ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ಅವಮಾನ ಮಾಡಿದ ಆರೋಪ ಎದುರಿಸುತ್ತಿರುವ ಶಾಸಕ ಸಂಗಮೇಶ್ ಪುತ್ರ ಬಸವೇಶ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಬಸವೇಶ್ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಕಾಂಗ್ರೆಸ್ ಕಾರ್ಯಕರ್ತರು ಆರೋಪಗಳನ್ನು ನಿರಾಧಾರ ಎಂದು ಸಮರ್ಥಿಸಿಕೊಂಡಿದ್ದಾರೆ.
ಭದ್ರಾವತಿ (ಫೆ.16): ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಮುಂದಾದ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವುದಾಗಿ ಆರೋಪಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಳೆದ ಕೆಲವು ದಿನಗಳಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸುತ್ತಿವೆ. ಈ ನಡುವೆ ಇದೀಗ ಶಾಸಕರ ಪುತ್ರನಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಲಿನ ಅಭಿಷೇಕ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಮಹಿಳಾ ಅಧಿಕಾರಿಗೆ ಬೈದಿದ್ದನ್ನು ಸಮರ್ಥಿಸಿಕೊಂಡ ಅಪ್ಪ, ವರದಿ ಮಾಡಿದ ಸುವರ್ಣನ್ಯೂಸ್ ಮೇಲೆ ಮಗನ ಕೋಪ
ಶನಿವಾರ ನಗರಸಭೆ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಮುಂಭಾಗ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿದ್ದರು. ಅಲ್ಲದೆ ಮಹಾತ್ಮಗಾಂಧಿ ರಸ್ತೆಯಲ್ಲಿ (ಟಿ.ಕೆ.ರಸ್ತೆ) ಬೈಕ್ ರ್‍ಯಾಲಿ ಸಹ ನಡೆಸಿದರು. ಈ ವೇಳೆ ಆಗಮಿಸಿದ್ದ ಶಾಸಕ ಸಂಗಮೇಶ್ವರ್ ಕಿರಿಯ ಪುತ್ರ ಬಿ.ಎಸ್.ಬಸವೇಶ್‌ಗೆ ಕಾರ್ಯಕರ್ತರು, ಅಭಿಮಾನಿಗಳು 2-3 ಕೊಡ ಹಾಲಿನ ಅಭಿಷೇಕ ಮಾಡುವ ಮೂಲಕ ಜೈಕಾರ ಹಾಕಿದರು.
Bhadravathi MLA Sangamesh Son Controversy | ಸಂಗಮೇಶ್ ಮಗನ ವಿರುದ್ಧ ಜೆಡಿಎಸ್ ಶಕ್ತಿಪ್ರದರ್ಶನ Suvarna News
ಬಸವೇಶ್ ವಿರುದ್ಧ ಶುಕ್ರವಾರ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಲಿನ ಅಭಿಷೇಕ ನಡೆಸುವ ಮೂಲಕ ಬಸವೇಶ್ ವಿರುದ್ಧದ ಆರೋಪಗಳು ನಿರಾಧಾರವಾಗಿದ್ದು, ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಜನಪ್ರಿಯತೆಯನ್ನು ಸಹಿಸದೆ ಈ ರೀತಿ ಕುತಂತ್ರ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರು.
