ಬೆಂಗಳೂರು (ಡಿ.19): ಸಾರಿಗೆ ನೌಕರರ ಮುಷ್ಕರದಿಂದ ನಾಲ್ಕು ದಿನ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೋರಿಕೆ ಮೇರೆಗೆ ಮಾಸಿಕ ಬಸ್‌ ಪಾಸ್‌ ಮಾನ್ಯತೆಯನ್ನು ನಾಲ್ಕು ದಿನ ವಿಸ್ತರಿಸಲಾಗಿದೆ.

 ಡಿ.11ರಿಂದ ಡಿ.14ರವರೆಗೆ ಸಾರಿಗೆ ನೌಕರರು ಮುಷ್ಕರ ಮಾಡಿದ ಹಿನ್ನೆಲೆಯಲ್ಲಿ ಬಸ್‌ ಸಂಚಾರ ಸ್ಥಗಿತವಾಗಿತ್ತು. ಈ ಹಿನ್ನೆಲೆಯಲ್ಲಿ ಮಾಸಿಕ ಬಸ್‌ ಪಾಸ್‌ ಪಡೆದಿರುವ ಪ್ರಯಾಣಿಕರು ನಾಲ್ಕು ದಿನಗಳ ಕಾಲ ಬಸ್‌ ಪಾಸ್‌ ವಿಸ್ತರಿಸುವಂತೆ ಮನವಿ ಮಾಡಿದ್ದರು. 

ಸಾರಿಗೆ ಮುಷ್ಕರ ಅಂತ್ಯವಾಗಲು ನಿಜವಾದ ಕಾರಣ ಏನು? ಆ ಒಂದು ಬೇಡಿಕೆ!

ಈ ಮನವಿ ಪುರಸ್ಕರಿಸಿರುವ ಕೆಎಸ್‌ಆರ್‌ಟಿಸಿ, ಡಿಸೆಂಬರ್‌ ತಿಂಗಳ ಮಾಸಿಕ ಪಾಸ್‌ ಮಾನ್ಯತೆ ಮುಗಿದರೂ ಜನವರಿಯಲ್ಲಿ ನಾಲ್ಕು ದಿನಗಳ ಕಾಲ ಪಾಸ್‌ ಮಾನ್ಯ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದೆ. 

ಅಂತೆಯೆ ಮಾಸಿಕ ಪಾಸ್‌ ಹೊಂದಿರುವ ಪ್ರಯಾಣಿಕರು ಪಾಸು ವಿತರಣೆಗೆ ಕೌಂಟರ್‌ಗೆ ತೆರಳಿ ಪಾಸ್‌ನ ಚಾಲ್ತಿ ಅವಧಿ ನಾಲ್ಕು ದಿನಗಳಿಗೆ ವಿಸ್ತರಣೆಯಾಗಿರುವ ಬಗ್ಗೆ ದಿನಾಂಕ, ಸಹಿ ಹಾಗೂ ಮೊಹರನ್ನು ಹಾಕಿಸಿಕೊಳ್ಳುವಂತೆ ಕೋರಿದೆ.