ಚಾಲನಾ ಸಿಬ್ಬಂದಿ ಕರ್ತವ್ಯದ ವೇಳೆ ಮದ್ಯಪಾನ ಮಾಡುವುದನ್ನು ತಡೆಯಲು ಹೊಸ ಉಪಾಯ ಕಂಡುಕೊಳ್ಳಲಾಗಿದೆ. ಅದರಂತೆ ಘಟಕಗಳು, ಸಿಬ್ಬಂದಿ ವಸತಿ ಸ್ಥಳ ಮತ್ತು ಮಾರ್ಗ ಮಧ್ಯದಲ್ಲಿನ ಜಾಗೃತಗೊಳಿಸುವ ಸ್ಥಳಗಳಲ್ಲಿ ಚಾಲನಾ ಸಿಬ್ಬಂದಿಯನ್ನು ಉಸಿರು ತಪಾಸಣಾ ಯಂತ್ರದ ಮೂಲಕ ತಪಾಸಣೆಗೊಳಪಡಿಸಲು ನಿರ್ಧರಿಸಲಾಗಿದೆ.

ಬೆಂಗಳೂರು(ಮಾ.30):  ಕರ್ತವ್ಯದ ವೇಳೆ ಚಾಲಕರು ಮದ್ಯಪಾನ ಮಾಡುವುದನ್ನು ತಡೆಯಲು ಕೆಎಸ್ಸಾರ್ಟಿಸಿ ವತಿಯಿಂದ ಬಸ್‌ ಘಟಕಗಳೂ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಿಯಮಿತವಾಗಿ ಚಾಲನಾ ಸಿಬ್ಬಂದಿಯ ಉಸಿರು ತಪಾಸಣೆ ಮಾಡಲು ನಿರ್ಧರಿಸಲಾಗಿದೆ.

ಕೆಎಸ್ಸಾರ್ಟಿಸಿ ಬಸ್‌ಗಳಿಂದ ಉಂಟಾಗುವ ಅಪಘಾತಕ್ಕೆ ಚಾಲನಾ ಸಿಬ್ಬಂದಿ ಬಸ್‌ ಚಾಲನೆ ಮಾಡುವ ಸಂದರ್ಭದಲ್ಲಿ ಮದ್ಯಪಾನ ಮಾಡುವುದೂ ಒಂದು ಕಾರಣವಾಗಿದೆ. ಈ ಕುರಿತಂತೆ ಮಾ.26ರಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಅಪಘಾತ ಪ್ರಕರಣಗಳ ವಿಶ್ಲೇಷಣಾ ಸಭೆಯಲ್ಲೂ ಚರ್ಚಿಸಲಾಗಿದೆ. ಅದಕ್ಕಾಗಿ ಚಾಲನಾ ಸಿಬ್ಬಂದಿ ಕರ್ತವ್ಯದ ವೇಳೆ ಮದ್ಯಪಾನ ಮಾಡುವುದನ್ನು ತಡೆಯಲು ಹೊಸ ಉಪಾಯ ಕಂಡುಕೊಳ್ಳಲಾಗಿದೆ. ಅದರಂತೆ ಘಟಕಗಳು, ಸಿಬ್ಬಂದಿ ವಸತಿ ಸ್ಥಳ ಮತ್ತು ಮಾರ್ಗ ಮಧ್ಯದಲ್ಲಿನ ಜಾಗೃತಗೊಳಿಸುವ ಸ್ಥಳಗಳಲ್ಲಿ ಚಾಲನಾ ಸಿಬ್ಬಂದಿಯನ್ನು ಉಸಿರು ತಪಾಸಣಾ ಯಂತ್ರದ ಮೂಲಕ ತಪಾಸಣೆಗೊಳಪಡಿಸಲು ನಿರ್ಧರಿಸಲಾಗಿದೆ.

ಡ್ರೈವರ್ ಗಳಿಗೆ ಗುಡ್ ನ್ಯೂಸ್ ಕೊಟ್ಟ ಕೆಎಸ್ಆರ್‌ಟಿಸಿ, ಕಡ್ಡಾಯ ನಿಯಮ ಜಾರಿಗೆ

ಈ ಕುರಿತಂತೆ ನಿಗಮದ ಸಿಬ್ಬಂದಿ ಮತ್ತು ಭದ್ರತಾ ವಿಭಾಗದ ನಿರ್ದೇಶಕರು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಆದೇಶಿಸಿದ್ದು, ಘಟಕದಿಂದ ಬಸ್‌ಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ, ರಾತ್ರಿ ಸಂಚರಿಸುವ ವಾಹನಗಳ ಚಾಲನಾ ಸಿಬ್ಬಂದಿಯನ್ನು ಜಾಗೃತಗೊಳಿಸಲು ನಿಗದಿಪಡಿಸಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಚಾಲನಾ ಸಿಬ್ಬಂದಿಯನ್ನು ಉಸಿರು ತಪಾಸಣಾ ಯಂತ್ರದ ಮೂಲಕ ತಪಾಸಣೆ ನಡೆಸಬೇಕು. ಆಮೂಲಕ ಚಾಲನಾ ಸಿಬ್ಬಂದಿ ಮದ್ಯಪಾನ ಮಾಡಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಬಸ್‌ ಚಾಲನೆ ಮುಂದುವರಿಸುವಂತೆ ಮಾಡಬೇಕು ಎಂದು ಸೂಚಿಸಲಾಗಿದೆ.