ಕೊರೋನಾ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಸೋಂಕು ಆರಂಭವಾದ ದಿನದಿಂದಲೂ ಎಲ್ಲಾ ಕ್ಷೇತ್ರಗಳೂ ನಷ್ಟದ ಕೂಪಕ್ಕೆ ಸಿಲುಕಿ ತತ್ತರಿಸಿ ಹೋಗಿವೆ. ಅದೇ ರೀತಿ ಸಾರಿಗೆ ಇಲಾಖೆಯ ಮಂಡ್ಯ ವಿಭಾಗವೂ 4 ತಿಂಗಳಿಂದ 30.4 ಕೋಟಿ ರು. ನಷ್ಟಅನುಭವಿಸಿದೆ. ನಷ್ಟದಿಂದ ಹೊರಬರುವುದಕ್ಕೆ ತಿಣುಕಾಟ ನಡೆಸುತ್ತಿದೆ.

ಮಂಡ್ಯ(ಜು.23): ಕೊರೋನಾ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಸೋಂಕು ಆರಂಭವಾದ ದಿನದಿಂದಲೂ ಎಲ್ಲಾ ಕ್ಷೇತ್ರಗಳೂ ನಷ್ಟದ ಕೂಪಕ್ಕೆ ಸಿಲುಕಿ ತತ್ತರಿಸಿ ಹೋಗಿವೆ. ಅದೇ ರೀತಿ ಸಾರಿಗೆ ಇಲಾಖೆಯ ಮಂಡ್ಯ ವಿಭಾಗವೂ 4 ತಿಂಗಳಿಂದ 30.4 ಕೋಟಿ ರು. ನಷ್ಟಅನುಭವಿಸಿದೆ. ನಷ್ಟದಿಂದ ಹೊರಬರುವುದಕ್ಕೆ ತಿಣುಕಾಟ ನಡೆಸುತ್ತಿದೆ.

ಕೊರೋನಾ ಸೋಂಕಿಗೆ ಹೆದರಿರುವ ಜನ ತಾವಿದ್ದ ಊರುಗಳನ್ನು ಬಿಟ್ಟು ಬರಲು ಮನಸ್ಸು ಮಾಡುತ್ತಿಲ್ಲ. ಕೆಲ ಊರಿನವರು ಹೊರಗೆ ಹೋಗದಂತೆ ಗ್ರಾಮದ ಜನರಿಗೆ ನಿರ್ಬಂಧ ಹಾಕಿದ್ದಾರೆ. ಮತ್ತೆ ಕೆಲವು ಗ್ರಾಮದವರು ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ. ಜನರು ನಗರ- ಪಟ್ಟಣ ಪ್ರದೇಶಗಳತ್ತ ಸುಳಿಯುವ ಪ್ರಯತ್ನ ನಡೆಸದೇ ಇರುವ ಕಾರಣ ಜಿಲ್ಲೆಯ ಬಹುತೇಕ ಭಾಗಗಳಿಂದ ಸಾರಿಗೆ ಬಸ್‌ಗಳಿಗೆ ಬೇಡಿಕೆಯೇ ಕಂಡುಬರುತ್ತಿಲ್ಲ.

ತಾಲೂಕುಗಳಿಗೆ ನೇರ ಸಂಪರ್ಕ:

ಕೊರೋನಾ ಕಾರಣದಿಂದ ಹಾಲಿ ಜಿಲ್ಲೆಯ 7 ತಾಲೂಕುಗಳಿಗೆ ನೇರ ಸಂಪರ್ಕ ಕಲ್ಪಿಸುವ ರೀತಿ ಬಸ್‌ಗಳನ್ನು ಸಂಚಾರಕ್ಕೆ ಬಿಡಲಾಗಿದೆ. ಸುಮಾರು 62 ಬಸ್‌ಗಳನ್ನು ಈ ಮಾರ್ಗಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ಜನರು ಸಾರಿಗೆ ಬಸ್‌ಗಳನ್ನು ಹತ್ತುತ್ತಿಲ್ಲ. 30 ಮಂದಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ನಿಲ್ದಾಣದಲ್ಲಿ ಗಂಟೆಗಟ್ಟಲೆ ಬಸ್‌ ನಿಲ್ಲಿಸಿದರೂ ಹತ್ತುವುದು ಮಾತ್ರ 15 ರಿಂದ 20 ಜನ ಮಾತ್ರ. ಜನರಿಗಾಗಿ ಕಾದು ಕಾದು ರೋಸಿಹೋಗುವ ಚಾಲಕರು-ನಿರ್ವಾಹಕರು ಇದ್ದಷ್ಟುಜನರನ್ನು ಹತ್ತಿಸಿಕೊಂಡು ಬರುತ್ತಿದ್ದಾರೆ.

ಕರ್ನಾಟಕದ ಸರಕು ವಾಹನಗಳಿಗೆ ಕೇರಳ ಪ್ರವೇಶ ತಡೆ

ಸದ್ಯಕ್ಕೆ ಶ್ರೀರಂಗಪಟ್ಟಣದಿಂದ ಮದ್ದೂರಿಗೆ 4 ಬಸ್‌, ಮಂಡ್ಯ-ಪಾಂಡವಪುರ 2, ಮಂಡ್ಯ-ಮಳವಳ್ಳಿ 2 ಬಸ್‌ಗಳು ಸೇರಿದಂತೆ 62 ಬಸ್‌ಗಳನ್ನು ತಾಲೂಕಿನ ವಿವಿಧ ಕಡೆಗೆ ಸಂಚಾರಕ್ಕೆ ಬಿಡಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ 3 ರಿಂದ 4 ಟ್ರಿಪ್‌ ಸಂಚರಿಸುವ ಬಸ್‌ಗಳು ಸಂಜೆ 7 ಗಂಟೆಯ ಬಳಿಕ ಯಾವ ಮಾರ್ಗದಲ್ಲೂ ಸಂಚರಿಸುವುದಿಲ್ಲ.

ಹಲವಾರು ತೊಂದರೆ:

ಸಾರಿಗೆ ಬಸ್‌ಗಳಿಗೆ ಬೇಡಿಕೆ ಸೃಷ್ಠಿಯಾಗದಿರುವುದಕ್ಕೆ ಹಲವಾರು ತೊಂದರೆಗಳಿವೆ. ಶಾಲಾ-ಕಾಲೇಜುಗಳು ಆರಂಭವಾಗಿಲ್ಲ, ರೈಲುಗಳ ಸಂಚಾರ ಶುರುವಾಗದಿರುವುದು, ರಾತ್ರಿ ಕಫä್ರ್ಯ ಇನ್ನೂ ಜಾರಿಯಲ್ಲಿರುವುದು, ಕೊರೋನಾ ಸೋಂಕಿನ ಪ್ರಮಾಣ ಕ್ಷೀಣಿಸದಿರುವುದು ಸೇರಿದಂತೆ ಅನೇಕ ಕಾರಣಗಳು ಜನರು ಬಸ್‌ಗಳನ್ನು ಹತ್ತದಂತೆ ಮಾಡಿವೆ.

ಅನಿವಾರ್ಯವಿದ್ದವರಷ್ಟೇ ಬಸ್‌ಗಳಲ್ಲಿ ಸಂಚರಿಸುವ ಧೈರ್ಯ ಮಾಡುತ್ತಿದ್ದಾರೆ. ಸುಖಾಸುಮ್ಮನೆ ಯಾರೂ ಎಲ್ಲಿಗೂ ಹೋಗುತ್ತಿಲ್ಲ. ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಹೋಗುವವರ ಸಂಖ್ಯೆಯೂ ಕಡಿಮೆಯಾಗಿದೆ. ಬಸ್‌ಗಳಲ್ಲಿ ತೆರಳುವುದಕ್ಕೆ ಭಯಪಟ್ಟು ಸ್ವಂತ ವಾಹನಗಳಲ್ಲಿ ಓಡಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಇವೂ ಸಹ ಸಾರಿಗೆ ಬಸ್‌ಗಳಿಂದ ಜನರು ದೂರ ಉಳಿಯುವುದಕ್ಕೆ ಕಾರಣವಾಗಿವೆ.

ಮೊದಲು 272 ಬಸ್‌ ಸಂಚಾರ:

ಲಾಕ್‌ಡೌನ್‌ಗೂ ಮೊದಲು ಜಿಲ್ಲೆಯ 7 ತಾಲೂಕುಗಳಿಂದ 216 ಬಸ್‌ಗಳು ಸಂಚರಿಸುತ್ತಿದ್ದವು. ಈಗ 62 ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಉಳಿದ 8 ಬಸ್‌ಗಳನ್ನು ಬೆಂಗಳೂರು ಕಡೆಗೆ ಸಂಚಾರಕ್ಕೆ ಬಿಡಲಾಗಿದೆ. ಮೊದಲೆಲ್ಲಾ ಒಂದೊಂದು ಮಾರ್ಗದಲ್ಲಿ ನಿತ್ಯ 8 ಬಾರಿ ಸಂಚರಿಸುತ್ತಿದ್ದವು. ಆಗೆಲ್ಲಾ ಪ್ರತಿದಿನ 40 ರಿಂದ 42 ಲಕ್ಷ ರೂ. ಆದಾಯ ಮಂಡ್ಯ ವಿಭಾಗಕ್ಕೆ ಬರುತ್ತಿತ್ತು. ಕೊರೋನಾ ಸೃಷ್ಟಿಸಿದ ತುತು ಪರಿಸ್ಥಿತಿಯಿಂದ ನಷ್ಟದ ಕೂಪಕ್ಕೆ ಮಂಡ್ಯ ವಿಭಾಗ ಸಿಲುಕಿದೆ.

ಇನ್ನಷ್ಟುದಿನ ಕಾಯುವುದು ಅನಿವಾರ್ಯ:

ಪರಿಸ್ಥಿತಿ ಸುಧಾರಣೆಯಾಗುವುದಕ್ಕೆ ಇನ್ನಷ್ಟುದಿನ ಕಾಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಠಿಯಾಗಿದೆ. ಆ.15ರ ಬಳಿಕ ಬಸ್‌ ಸಂಚಾರಕ್ಕೆ ಜನರು ಮುಂದಾಗಬಹುದೆಂಬ ಆಶಾಭಾವನೆಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಹೊಂದಿದ್ದಾರೆ. ಆ ಸಮಯಕ್ಕೆ ರಾತ್ರಿ ಕಫä್ರ್ಯ ತೆರವಾಗಿ ರೈಲುಗಳ ಸಂಚಾರ ಸುಗಮವಾಗಿ ಆರಂಭಗೊಂಡರೆ ಸಾರಿಗೆ ಬಸ್‌ಗಳಿಗೆ ಜನರಿಂದ ಬೇಡಿಕೆ ಸೃಷ್ಠಿಯಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಶಾಲಾ-ಕಾಲೇಜುಗಳು ಆರಂಭವಾದರೆ ಜನರೂ ಬಸ್‌ಗಳನ್ನು ಹತ್ತುವುದಕ್ಕೆ ಶುರು ಮಾಡುತ್ತಾರೆ. ಕೊರೋನಾ ಸೋಂಕು ತೀವ್ರಗತಿಯಲ್ಲಿರುವುದರಿಂದ ಸೆಪ್ಟೆಂಬರ್‌ನಿಂದ ಶಾಲಾ-ಕಾಲೇಜು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಆ ವೇಳೆಗೆ ಸೋಂಕಿನ ಪ್ರಮಾಣ ಕಡಿಮೆಯಾದಲ್ಲಿ ಹಿಂದಿನ ಸ್ಥಿತಿ ಮರುಕಳಿಸುವ ಎಲ್ಲಾ ಸಾಧ್ಯತೆಗಳಿವೆ. ಅಲ್ಲಿಯವರೆಗೆ ಕಾಯುವುದು ಇಲಾಖೆ ಅಧಿಕಾರಿಗಳಿಗೆ ಅನಿವಾರ್ಯವಾಗಿದೆ.

ನಾಲ್ಕು ತಿಂಗಳ ನಷ್ಟದ ಪ್ರಮಾಣ

ತಿಂಗಳು ನಷ್ಟ

ಏಪ್ರಿಲ್‌ 8.75 ಕೋಟಿ ರೂ.

ಮೇ 7.67 ಕೋಟಿ ರೂ.

ಜೂನ್‌ 6.48 ಕೋಟಿ ರೂ.

ಜುಲೈ 7.50 ಕೋಟಿ ರೂ. (ಸಂಭವ)

ಯಾವ ಮಾರ್ಗಗಳಲ್ಲಿ ಬಸ್‌ ಸಂಚಾರ

ಕೆ.ಆರ್‌.ಪೇಟೆ- ಚನ್ನರಾಯಪಟ್ಟಣ

ಮಂಡ್ಯ - ಮಳವಳ್ಳಿ

ಮಂಡ್ಯ- ಬನ್ನೂರು-ಮೈಸೂರು

ಶ್ರೀರಂಗಪಟ್ಟಣ-ಮಂಡ್ಯ - ಮದ್ದೂರು

ಮಳವಳ್ಳಿ-ಬೆಳಕವಾಡಿ

ಜಿಲ್ಲೆಯಾದ್ಯಂತ 62 ಸಾರಿಗೆ ಬಸ್‌ಗಳನ್ನು ಸಂಚಾರಕ್ಕೆ ಬಿಡಲಾಗಿದೆ. ಜನರೇ ಬಸ್‌ಗಳನ್ನು ಹತ್ತುತ್ತಿಲ್ಲ. ಒಂದು ಬಸ್‌ಗೆ 15 ರಿಂದ 20 ಜನ ಹತ್ತುತ್ತಿದ್ದಾರೆ. ವಿಧಿಯಿಲ್ಲದೆ ಅವರನ್ನೇ ಕರೆದುಕೊಂಡುಹೋಗುವ ಪರಿಸ್ಥಿತಿ ಇದೆ. ರೈಲುಗಳ ಸಂಚಾರ ಆರಂಭವಾಗಿಲ್ಲ. ಅವು ಶುರುವಾದರೆ ಬನ್ನೂರು, ಅರಕೆರೆ, ಟಿ. ನರಸೀಪುರ ಮಾರ್ಗಕ್ಕೆ ಹೆಚ್ಚು ಜನರು ಹತ್ತುತ್ತಾರೆ. ರಾತ್ರಿ ಕಫä್ರ್ಯ ತೆರವಾಗಬೇಕಿದೆ. ಇಲಾಖೆ ಅಧಿಕಾರಿಗಳು- ಸಿಬ್ಬಂದಿಯ ವೇತನಕ್ಕೆ ತೊಂದರೆಯಾಗಿಲ್ಲ ಎಂದು ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಆರ್‌.ಕಿರಣ್‌ಕುಮಾರ್‌ ಹೇಳಿದ್ದಾರೆ.

-ಮಂಡ್ಯ ಮಂಜುನಾಥ