River Alignment: ಕೃಷ್ಣಾ-ಗೋದಾವರಿ ಜೋಡಣೆ ಹೊಸದೊಂದು ಸಮಸ್ಯೆಗೆ ದಾರಿ
* ಆಂಧ್ರ, ತೆಲಂಗಾಣ ಕೃಷ್ಣೆಯಲ್ಲಿ ಹೆಚ್ಚಿನ ಪಾಲು ಕೇಳಬಹುದು
* ಗೋದಾವರಿಯಿಂದ ಪಡೆದ ನೀರಿಗೆ ಪರ್ಯಾಯವಾಗಿ ಕರ್ನಾಟಕ ಆಂಧ್ರ-ತೆಲಂಗಾಣಕ್ಕೆ ಕೊಡಲೇಬೇಕು
* ಎರಡು ಹಂತದಲ್ಲಿ ಸೇರ್ಪಡೆ
ಹುಬ್ಬಳ್ಳಿ(ಫೆ.02): ಕೇಂದ್ರ ಸರ್ಕಾರದ(Central Government) ಮಹತ್ವಾಕಾಂಕ್ಷೆಯ ‘ನದಿಗಳ ಜೋಡಣೆ ಯೋಜನೆ’ಯಲ್ಲ(River Alignment Project) ಕೃಷ್ಣಾ-ಗೋದಾವರಿಯೂ(Krishna-Godavari River) ಒಂದಾಗಿದ್ದು, ಈ ಯೋಜನೆ ಕೈಗೂಡಿದರೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಕೃಷ್ಣೆಯ ನೀರಿನಲ್ಲಿ ಹೆಚ್ಚುವರಿ ಪಾಲು ಕೇಳುವ ಸಾಧ್ಯತೆ ಇದೆ.
ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು 2022ನೇ ಸಾಲಿನ ಬಜೆಟ್(Union Budget) ನಲ್ಲಿ ಈ ಕೃಷ್ಣಾ-ಗೊದಾವರಿ ನದಿಗಳ ಜೋಡಣೆ ವಿಷಯ ಘೋಷಿಸುತ್ತಿದ್ದಂತೆ ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಇಂಥದೊಂದು ಜಿಜ್ಞಾಸೆ ಶುರುವಾಗಿದೆ.
ಶಿರಸಿ: ಬೇಡ್ತಿ ನದಿ ನೀರು ಜೋಡಣೆ ಅವೈಜ್ಞಾನಿಕ, ಸ್ವರ್ಣವಲ್ಲೀ ಶ್ರೀ
‘ದಕ್ಷಿಣ ಗಂಗಾ’ ಎಂದೇ ಹೆಸರಾಗಿರುವ ಗೋದಾವರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರನ ಸನ್ನಿಧಿಯಲ್ಲಿ ಉಗಮವಾಗಿ ತೆಲಂಗಾಣ, ಚತ್ತಿಸಗಡ, ಒಡಿಸ್ಸಾಗಳಲ್ಲಿ ಸುಮಾರು 1465 ಕಿಮೀ ಹರಿದು ಬಂಗಾಳಕೊಲ್ಲಿಯಲ್ಲಿ ಲೀನವಾಗುತ್ತದೆ. ಎಲ್ಲಿಯೂ ಕರ್ನಾಟಕವನ್ನು(Karnataka) ಸಂಪರ್ಕಿಸುವುದೇ ಇಲ್ಲ ಈ ಗೋದಾವರಿ. ಆದರೆ ಕರ್ನಾಟಕದಲ್ಲಿ ಹುಟ್ಟಿ ಗೋದಾವರಿ ಕೂರಿಕೊಳ್ಳುವ ಝರಿ, ಹಳ್ಳ- ಕೊಳ್ಳಗಳು ಗೋದಾವರಿ ಜಲಾನಯನ ಪ್ರದೇಶದಲ್ಲಿ ಬರುತ್ತವೆ. ಗೋದಾವರಿಯಿಂದ ಪಡೆದ ನೀರಿಗೆ ಪರ್ಯಾಯವಾಗಿ ಕರ್ನಾಟಕ ಆಂಧ್ರ-ತೆಲಂಗಾಣಕ್ಕೆ ಕೊಡಲೇಬೇಕಾಗುತ್ತದೆ ಎನ್ನುವುದು ನೀರಾವರಿ ತಜ್ಞರ ಅಭಿಮತ.
ಎರಡು ಹಂತದಲ್ಲಿ ಸೇರ್ಪಡೆ:
ಮೊದಲು ಆಂಧ್ರದಲ್ಲಿ(Andhra Pradesh) ಪೋಲಾವರಂ ಅಣೆಕಟ್ಟೆ ನಿರ್ಮಾಣ ಮಾಡಿ ಅದರ ಹಿನ್ನಿರನ್ನು ಕೃಷ್ಣಾ ನದಿ, ಪೆನ್ನಾರ್ (ಪಿನಾಕಿನಿ) ನದಿಗಳ ಮೂಲಕ ಕಾವೇರಿಗೆ ಹರಿಸಲಾಗುತ್ತದೆ. ನೀರು ಆವಿಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿ ಕಾಲುವೆಗಳ ಬದಲಿಗೆ ವಿಶೇಷ ತಂತ್ರಜ್ಞಾನದ ಸ್ಟೀಲ್ ಕೊಳವೆಗಳ ಮೂಲಕ ನೀರನ್ನು ಹರಿಸುವ ಯೋಜನೆ ಇದು.
ಪ್ರಾರಂಭಿಕ ಹಂತದಲ್ಲಿ ಗೋದಾವರಿಯ 300 ಟಿಎಂಸಿ ನೀರನ್ನು ಆಂಧ್ರ ಪ್ರದೇಶದ ನಾಗರ್ಜುನ ಸಾಗರ ಡ್ಯಾಮ್ ಮೂಲಕ ಪೋಲಾವರಂ ಯೋಜನೆಗೆ ಬೆಸೆದು, ಬಳಿಕ ಕೃಷ್ಣಾ ನದಿಗೆ(Krishna River) ತರುವುದು. ಅಲ್ಲಿಂದ ಮುಂದೆ ಪೆನ್ನಾರ್ ನದಿಗೆ ನಿರ್ಮಿಸಲಾಗಿರುವ ಸೋಮಸಿಲಾ ಅಣೆಕಟ್ಟೆಗೆ ತಂದು ಶೇಖರಿಸಿ, ಅದನ್ನು ಮುಂದೆ ಗ್ರ್ಯಾಂಡ್ ಅಣೆಕಟ್ಟೆ ಮೂಲಕ ಕಾವೇರಿ ನದಿಗೆ ಸೇರಿಸುವುದು. ಇದರಿಂದ ಕಾವೇರಿ ನದಿಗೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಲಭಿಸಲಿದೆ. ಎರಡನೇ ಹಂತದಲ್ಲಿ ಗೋದಾವರಿಯ ಉಪನದಿಯಾಗಿರುವ ಇಂದ್ರಾವತಿ ನದಿ (ಮಧ್ಯ ಭಾರತ) ನೀರನ್ನು ನಾಗರ್ಜುನ ಅಣೆಗೆ ತಂದು, ಅಲ್ಲಿಂದ ಮುಂದೆ ಮತ್ತೆ ಸೋಮಸಿಲಾ ಅಣೆಕಟ್ಟೆಗೆ ಸಂಪರ್ಕಿಸಿ, ಬಳಿಕ ಅದನ್ನು ಕರ್ನಾಟಕದ ಸಂಪರ್ಕಕ್ಕೆ ಬಾರದೇ ನೇರವಾಗಿ ಕಾವೇರಿ ನದಿಗೆ ಜೋಡಿಸುವುದೂ ಇದರಲ್ಲಿ ಸೇರಿದೆ. ಹಾಗಾಗಿ ಇದು ಕಾವೇರಿ- ಪೆನ್ನಾರ ಹಾಗೂ ಗೋದಾವರಿ- ಕೃಷ್ಣಾ ನದಿ ಜೋಡಣೆ ಯೋಜನೆ.
ಹೀಗೆ ಕರ್ನಾಟಕ ಕೃಷ್ಣೆ, ಕಾವೇರಿಗೆ ಪಡೆದುಕೊಳ್ಳುವ ನೀರಿಗೆ ಪರ್ಯಾಯವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ(Telangana) ರಾಜ್ಯಗಳು ಕೃಷ್ಣಾ ನೀರಿನಲ್ಲಿ ಹೆಚ್ಚುವರಿ ಪಾಲು ಕೇಳುವ ಎಲ್ಲ ಅವಕಾಶಗಳೂ ಇವೆ. ಕೃಷ್ಣಾ ನೀರಿನ ಹಂಚಿಕೆ ವಿಷಯವಾಗಿ ಕರ್ನಾಟಕ, ಆಂಧ್ರಪ್ರದೇಶ ಈಗಾಲೇ ಸುಪ್ರೀಂ ಕೋರ್ಟಿನಲ್ಲಿ(Supreme Court) ಬಡಿದಾಡುತ್ತಿವೆ.
ನದಿ ಜೋಡಣೆ: ರಾಜ್ಯದ ಅಹವಾಲು ಕೇಳಲು ಶಾ ಸೂಚನೆ, ಸಿಎಂ ಬೊಮ್ಮಾಯಿ
ಈ ಗೋದಾವರಿ -ಕೃಷ್ಣಾ-ಪೆನ್ನಾರ- ಕಾವೇರಿ ಜೋಡಣೆಯಿಂದ ಹೊಸದೊಂದು ಸಮಸ್ಯೆ ಉದ್ಭವಿಸುವುದನ್ನು ಅಲ್ಲಗಳೆಯುವಂತಿಲ್ಲ. ಬಚಾವತ್ ಐತೀರ್ಪಿನಂತೆ ಕೃಷ್ಣಾ ನದಿಯ ಒಟ್ಟು ಹರಿವಿನಲ್ಲಿ 2060 ಟಿಎಂಸಿ (2130 ಟಿಎಂಸಿ ನೀರಿನ ಶೇ.75 ಭಾಗ) ನೀರಿನಲ್ಲಿ ಮಹಾರಾಷ್ಟ್ರ-560 ಟಿಎಂಸಿ, ಕರ್ನಾಟಕ-700 ಟಿಎಂಸಿ, ಆಂಧ್ರ-ತೆಲಂಗಾಣ-800 ಟಿಎಂಸಿ ಹಂಚಿಕೆಯಾಗಿದೆ. ಹಾಗಾಗಿ ಗೋದಾವರಿ ಕಣಿವೆಯಿಂದ ಕೃಷ್ಣೆ ಮತ್ತು ಕಾವೇರಿ ನದಿಗಳಿಗೆ ಸೇರಿಸುವ ನೀರಿನ ಪ್ರಮಾಣದಷ್ಟು ನೀರನ್ನು ಕೃಷ್ಣಾ ನದಿಯಿಂದ ಪಾಲು ಕೇಳಲಿವೆ ಆ ಉಭಯ ರಾಜ್ಯಗಳು. ಆಗ ಅವುಗಳ ಪಾಲು 800 ಟಿಎಂಸಿಗಿಂತ ಹೆಚ್ಚಾಗಲಿದೆ. ಇದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಚಣೆಯಾಗುವ ಅಪಾಯವಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇದು 40 ವರ್ಷಗಳ ಹಳೆಯ ಚಿಂತನೆ. ಗಂಗಾ-ಕಾವೇರಿ ಜೋಡಿಸುವ ಯೋಜನೆ ಈಗಲೂ ಕೈಗೂಡಿಲ್ಲ. ಇದೂ ಅಷ್ಟೇ, ಬರೀ ಚರ್ಚೆಗೆ ಸೀಮಿತವಾಗಲಿದೆ. ಆದಾಗ್ಯೂ ಯೋಜನೆ ಅನುಷ್ಠಾನವಾದರೆ ಗೋದಾವರಿಯಿಂದ ಕರ್ನಾಟಕ ಪಡೆಯುವ ನೀರಿಗೆ ಪರ್ಯಾಯವಾಗಿ ಕೃಷ್ಣಾ ನೀರಿನಲ್ಲಿ ಹೆಚ್ಚುವರಿಯಾಗಿ ಆಂಧ್ರಪ್ರದೇಶ, ತೆಲಂಗಾಣಕ್ಕೆ ಕೊಡಬೇಕಾಗುತ್ತದೆ. ಆ ಎರಡೂ ರಾಜ್ಯಗಳು ನೀರಿನ ಹಕ್ಕು ಮಂಡಿಸುವುದನ್ನು ಅಲ್ಲಗಳೆಯುವಂತಿಲ್ಲ. ಇದರಿಂದ ಕೃಷ್ಣೆಯ ಮಕ್ಕಳಿಗೆ ಅನ್ಯಾಯವಾಗಲಿದೆ ಅಂತ ನೀರಾವರಿ ತಜ್ಞ ಕೃಷ್ಣ ಕೊಲ್ಹಾರ ಕುಲಕರ್ಣಿ ತಿಳಿಸಿದ್ದಾರೆ.