ಬೆಂಗಳೂರು (ಆ. 28): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಅನುಪಯುಕ್ತ ಬಸ್‌ ಬಳಸಿಕೊಂಡು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಿರುವ ಮಹಿಳಾ ಸ್ನೇಹಿ ಸುಸಜ್ಜಿತ ‘ಸ್ತ್ರೀ ಶೌಚಾಲಯ’ವನ್ನು ಗುರುವಾರ ಲೋಕಾರ್ಪಣೆ ಮಾಡಲಾಯಿತು.

ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣದ ಒಂದನೇ ಟರ್ಮಿನ್‌ನ ಪ್ರವೇಶ ದ್ವಾರದ ಸಮೀಪ ಈ ವಿಶಿಷ್ಟಶೌಚಾಲಯದ ಬಸ್‌ ನಿಲುಗಡೆ ಮಾಡಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್‌) ಸಿಎಸ್‌ಆರ್‌ ಯೋಜನೆಯಡಿ 12 ಲಕ್ಷ ರು. ವೆಚ್ಚದಲ್ಲಿ ಗುಜರಿ ಬಸ್ಸನ್ನು ಹೈಟೆಕ್‌ ಶೌಚಾಲಯವಾಗಿ ಪರಿವರ್ತಿಸಲಾಗಿದೆ. ಈ ಮುಖಾಂತರ ಕೆಎಸ್‌ಆರ್‌ಟಿಸಿ ಅನುಪಯುಕ್ತ ಬಸ್ಸನ್ನು ಬಳಸಿಕೊಂಡು ಅತ್ಯಾಧುನಿಕ ಶೌಚಾಲಯ ನಿರ್ಮಾಣ ಮಾಡಿದ ದೇಶದ ಮೊದಲ ರಸ್ತೆ ಸಾರಿಗೆ ನಿಗಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದರಲ್ಲಿ ಏನೇನಿದೆ?:

ಹನ್ನೆರಡು ಮೀಟರ್‌ ಉದ್ದದ ಈ ಬಸ್‌ನಲ್ಲಿ ಇಂಜಿನ್‌, ಆಸನಗಳು, ಸ್ಟೇರಿಂಗ್‌ ಸೇರಿದಂತೆ ಎಲ್ಲವನ್ನೂ ತೆರವುಗೊಳಿಸಿ, ಹೈಟೆಕ್‌ ಶೌಚಾಲಯವಾಗಿ ಪರಿವರ್ತಿಸಲಾಗಿದೆ. ಇದರಲ್ಲಿ ಮೂರು ಭಾರತೀಯ ಶೈಲಿ ಹಾಗೂ ಎರಡು ಪಾಶ್ಚಾತ್ಯ ಶೈಲಿಯ ಶೌಚಾಲಯ ಸೇರಿ ಒಟ್ಟು ಐದು ಶೌಚಾಲಯಗಳಿವೆ. ಮಹಿಳೆಯರು ಮಕ್ಕಳಿಗೆ ಎದೆ ಹಾಲುಣಿಸಲು ಪ್ರತ್ಯೇಕ ಕೊಠಡಿ, ಮಕ್ಕಳಿಗೆ ಡೈಪರ್‌ ಬದಲಾಯಿಸಲು ಪ್ರತ್ಯೇಕ ಸ್ಥಳ, ಕೈ ತೊಳೆಯುವ ಎರಡು ಬೇಸಿನ್‌, ಸ್ಯಾನಿಟರಿ ನ್ಯಾಪ್‌ಕಿನ್‌ ವೆಂಡಿಂಗ್‌ ಯಂತ್ರ,ಸೆನ್ಸರ್‌ ದೀಪಗಳು, ಸೋಲಾರ್‌ ವಿದ್ಯುತ್‌ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳಿವೆ. ವಾಷ್‌ ಬೇಸಿನ್‌ಗಳಲ್ಲಿ ಸೆನ್ಸರ್‌ ತಂತ್ರಜ್ಞಾನ ಅಳವಡಿಸಲಾಗಿದೆ.ಅತ್ಯಾಧುನಿಕ ಶೌಚಾಲಯ ದಿನದ 24 ತಾಸು ಬಳಕೆಗೆ ಲಭ್ಯವಾಗಲಿದೆ. ಮೂತ್ರ ವಿಸರ್ಜನೆಗೆ ಯಾವುದೇ ಶುಲ್ಕವಿಲ್ಲ. ಮಲ ವಿಸರ್ಜನೆಗೆ ನಿಗದಿತ ಶುಲ್ಕ ಪಾವತಿಸಬೇಕು.

ಪುಣೆಯಲ್ಲಿ ನಿರ್ಮಾಣ:

ಪುಣೆಯಲ್ಲಿ ಗುಜರಿ ವಾಹನವೊಂದನ್ನು ಬಳಸಿಕೊಂಡು ‘ಶೀ ಟಾಯ್ಲೆಟ್‌’ ಹೆಸರಿನಲ್ಲಿ ಶೌಚಾಲಯ ನಿರ್ಮಿಸಲಾಗಿತ್ತು. ಕೆಎಸ್‌ಆರ್‌ಟಿಸಿ ‘ಶಿ ಟಾಯ್ಲೆಟ್‌’ ನಿರ್ಮಾಣ ಮಾಡಿದ್ದ ಪುಣೆ ಮೂಲದ ಕಂಪನಿಯಿಂದಲೇ ಗುಜರಿ ಬಸ್ಸನ್ನು ಶೌಚಾಲಯವಾಗಿ ಪರಿವರ್ತಿಸಿದೆ. ಬೆಂಗಳೂರಿನ ಕೇಂದ್ರ ವಿಭಾಗದ ಗುಜರಿ ಬಸ್ಸನ್ನು ದೊಡ್ಡ ಲಾರಿಯಲ್ಲಿ ಪುಣೆಗೆ ಸಾಗಿಸಲಾಗಿತ್ತು. ಕಳೆದ ಭಾನುವಾರ ಬಸ್‌ ಶೌಚಾಲಯವನ್ನು ನಗರಕ್ಕೆ ತರಲಾಗಿತ್ತು.

ರಾಜ್ಯದೆಲ್ಲೆಡೆ ಇದೇ ಮಾದರಿಯ ಸ್ತ್ರೀ ಶೌಚಾಲಯ: ಸಚಿವ ಸವದಿ

ಮಹಿಳಾ ಪ್ರಯಾಣಿಕರು ಈ ಸ್ತ್ರೀ ಶೌಚಾಲಯದ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಮನವಿ ಮಾಡಿದರು.

ಗುರುವಾರ ‘ಸ್ತ್ರೀ ಶೌಚಾಲಯ’ ಉದ್ಘಾಟಿಸಿ ಬಳಿಕ ಮಾತನಾಡಿ, ಪ್ರಾಯೋಗಿಕವಾಗಿ ಒಂದು ಅನುಪಯುಕ್ತ ಬಸ್ಸನ್ನು ಶೌಚಾಲಯವಾಗಿ ಮಾರ್ಪಡಿಸಲಾಗಿದೆ. ಮಹಿಳಾ ಪ್ರಯಾಣಿಕರು ಈ ವ್ಯವಸ್ಥೆಯನ್ನು ಬಳಸಿಕೊಳ್ಳುವುದರೊಂದಿಗೆ ಅದರಲ್ಲಿನ ಸ್ವಚ್ಛತೆಯನ್ನು ಕಾಪಾಡಲು ಸಹಕರಿಸಬೇಕು. ಈ ನೂತನ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ವಚ್ಛ ಭಾರತ’ ಯೋಜನೆಗೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಗುಜರಿ ಬಸ್ಸುಗಳನ್ನು ಸ್ತ್ರೀ ಶೌಚಾಲಯವಾಗಿ ಮಾರ್ಪಡಿಸಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದಾಗಿ ಹೇಳಿದರು.

ಬಸ್‌ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಮೂಲಸೌಕರ್ಯ ಒದಗಿಸುವುದರೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡಲಾಗಿದೆ. ತ್ಯಾಜ್ಯ ಹಾಗೂ ನಿರುಪಯುಕ್ತ ಬಸ್ಸುಗಳನ್ನು ನಾನಾ ರೀತಿಯಲ್ಲಿ ಮರುಬಳಕೆ ಮಾಡುವುದರಿಂದ ತ್ಯಾಜ್ಯಗಳ ವಿಲೇವಾರಿ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ವೆಚ್ಚದ ದೃಷ್ಟಿಯಲ್ಲೂ ಇದು ನಿಗಮಕ್ಕೆ ಉಳಿತಾಯವಾಗಲಿದೆ ಎಂದರು.