ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ವಿರುದ್ಧ ರಾಜ್ಯಪಾಲರಿಗೆ ಹೊಸ ದೂರು ಸಲ್ಲಿಕೆಯಾಗಿದೆ. ಸಾಹುಕಾರ್ ಕುಟುಂಬವು ಆದಾಯ ಮೀರಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 120 ಎಕರೆ ಭೂಮಿ ಖರೀದಿಸಿದೆ ಎಂದು ಆರೋಪಿಸಿ, ತನಿಖೆಗೆ ಆಗ್ರಹಿಸಲಾಗಿದೆ.

  • ಶಿವಶಂಕರಪ್ಪ ಸಾಹುಕಾರ್‌ ಕುಟುಂಬದಿಂದ ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಭೂಮಿ ಖರೀದಿ
  • ಪತ್ನಿ, ಕುಟುಂಬ ಸದಸ್ಯರ ಹೆಸರಲ್ಲಿ 120 ಎಕರೆ ಕೃಷಿ ಭೂಮಿ ಖರೀದಿ ಬಗ್ಗೆ ಗೌರ್ನರ್‌ಗೆ ದೂರು
  • ಇದು ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಸಾಕ್ಷಿ ಎಂದು ದೂರಿನಲ್ಲಿ ಪ್ರಸ್ತಾಪ

 ಬೆಂಗಳೂರು (ಜು.30): ಕೆಪಿಎಸ್ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಸಾಹುಕಾರ್‌ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ. ಆದಾಯಕ್ಕಿಂತ ಹೆಚ್ಚಿನ ಮೊತ್ತದ ಸ್ಥಿರಾಸ್ತಿಯನ್ನು ಶಿವಶಂಕರಪ್ಪ ಸಾಹುಕಾರ್ ಕುಟುಂಬ ಖರೀದಿಸಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಮರಿಲಿಂಗಗೌಡ ಮಾಲಿಪಾಟೀಲ್ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

2023-24ರ ಅವಧಿಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ 120 ಎಕರೆ ಕೃಷಿ ಹಾಗೂ ವಾಣಿಜ್ಯ ಭೂಮಿಯ ಖರೀದಿಯು ಸಾಹುಕಾರ್ ಕುಟುಂಬದಿಂದ ನಡೆದಿದೆ. ಶಿವಶಂಕರಪ್ಪ ಅವರ ಪತ್ನಿ ವಿಜಯಲಕ್ಷ್ಮೀ ಅವರ ಹೆಸರಿನಲ್ಲೂ ಜಮೀನು ಖರೀದಿ ಮಾಡಿರುವ ಸೇಲ್ ಡೀಡ್ ಪತ್ರಗಳನ್ನು ದೂರಿನೊಂದಿಗೆ ಲಗತ್ತಿಸಿ ಮರಿಲಿಂಗಗೌಡ ನೀಡಿದ್ದಾರೆ.

ಶಿವಶಂಕರಪ್ಪ ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಖರೀದಿ ಮೇಲುನೋಟಕ್ಕೆ ಕಂಡು ಬರುತ್ತಿದೆ. ಜೊತೆಗೆ, ಅವರ ಪತ್ನಿ ವಿಜಯಲಕ್ಷ್ಮೀ ಅವರ ಆದಾಯದ ಮೂಲ ಏನು ಎಂಬುದು ಗೊತ್ತಿಲ್ಲ. ಸಾರ್ವಜನಿಕರ ಹಿತ ಕಾಯುವ ಹುದ್ದೆಯಲ್ಲಿದ್ದ ಶಿವಶಂಕರಪ್ಪ ಸಾಹುಕಾರ್‌ ಅವರ ಆಸ್ತಿ ವಿವರಗಳು ಸಾರ್ವಜನಿಕರಿಗೆ ಗೊತ್ತಾಗಲೇಬೇಕು. ಹೀಗಾಗಿ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚಿಸುವಂತೆ ಮರಿಲಿಂಗಗೌಡ ಮನವಿ ಮಾಡಿದ್ದಾರೆ.