ಕೃಷಿ ಹೊಂಡ ನಿರ್ಮಿಸಲು ಮತ್ತೆ ಸರ್ಕಾರದಿಂದ ಸಬ್ಸಿಡಿ, ಕೃಷಿ-ತೋಟಗಾರಿಕೆಗೆ 5,860 ಕೋಟಿ ರು. ಮೀಸಲು, ಕೃಷಿ ಭಾಗ್ಯ ಯೋಜನೆಗೆ 100 ಕೋಟಿ ರು. ಅನುದಾನ, ಕೃಷಿ ನವೋದ್ಯಮಕ್ಕೆ ಉತ್ತೇಜಿಸಲು 10 ಕೋಟಿ ರು. ಮೀಸಲು, 100 ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ 50 ಕೋಟಿ ರು., 20 ಲಕ್ಷ ರು. ವರೆಗಿನ ಸಾಲಕ್ಕೆ ಶೇ.4 ಬಡ್ಡಿ ಸಹಾಯಧನ, ನಂದಿನಿ ರೀತಿ ರಾಜ್ಯದ ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್
ಬೆಂಗಳೂರು(ಜು.08): ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಭರಪೂರ ಕೊಡುಗೆ ನೀಡಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಆಯವ್ಯಯದಲ್ಲಿ 5,860 ಕೋಟಿ ರು. ಮೀಸಲು ಇಟ್ಟಿದ್ದಾರೆ. ಜೊತೆಗೆ ಮಳೆಯಾಶ್ರಿತ ಕೃಷಿ ಪ್ರದೇಶಗಳಲ್ಲಿ ಕೃಷಿ ಹೊಂಡ ನಿರ್ಮಿಸಿ, ಪ್ರತಿ ಹನಿ ನೀರಿಗೆ ಹೆಚ್ಚಿನ ಬೆಳೆ ಬೆಳೆಯುವ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷಿಭಾಗ್ಯಕ್ಕೆ ಮರುಜೀವ ನೀಡಿದ್ದಾರೆ.
ಕೃಷಿ ಭಾಗ್ಯ ಯೋಜನೆಯಡಿ ರೈತರು ಮಳೆ ನೀರನ್ನು ಸಂರಕ್ಷಿಸಿ ಕೊರತೆಯ ಸಮಯದಲ್ಲಿ ಕೃಷಿ ಹೊಂಡದ ನೀರನ್ನು ಬಳಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಲಿಫ್ಟ್ ಪಂಪ್‌ಗಳು, ಡೀಸೆಲ್ ಮೋಟಾರ್‌ಗಳು, ಟಾರ್ಪಲ್‌ಗಳನ್ನು ಖರೀದಿಸಲು ಅನುದಾನ ಪಡೆಯಬಹುದಾಗಿದೆ. ಈ ಯೋಜನೆಯನ್ನು ಉದ್ಯೋಗ ಖಾತ್ರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ರು. ಒದಗಿಸಲಾಗಿದೆ.
Karnataka Budget 2023: ಗೂಬೆ ಕೂರಿಸುವ, ಜನರ ತಲೆ ಮೇಲೆ ಹೂವ ಇಡೋ ಬಜೆಟ್: ಎಚ್‌ಡಿಕೆ ರಿಯಾಕ್ಷನ್
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆವಲಯಗಳನ್ನು ಪ್ರೋತ್ಸಾಹಿಸಲು ನವೋದ್ಯಮ ಎಂಬ ಹೊಸ ಯೋಜನೆಗೆ 10 ಕೋಟಿ ರು. ಅನುದಾನ ಒದಗಿಸಲಾಗಿದೆ. ನಂದಿನಿ ಮಾದರಿಯಲ್ಲಿ ರೈತರ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಒದಗಿಸಲು ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆ ರೂಪಿಸಲು 10 ಕೋಟಿ ರು. ಮೀಸಲು ಇಡಲಾಗಿದೆ. ಜೊತೆಗೆ ವಾಣಿಜ್ಯ ಬ್ಯಾಂಕುಗಳು ರೈತ ಉತ್ಪಾದಕ ಸಂಸ್ಥೆಗಳಿಗೆ ನೀಡುವ 20 ಲಕ್ಷ ರು.ವರೆಗಿನ ಸಾಲಕ್ಕೆ ಶೇ.4ರ ಬಡ್ಡಿ ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಗೋದಾಮು, ಶೀತಲಗೃಹ ನಿರ್ಮಾಣ ಮತ್ತು ಇತರ ಮೂಲಸೌಕರ್ಯ ಸೃಜನೆಗೆ ಯೋಜನಾ ವೆಚ್ಚದ ಗರಿಷ್ಠ ಶೇ.20ರಷ್ಟು, ಒಂದು ಕೋಟಿ ರು. ಮೀರದಂತೆ ಸೀಡ್ ಕ್ಯಾಪಿಟಲ್ ಒದಗಿಸಲು ನಿರ್ಧರಿಸಲಾಗಿದೆ. ರೈತ ಉತ್ಪಾದಕ ಸಂಸ್ಥೆಗಳು, ನವೋದ್ಯಮಿಗಳು ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಬೆಂಬಲ ನೀಡಲು 5 ಕೋಟಿ ರು. ಒದಗಿಸಲಾಗಿದೆ. ಕೃಷಿ ಯಂತ್ರಧಾರೆ ಕೇಂದ್ರ ಬಲಪಡಿಸಲು 2023-24ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪಿಸಲು 50 ಕೋಟಿ ರು. ಅನುದಾನ ಮೀಸಲಿಡಲಾಗಿದೆ.
CM Siddaramaiah Press Meet: ಪ್ರಣಾಳಿಕೆಯ 76 ಕಾರ್ಯಕ್ರಮ ಬಜೆಟ್‌ನಲ್ಲಿದೆ, ನುಡಿದಂತೆ ನಡೆದಿದ್ದೇವೆ
ತೋಟಗಾರಿಕೆ ಇಲಾಖೆಗೆ ಸಿಕ್ಕಿದ್ದೇನು:
ತೆಂಗು, ಅಡಿಕೆ, ದ್ರಾಕ್ಷಿ, ದಾಳಿಂಬೆ, ಮಾವು ಮತ್ತಿತರ ಹಣ್ಣುಗಳು, ತರಕಾರಿ, ಹೂವುಗಳ ಉತ್ಪಾದನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ರಫ್ತಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ಬೆಳೆಗಳ ರೋಗ ನಿಯಂತ್ರಣಕ್ಕೆ 5 ಕೋಟಿ ರು. ಮೀಸಲು ಇಡಲಾಗಿದೆ. ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆಗಾಗಿ ಎಂಟು ಶೀತಲ ಘಟಕಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ರಾಜ್ಯದ ಕಾಫಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೋ ಟೂರಿಸಂ ಉತ್ತೇಜಿಸಲು ಕರ್ನಾಟಕದ ಕಾಫಿಗೆ ಬ್ರಾಂಡಿಂಗ್ ಮತ್ತು ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆಯ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆಮತ್ತು ಬ್ರಾಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸಲು ‘ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ’ ಯೋಜನೆ ಜಾರಿಗೊಳಿಸುವುದಾಗಿ ತಿಳಿಸಲಾಗಿದೆ.
ಕೃಷಿಭಾಗ್ಯ ಮತ್ತೆ ಜಾರಿ ಉತ್ತಮ ನಿರ್ಧಾರ
ಕೃಷಿಭಾಗ್ಯ ಯೋಜನೆ ಮತ್ತೆ ಜಾರಿಗೆ ತಂದಿರುವುದು ಸ್ವಾಗತಾರ್ಹ. ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆ ರೂಪಿಸಿ ಮಾರುಕಟ್ಟೆಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಅಗತ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶೀತಲೀಕರಣ ಗೃಹ ನಿರ್ಮಾಣ ಮತ್ತು ಮೂಲಸೌಕರ್ಯ ಒದಗಿಸುವುದಕ್ಕೆ ರಾಜ್ಯ ಸರ್ಕಾರ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಿದೆ ಅಂತ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
