ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಯಶಸ್ವಿಯಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಅದರಿಂದ ಸಾರ್ವಜನಿಕ ಸಾರಿಗೆ ಅಭಿವೃದ್ಧಿ ಹೊಂದಲು ನೆರವಾಗಲಿದೆ: ರಾಮಲಿಂಗಾರೆಡ್ಡಿ

ಬೆಂಗಳೂರು(ಜೂ.25): ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಈ ಹಿಂದೆ ಪ್ರತಿದಿನ 84 ಲಕ್ಷವಿದ್ದ ಪ್ರಯಾಣಿಕರ ಸಂಖ್ಯೆ ಈಗ 1.5 ಕೋಟಿಗೆ ತಲುಪಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಆರ್ಥಿಕ ಸಬಲೀಕರಣ ಕುರಿತಂತೆ ವರದಿ ನೀಡಲು ನೇಮಿಸಲಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಶ್ರೀನಿವಾಸಮೂರ್ತಿ ಅವರು ಶನಿವಾರ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವರದಿ ಸಲ್ಲಿಸಿದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಸರ್ಕಾರ ಸಹಾಯಧನ ನೀಡದಿದ್ರೆ ಸಾಲದ ಸುಳಿಯಲ್ಲಿ ಸಾರಿಗೆ ಇಲಾಖೆ

ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಯಶಸ್ವಿಯಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಅದರಿಂದ ಸಾರ್ವಜನಿಕ ಸಾರಿಗೆ ಅಭಿವೃದ್ಧಿ ಹೊಂದಲು ನೆರವಾಗಲಿದೆ. ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಶ್ರೀನಿವಾಸಮೂರ್ತಿ ಅವರು ನೀಡಿರುವ ವರದಿಯಲ್ಲಿ ಸಾರಿಗೆ ನಿಗಮಗಳ ಸಬಲೀಕರಣಕ್ಕಾಗಿ ಹೊಸ ಬಸ್‌ಗಳ ಸೇರ್ಪಡೆ, ಪರಿಣಾಮಕಾರಿಯಾಗಿ ಮಾಹಿತಿ ತಂತ್ರಜ್ಞಾನ ಬಳಕೆ, ಕಾರ್ಮಿಕ ಸ್ನೇಹಿ ಕ್ರಮಗಳು, ಸಿಬ್ಬಂದಿ ನೇಮಕ ಸೇರಿದಂತೆ ಇತರ ವಿಷಯಗಳ ಕುರಿತಂತೆ ವರದಿ ನೀಡಲಾಗಿದೆ. ಅವುಗಳನ್ನು ಅಧ್ಯಯನ ಮಾಡಿ ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲಾಗುವುದು ಎಂದರು.

ಸಂಪನ್ಮೂಲ ನಗದೀಕರಣಕ್ಕಾಗಿ ಶೀಘ್ರದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುವುದು. ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿನ ಖಾಲಿ ಜಾಗಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಅವುಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೆಎಸ್ಸಾರ್ಟಿಸಿ ವ್ಯಾಪ್ತಿಯ ವಿಭಾಗ ಹಾಗೂ ಕಾರ್ಯಾಗಾರಗಳಲ್ಲಿ 460ಕ್ಕೂ ಹೆಚ್ಚಿನ ಹಳೇ ಬಸ್‌ಗಳನ್ನು ಪುನಶ್ಚೇತನಗೊಳಿಸಿರುವುದು ಶ್ಲಾಘನೀಯ. ಈ ಕಾರ್ಯವನ್ನು ಉಳಿದ ಮೂರು ನಿಗಮಗಳಲ್ಲೂ ಮಾಡಬೇಕು. ಬಸ್‌ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿ, ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಕಾಲಕಾಲಕ್ಕೆ ಬಸ್‌ ನಿಲ್ದಾಣಗಳಿಗೆ ತೆರಳಿ ಮೂಲಸೌಕರ್ಯ ವ್ಯವಸ್ಥಿತವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌, ಬಿಎಂಟಿಸಿ ಎಂಡಿ ಜಿ. ಸತ್ಯತವಿ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂಡಿ ಎಸ್‌. ಭರತ್‌, ಕೆಎಸ್ಸಾರ್ಟಿಸಿ ನಿರ್ದೇಶಕ ಪ್ರಶಾಂತ್‌ಕುಮಾರ್‌ ಮಿಶ್ರ ಇತರರಿದ್ದರು.

ಬಿಜೆಪಿ ಬಗ್ಗೆ ಜನರು ಬೇಸತ್ತಿದ್ದಾರೆ: ರಾಮಲಿಂಗಾ ರೆಡ್ಡಿ

ಹಳೆ ಬಸ್‌ ಗುಜರಿಗೆ ಹಾಕಿ 4000 ಹೊಸ ಬಸ್‌ ಖರೀದಿ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಂದ ಉತ್ತಮ ಸೇವೆ ನೀಡುವ ಸಲುವಾಗಿ 4 ಸಾವಿರ ಹೆಚ್ಚುವರಿ ಬಸ್‌ಗಳ ಸೇರ್ಪಡೆಗೆ ನಿರ್ಧರಿಸಲಾಗಿದೆ. ಅದರಲ್ಲಿ 3 ಸಾವಿರಕ್ಕೂ ಹೆಚ್ಚಿನವು ಸಾಮಾನ್ಯ ಬಸ್‌ಗಳಾಗಿದ್ದು, ಉಳಿದವು ಮಲ್ಟಿಆಕ್ಸೆಲ್‌ ಬಸ್‌ಗಳಾಗಿವೆ. ಶಕ್ತಿ ಯೋಜನೆಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಸಂಸ್ಥೆಯಿಂದ ಉತ್ತಮ ಸೇವೆ ನೀಡುವ ಸಲುವಾಗಿ ಹೊಸದಾಗಿ 4 ಸಾವಿರ ಬಸ್‌ಗಳ ಸೇರ್ಪಡೆ ಮಾಡಲಾಗುತ್ತಿದೆ. ಈಗಿರುವ ಬಸ್‌ಗಳನ್ನು ಪರೀಕ್ಷೆಗೊಳಪಡಿಸಿ ಅನುಪಯುಕ್ತ ಬಸ್‌ಗಳನ್ನು ಸ್ಕ್ರಾಪ್‌ ಮಾಡಲು ನಿರ್ಧರಿಸಲಾಗಿದೆ. ಅದರ ಜತೆಗೆ ಬಸ್‌ಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಿಕೊಳ್ಳದಂತೆ ಚಾಲಕ ಮತ್ತು ನಿರ್ವಾಹಕರಿಗೆ ಸೂಚಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಈ ಹಿಂದೆ ನಾನು ಸಾರಿಗೆ ಸಚಿವನಾಗಿದ್ದ ಸಂದರ್ಭದಲ್ಲಿ ಸಂಸ್ಥೆಯ ನಷ್ಟದ ಪ್ರಮಾಣ 300ರಿಂದ 400 ಕೋಟಿ ರು. ಇತ್ತು. ಆದರೀಗ, ಅದು 4 ಸಾವಿರ ಕೋಟಿ ರು.ಗೆ ತಲುಪಿದೆ. ನಾಲ್ಕೂ ನಿಗಮಗಳ ನಷ್ಟವನ್ನು ತಗ್ಗಿಸಲು ಕ್ರಮ ಸೂಕ್ತ ಕ್ರಮ ಕೈಗೊಳ್ಳಲಾಗತ್ತದೆ ಎಂದು ಹೇಳಿದರು.