ಬೆಂಗಳೂರು, (ಏ.09):  6ನೇ ವೇತನಕ್ಕೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಧರಣಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ  ಇತರೆ ನೌಕರರನ್ನ ಪ್ರಚೋದಿಸಿ, ಕರ್ತವ್ಯಕ್ಕೆ ಹಾಜರಾಗದಂತೆ ಸಿಬ್ಬಂದಿಗಳಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಚಾಲಕರು ಮತ್ತು ನಿರ್ವಾಹಕರು ಸೇರಿ 272 ಸಿಬ್ಬಂದಿಗಳನ್ನ ಎತ್ತಂಗಡಿ ಮಾಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ಕಛೇರಿ, ' ಕೆಎಸ್‌ಆರ್‌ಟಿಸಿ ನಿಗಮ ಮುಷ್ಕರದಲ್ಲಿ ಪಾಲ್ಗೊಳ್ಳಲು ಇತರೆ ನೌಕರರನ್ನ ಪ್ರಚೋದಿಸಿ, ಕರ್ತವ್ಯಕ್ಕೆ ಹಾಜರಾಗದಂತೆ ಸಿಬ್ಬಂದಿಗಳಿಗೆ ಬೆದರಿಕೆ ಒಡ್ಡಿ ನಿಗಮದ ಬಸ್ಸುಗಳು ಕಾರ್ಯಾಚರಣೆಗೆ ಅಡ್ಡಿಪಡಿಸಿ, ಸಾರ್ವಜನಿಕರ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿರುವ ಸಂಸ್ಥೆಯ 224 ಚಾಲಕರು ಮತ್ತು ನಿರ್ವಾಹಕರು, 5 ಜನ ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳು, 34 ಮಂದಿ ತಾಂತ್ರಿಕ ಸಿಬ್ಬಂದಿಗಳನ್ನ ಹಾಗೂ 9 ಮಂದಿ ಇತರೆ ಸಿಬ್ಬಂದಿಗಳನ್ನು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವಿಭಾಗಗಳಿಂದ ಬೇರೆ ವಿಭಾಗಗಳಿಗೆ ಕೂಡಲೇ ಜಾರಿಗೆ ಬರುವಂತೆ ವರ್ಗಾಯಿಸಲು ಕ್ರಮ ಕೈಳ್ಳಲಾಗಿದೆ ಎಂದು ತಿಳಿಸಿದೆ.

ಬಸ್‌ ಸ್ಟ್ರೈಕ್‌: ಕೆಲಸಕ್ಕೆ ಬರುವಂತೆ ಸಾರಿಗೆ ನೌಕರರಿಗೆ ಸಿಎಂ ಮನವಿ

ಮುಷ್ಕರವನ್ನೇ ನಿಷೇಧಿಸಿ ಆದೇಶ
6 ನೇ ವೇತನ ಆಯೋಗ ಜಾರಿಗೆ ತರುವಂತೆ ಸರ್ಕಾರವನ್ನ ಒತ್ತಾಯಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇದೀಗ ಸಂಧಾನಕ್ಕೆ ಒಪ್ಪದ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಕಾನೂನು ಅಸ್ತ್ರ ಪ್ರಯೋಗಿಸಿ ಸಾರಿಗೆ ನೌಕರರ ಮುಷ್ಕರವನ್ನೇ ನಿಷೇಧಿಸಿ ಆದೇಶ ಹೊರಡಿಸಿದೆ.

ಸಾರ್ವಜನಿಕ ಉಪಯುಕ್ತ ಸೇವೆ ಎಂದು ಪರಿಗಣಿಸಿ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಕೈಗಾರಿಕಾ ವಿವಾದ ಕಾಯ್ದೆ 21(1) (d) ಅನ್ವಯ ಮುಷ್ಕರಕ್ಕೆ ತಡೆ ನೀಡಿ, ಮುಷ್ಕರ ನಿಷೇಧಿಸಿ ನಾಲ್ಕು ನಿಗಮಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಕೈಗಾರಿಕಾ ವಿವಾದ ಕಾಯ್ದೆ 21(1) (d) ಅನ್ವಯ ಸಂಧಾನ‌ ಪ್ರಕ್ರಿಯೆ ಬಾಕಿ ಇರುವಾಗ ಯಾವುದೇ ಮುಷ್ಕರ ನಡೆಸುವಂತಿಲ್ಲ ಎಂದು ಸರ್ಕಾರ ಹೇಳಿದೆ. ಬಿಎಂಟಿಸಿ ಕೆಎಸ್‌ಆರ್​ಟಿಸಿ ವಾಯುವ್ಯ ಈಶಾನ್ಯ ನಾಲ್ಕೂ ನಿಗಮಗಳ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು ಈ‌ ತಕ್ಷಣಕ್ಕೆ ಜಾರಿಗೆ ಬರುವಂತೆ ಮುಷ್ಕರ ನಿಷೇಧಿಸಿ, ವಿವಾದವನ್ನ ನ್ಯಾಯ ನಿರ್ಣಯಕ್ಕಾಗಿ ಸರ್ಕಾರ ಕಳುಹಿಸಿದೆ.