ಮೀ.ಗೆ 55 ರು. ಆಗಿದೆ. ಸದ್ಯ ಕೆಎಸ್‌ಆರ್‌ಟಿಸಿ ವೋಲ್ವೊ ಬಸ್‌ಗಳಿಗೆ ಪ್ರತಿ ಕಿ.ಮೀಗೆ 70 ರು. ಆಗುತ್ತಿದೆ. ಈ ಎಲೆಕ್ಟ್ರಿಕ್‌ ಬಸ್‌ಗಳ ಮೂಲಕ 15 ರು. ಉಳಿತಾಯವಾಗಲಿದೆ.

ಕೆಎಸ್‌ಆರ್‌ಟಿಸಿ ಮೊದಲ ಎಲೆಕ್ಟ್ರಿಕ್‌ ಬಸ್‌ ಸಂಚಾರ ಶೀಘ್ರ

ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ಗಳಂತೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಕೂಡಾ, ಅದ​ನ್ನು ನಿರ್ಮಿಸಿದ ಕಂಪನಿಯೇ ನಿರ್ವಹಣೆ ಮಾಡಲಿದೆ. ಚಾಲಕರನ್ನು ಕೂಡಾ ಬಸ್‌ ಕಂಪನಿಯೇ ನೇಮಿಸಲಿದೆ. ಕೇಂದ್ರ ಸರ್ಕಾರದ ಫೆಮ್‌ 2 ಕಾರ್ಯಕ್ರಮದಡಿ ಜಿಸಿಸಿ ಮಾದರಿಯಲ್ಲಿ ಸಬ್ಸಿಡಿಯಲ್ಲಿ 55 ಲಕ್ಷ ರು.ಗೆ ಬಸ್‌ಗಳನ್ನು ನೀಡಲಾಗುತ್ತಿದೆ. ಬಸ್‌ ಪೂರ್ಣ ವೆಚ್ಚ 1.8 ಕೋಟಿ ರು. ಆಗಿದೆ.

ಎಲೆಕ್ಟ್ರಿಕ್‌ ಬಸ್‌ ಓಡಾಟಕ್ಕೆ ನಿರ್ಧರಿಸಿರುವ ಮಾರ್ಗ

ಬೆಂಗಳೂರು - ಮಡಿಕೇರಿ
ಬೆಂಗಳೂರು - ದಾವಣಗೆರೆ
ಬೆಂಗಳೂರು - ಮೈಸೂರು
ಬೆಂಗಳೂರು - ಚಿಕ್ಕಮಗಳೂರು
ಬೆಂಗಳೂರು - ವಿರಾಜಪೇಟೆ
ಬೆಂಗಳೂರು - ಶಿವಮೊಗ್ಗ

ಮುಂದಿನ ಒಂದು ವಾರದಲ್ಲಿ ಪ್ರಾಯೋಗಿಕ ಸಂಚಾರಕ್ಕೆ ಒಂದು ಬಸ್‌ ಲಭ್ಯವಾಗುತ್ತಿದ್ದು, ಡಿಸೆಂಬರ್‌ ಅಂತ್ಯದೊಳಗೆ 25 ಬಸ್‌ ನಿಗಮಕ್ಕೆ ಸೇರಲಿವೆ. ಬೆಂಗಳೂರಿನಿಂದ ಐದು ಜಿಲ್ಲೆಗಳಿಗೆ ಓಡಾಟ ನಡೆಸಲು ನಿರ್ಧರಿಸಲಾಗಿದೆ ಅಂತ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ತಿಳಿಸಿದ್ದಾರೆ.   
 

Latest Videos
Follow Us:
Download App:
  • android
  • ios