ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಮತ್ತು ಬಸವರಾಜು ಕನ್ನಾಳೆ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಆದರೆ, ಸದಸ್ಯೆ ಬಿ.ವಿ.ಗೀತಾ ಅವರಿಗೆ ಇ.ಡಿ. ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಜೈಲು ಸೇರಿರುವ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್‌.ಸಾಹುಕಾರ್‌ ಮತ್ತು ಮಧ್ಯವರ್ತಿ ಬಸವರಾಜು ಕನ್ನಾಳೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನಗರದ ಇ.ಡಿ. ವಿಶೇಷ ನ್ಯಾಯಾಲಯ, ಕೆಪಿಎಸ್ಸಿ ಸದಸ್ಯೆ ಬಿ.ವಿ.ಗೀತಾ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಶಿವಶಂಕರಪ್ಪ ಸಾಹುಕಾರ್‌, ಬಸವರಾಜು ಕನ್ನಾಳೆ ಜೈಲು ವಾಸ ಮುಂದುವರಿಕೆ

ಮೂವರು ಆರೋಪಿಗಳ ಜಾಮೀನು ಅರ್ಜಿ ಸಂಬಂಧ ಸುದೀರ್ಘ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ. ಆರೋಪಿಗಳಾದ ಶಿವಶಂಕರಪ್ಪ ಸಾಹುಕಾರ್‌, ಬಸವರಾಜು ಕನ್ನಾಳೆ ಮತ್ತು ಬಿ.ವಿ.ಗೀತಾ ಸದ್ಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇದೀಗ ಬಿ.ವಿ.ಗೀತಾಗೆ ಜಾಮೀನು ಮಂಜೂರಾಗಿರುವುದರಿಂದ ಗುರುವಾರ ಬಿಡುಗಡೆಯಾಗಲಿದ್ದಾರೆ. ಶಿವಶಂಕರಪ್ಪ ಸಾಹುಕಾರ್‌ ಮತ್ತು ಬಸವರಾಜು ಕನ್ನಾಳೆ ಅವರ ಜೈಲು ವಾಸ ಮುಂದುವರೆಯಲಿದೆ.

ಜಾಮೀನು ಅರ್ಜಿಗಳ ವಿಚಾರಣೆ ವೇಳೆ ಇ.ಡಿ. ಪರ ಸರ್ಕಾರಿ ಅಭಿಯೋಜಕರು ಪ್ರಬಲ ವಾದ ಮಂಡಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ಶಿವಶಂಕರಪ್ಪ ಸಾಹುಕಾರ, ಬಸವರಾಜು ಕನ್ನಾಳೆ, ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರಿಗೆ ಜಾಮೀನು ನೀಡಬಾರದು. ಕೆಪಿಎಸ್ಸಿಯಿಂದ ನಡೆದ ಪಶುವೈದ್ಯಾಧಿಕಾರಿಗಳ ನೇಮಕಾತಿ ಮಾತ್ರವಲ್ಲದೇ, ಇತರೆ ನೇಮಕಾತಿಗಳಲ್ಲೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯದ ಗಮನ ಸೆಳೆದಿದ್ದರು.

ಜಾಮೀನು ಅರ್ಜಿ ವಜಾಗೊಂಡಿದ್ದು ಯಾಕೆ?

ಆರೋಪಿಗಳು ಹಲವು ಅಭ್ಯರ್ಥಿಗಳಿಂದ ಕೋಟ್ಯಂತರ ರು. ಲಂಚ ಪಡೆದು ಅಕ್ರಮವಾಗಿ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಸ್ಥಿರ ಮತ್ತು ಚರಾಸ್ತಿ ಸಂಪಾದಿಸಿದ್ದಾರೆ. ಇವರ ಅಕ್ರಮ ಸಂಪತ್ತಿನ ಮತ್ತಷ್ಟು ಮಾಹಿತಿ ಸಂಗ್ರಹಿಸುವ ಅಗತ್ಯವಿದೆ. ಈ ಹಂತದಲ್ಲಿ ಇವರಿಗೆ ಜಾಮೀನು ಮಂಜೂರು ಮಾಡಿದರೆ, ತನಿಖೆಗೆ ಹಿನ್ನಡೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಇವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಇಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದೆ.