ಬೆಂಗಳೂರು(ಫೆ.15): ಕೆಎಸ್‌ಆರ್‌ಟಿಸಿ ಬಸ್‌ ಚಾಲಕರು ಕರ್ತವ್ಯದ ವೇಳೆ ಮೊಬೈಲ್‌ ಇಟ್ಟುಕೊಳ್ಳುವುದನ್ನು ನಿಷೇಧಿಸಿದ್ದ ಆದೇಶ ಹಿಂಪಡೆಯಲಾಗಿದ್ದು, ಅಪಘಾತದಂತಹ ತುರ್ತು ಸಂದರ್ಭದಲ್ಲಿ ಮಾತ್ರ ಮಾಹಿತಿ ನೀಡಲು ಚಾಲಕರು ಮೊಬೈಲ್‌ ಬಳಸಬಹುದು ಎಂದು ತಿಳಿಸಿದೆ.

ರಾಜ್ಯ ಜನರಿಗೆ ಮತ್ತೊಂದು ಶಾಕ್, ಬಸ್ ಪ್ರಯಾಣ ದರ ಏರಿಕೆ!

ಕಳೆದ ಕೆಲ ತಿಂಗಳ ಹಿಂದಷ್ಟೇ ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆಯಿಲ್ಲದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರು ಕರ್ತವ್ಯದ ವೇಳೆ ಮೊಬೈಲ್‌ ಇಟ್ಟುಕೊಳ್ಳುವುದನ್ನು ಸರ್ಕಾರ ನಿಷೇಧಿಸಿತ್ತು. ಅದರಿಂದ ಅಪಘಾತ, ಗಲಭೆ ಸೇರಿ ಇತರ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಕೇಂದ್ರ ಕಚೇರಿ ಅಥವಾ ಸಂಬಂಧಪಟ್ಟಅಧಿಕಾರಿಗಳಿಗೆ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮೊಬೈಲ್‌ ನಿಷೇಧವನ್ನು ಹಿಂಪಡೆಯಲಾಗಿದೆ. ಆದರೆ, ಕರ್ತವ್ಯದ ವೇಳೆ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಆದೇಶದಲ್ಲಿ ತಿಳಿಸಿದ್ದಾರೆ.

ಅಪಘಾತಕ್ಕೆ ಪರಿಹಾರದ ನೀಡದ ಕೆಎಸ್‌ಆರ್‌ಟಿಸಿ ಬಸ್‌ಗಳ ಜಪ್ತಿ

ಚಾಲನೆ ಮಾಡುವಾಗ ಮೊಬೈಲ್‌ ಬಳಸಿದರೆ ಕೆಂಪು ಗುರುತಿನ ಪ್ರಕರಣ ದಾಖಲಿಸಲಾಗುವುದು. ಹೀಗೆ ಪ್ರಕರಣ ದಾಖಲಾಗುವ ಚಾಲಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಅಲ್ಲದೆ, ಅಂತಹ ಸಿಬ್ಬಂದಿಯನ್ನು ಕಡ್ಡಾಯವಾಗಿ ಘಟಕ ಬದಲಾವಣೆ ಶಿಕ್ಷೆ ನೀಡಲಾಗುವುದು ಎಂದು ಎಚ್ಚರಿಸಲಾಗಿದೆ. ಜತೆಗೆ ತನಿಖಾ ಸಿಬ್ಬಂದಿಗಳು ತನಿಖೆ ಸಮಯದಲ್ಲಿ ಚಾಲನಾ ಸಿಬ್ಬಂದಿ ಮೊಬೈಲ್‌ ಬಳಸುತ್ತಿರುವುದು ಗಮನಕ್ಕೆ ಬಂದರೆ ಮಾತ್ರ ಪ್ರಕರಣ ದಾಖಲಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.