ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್) ಕೆಮಿಕಲ್ ಆಯಿಲ್ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಸಂಬಂಧ ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಮಾಡಾಳು ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.  

ಬೆಂಗಳೂರು (ಡಿ.21): ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್) ಕೆಮಿಕಲ್ ಆಯಿಲ್ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಸಂಬಂಧ ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಮಾಡಾಳು ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಪ್ರಕರಣ ರದ್ದು ಕೋರಿ ಕೆ. ಮಾಡಾಳು ವಿರೂಪಾಕ್ಷಪ್ಪ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್ಐಆರ್‌ ಮತ್ತು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಬಾಕಿಯಿದ್ದ ವಿಚಾರಣೆಯನ್ನು ರದ್ದುಪಡಿಸಿ ಆದೇಶಿಸಿದೆ.

ಅಲ್ಲದೆ, ತೀರ್ಪಿನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ವಿರೂಪಾಕ್ಷಪ್ಪ ಅವರ ಪ್ರಕರಣಕ್ಕೆ ಮಾತ್ರ ಅನ್ವಯಿಸಲಿದೆ. ಪ್ರಕರಣದ ಇತರೆ ಆರೋಪಿಗಳ ವಿರುದ್ಧದ ತನಿಖೆ ಮತ್ತು ಯಾವುದೇ ನ್ಯಾಯಾಲಯದ ವಿಚಾರಣೆ ಮೇಲೆ ಪ್ರಭಾವ ಬೀರುವುದಿಲ್ಲ ಹಾಗೂ ಅನ್ವಯಿಸುವುದಿಲ್ಲ. ಅದರಂತೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ವಿರೂಪಾಕ್ಷಪ್ಪ ಅವರ ಪುತ್ರ ಎಂ.ವಿ. ಪ್ರಶಾಂತ್‌ ಕುಮಾರ್‌ ಮೇಲಿನ ಆರೋಪಗಳಿಗೆ ಸಾಕ್ಷ್ಯವಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ, ಅವರ ವಿರುದ್ಧದ ವಿಚಾರಣೆ ನಡೆಯಬೇಕಿದೆ ಎಂದು ಹೈಕೋರ್ಟ್‌ ಇದೇ ವೇಳೆ ಸ್ಪಷ್ಟಪಡಿಸಿದೆ.

ಸಮಸ್ಯೆ ಕೇಳದೆ ಅಧಿವೇಶನದಲ್ಲಿ ರಾಜಕಾರಣ ಮಾಡಿದ ಬಿಜೆಪಿ: ಸಚಿವ ತಿಮ್ಮಾಪುರ ಕಿಡಿ

ಲಂಚಕ್ಕೆ ಬೇಡಿಕೆ, ಸ್ವೀಕರಿಸಿದ ಆರೋಪವಿಲ್ಲ: ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್‌ 7 ಪ್ರಕಾರ ಅನುಕೂಲತೆ ಕಲ್ಪಿಸಲು ಲಂಚಕ್ಕೆ ಬೇಡಿಕೆ ಇಟ್ಟಿರಬೇಕು ಹಾಗೂ ಲಂಚ ಸ್ವೀಕರಿಸಬೇಕಾಗುತ್ತದೆ. ಆದರೆ, ಇಡೀ ಪ್ರಕರಣದಲ್ಲಿ ತಮ್ಮ ಪುತ್ರನನ್ನು (ಎರಡನೇ ಆರೋಪಿ ಎಂ.ವಿ. ಪ್ರಶಾಂತ್ ಕುಮಾರ್) ಭೇಟಿ ಮಾಡುವಂತೆ ಸೂಚಿಸಿರುವುದು ಬಿಟ್ಟರೆ ಮತ್ಯಾವುದೇ ಆರೋಪ ಅರ್ಜಿದಾರರ (ವಿರೂಪಾಕ್ಷಪ್ಪ) ಮೇಲಿಲ್ಲ. ಮಾಡಾಳ್ ಅವರು ಲಂಚಕ್ಕೆ ಬೇಡಿಕೆಯಿಟ್ಟ ಹಾಗೂ ಲಂಚ ಸ್ವೀಕರಿಸಿದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ದೂರಿನಲ್ಲಿ 2ನೇ ಆರೋಪಿಯಾಗಿರುವ ಅರ್ಜಿದಾರರ ಪುತ್ರ ಪ್ರಶಾಂತ್ ವಿರುದ್ಧ ಲಂಚದ ಆರೋಪವಿದ್ದು, ಅವರ ಮನೆಯಲ್ಲಿ 6.10 ಕೋಟಿ ಹಣ ಪತ್ತೆಯಾಗಿದೆ. ಆದರೆ, ಈ ಹಣಕ್ಕೂ ಮಾಡಾಳ್ ವಿರೂಪಾಕ್ಷಪ್ಪ ಅವರಿಗೂ ಸಂಬಂಧ ಕಲ್ಪಿಸುವ ದಾಖಲೆ ದೊರೆತಿಲ್ಲ. ಪುತ್ರನ ಬಳಿ ದೊರೆತ ಹಣಕ್ಕೆ ಅಪ್ಪನನ್ನು ವಿಚಾರಣೆಗೆ ಒಳಪಡಿಸುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಕೆಎಸ್‌ಡಿಎಲ್‌ ಟೆಂಡರ್ ಪ್ರಕ್ರಿಯೆಯಲ್ಲಿ ಮಾಡಾಳ್ ವಿರೂಪಾಕ್ಷ ಭಾಗಿಯಾಗಿಲ್ಲ. ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಬ್ಬಂದಿ ಮಾತ್ರ ಭಾಗಿಯಾಗಿದ್ದಾರೆ. ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸಲು ಸಾಕ್ಷ್ಯಾಧಾರ ಬೇಕು. ಕನಿಷ್ಠ ಪಕ್ಷ ಮೇಲ್ನೋಟದ ಸಾಕ್ಷ್ಯಾಧಾರಗಳ ಅವಶ್ಯಕತೆ ಇರುತ್ತದೆ. ಆದರೆ, ಅರ್ಜಿದಾರರ ವಿರುದ್ಧದ ಆರೋಪದಲ್ಲಿ ಗೊಂದಲಕಾರಿ ಹೇಳಿಕೆಗಳಿವೆಯೇ ಹೊರತು ನಿಖರ ಆರೋಪವಿಲ್ಲ. ದೂರು ಮತ್ತು ದೂರುದಾರರು ವಿಚಾರಣಾ ನ್ಯಾಯಾಲಯದ ಮುಂದೆ ದಾಖಲಿಸಿದ ಪ್ರಮಾಣೀಕೃತ ಹೇಳಿಕೆ ವಿರೂಪಾಕ್ಷಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸೆಕ್ಷನ್‌ 7 ಮತ್ತು 7ಎ (ಸರ್ಕಾರಿ ಸೇವಕರು ತಮ್ಮ ಅಧಿಕೃತ ಕರ್ತವ್ಯ ನಿರ್ವಹಣೆಗೆ ಪ್ರತಿಫಲ (ಲಂಚ) ಅಪೇಕ್ಷಿಸಿದ ಹಾಗೂ ಸ್ವೀಕರಿಸಿದ ಆರೋಪವನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯ ಕಾಣುವುದಿಲ್ಲ. ಎಫ್ಐಆರ್‌ ದಾಖಲಾಗಿದೆ ಮತ್ತು ಆ ಕುರಿತ ವಿಚಾರಣೆ ಬಾಕಿಯಿದೆ ಎಂಬ ಕಾರಣಕ್ಕೆ ಆರೋಪಿಗೆ ಬಾಗಿಲು ಮುಚ್ಚಬಾರದು ಮತ್ತು ಆತನ ನೆತ್ತಿಯ ಮೇಲೆ ತೂಗುಗತ್ತಿ ನೇತಾಡುವಂತಾಗಬಾರದು ಎಂದು ನ್ಯಾಯಪೀಠ ಹೇಳಿದೆ.

ಹಾಗೆಯೇ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯ ಸೆಕ್ಷನ್‌ 17ರ ಪ್ರಕಾರ ಸರ್ಕಾರಿ ಸೇವಕರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕಾದರೆ ಸಂಬಂಧಪಟ್ಟ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಈ ನಿಯಮವನ್ನು ವಿರೂಪಾಕ್ಷಪ್ಪ ಅವರ ಮೇಲಿನ ಪ್ರಕರಣದಲ್ಲಿ ಪಾಲಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಆಳವಾಗಿ ನೋಡುವ ಅಗತ್ಯವಿಲ್ಲ. ಈ ವಿಚಾರವನ್ನು ಉತ್ತರಿಸದೇ ಬಿಡಲಾಗಿದೆ. ಇಂತಹ ಸಂದರ್ಭದಲ್ಲಿ ಪ್ರಕರಣ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ವಿರೂಪಾಕ್ಷಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಿಸಿದ್ದ ಎಫ್‌ಐಆರ್‌ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.

ಕರ್ನಾಟಕ ದೇಶದ ನಂ.1 ಸಿರಿಧಾನ್ಯ ಬೆಳೆವ ರಾಜ್ಯ ಆಗಲಿ: ಸಿಎಂ ಸಿದ್ದರಾಮಯ್ಯ

ಪ್ರಕರಣದ ಹಿನ್ನೆಲೆ: ವಿರೂಪಾಕ್ಷಪ್ಪ ಅವರ ಪುತ್ರ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳು ಅವರು ದೂರುದಾರ ಶ್ರೇಯಸ್‌ ಕಶ್ಯಪ್ ನಿರ್ದೇಶಕರಾಗಿರುವ ಮೆರ್ಸೆಸ್ ಡಿಲಿಸಿಯಾ ಕೆಮಿಕಲ್ಸ್ ಕಂಪನಿಯಿಂದ ಕೆಮಿಕಲ್ ಆಯಿಲ್ ಖರೀದಿಯ ಟೆಂಡರ್ ಹಂಚಿಕೆ ಮಾಡಿರುವುದಕ್ಕೆ ಪ್ರತಿಯಾಗಿ 40 ಲಕ್ಷ ಲಂಚ ಪಡೆದ ಆರೋಪ ಸಂಬಂಧ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ-1988ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾ.2ರಂದು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮೊದಲ ಆರೋಪಿಯಾದರೆ, ಪ್ರಶಾಂತ್ ಮಾಡಾಳು ಎರಡನೇ ಆರೋಪಿಯಾಗಿದ್ದರು. ತಮ್ಮ ಮೇಲಿನ ಎಫ್‌ಐಆರ್‌ ಹಾಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಮಾಡುವಂತೆ ಕೋರಿ 2023ರ ಮಾ.6ರಂದು ವಿರೂಪಾಕ್ಷಪ್ಪ ಅವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.