Asianet Suvarna News Asianet Suvarna News

KPSC: ಒಂದೇ ಜಾತಿಯ 70ಕ್ಕೂ ಹೆಚ್ಚು ಜನ ಆಯ್ಕೆ, ಅಕ್ರಮದ ಶಂಕೆ!

* ಅರ್ಹತಾ ಪಟ್ಟಿಯಲ್ಲಿ 3852 ಜನ. 70 ಮಂದಿ ನಾಯ್ಕ್

* ಕೆಪಿಎಸ್ಸಿ: ಒಂದೇ ಜಾತಿಯ 70ಕ್ಕೂ ಹೆಚ್ಚು ಜನ ಆಯ್ಕೆ!

* ಅಕ್ರಮದ ಶಂಕೆ: ಆಕ್ಷೇಪಣೆಗೆ ಇತರ ಅಭ್ಯರ್ಥಿಗಳ ಸಿದ್ಧತೆ

KPSC More Than 70 candidates Selected From same Caste Doubt arises pod
Author
Bangalore, First Published Sep 13, 2021, 7:23 AM IST

ಬೆಂಗಳೂರು(ಸೆ.13): ಕಳೆದ ಫೆ.28ರಂದು ನಡೆದಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಅರ್ಹತಾ ಪಟ್ಟಿಯನ್ನು ಕರ್ನಾಟಕ ಲೋಕ ಸೇವಾ ಆಯೋಗ(ಕೆಪಿಎಸ್‌ಸಿ) ಬಿಡುಗಡೆ ಮಾಡಿದ್ದು, ಅರ್ಹತಾ ಪಟ್ಟಿಯಲ್ಲಿ ಒಂದೇ ಸಮುದಾಯದ ಹಲವು ಅಭ್ಯರ್ಥಿಗಳು ಇರುವ ಹಿನ್ನೆಲೆಯಲ್ಲಿ ಅಕ್ರಮ ನಡೆದಿರಬಹುದೆಂದು ಅನೇಕ ಅಭ್ಯರ್ಥಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಆಯ್ಕೆ ಪಟ್ಟಿಯಲ್ಲಿ ಒಂದೇ ಸಮುದಾಯಕ್ಕೆ (ನಾಯ್‌್ಕ) ಸೇರಿದ ಸುಮಾರು 70ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರಿದೆ. ಈ ಅಭ್ಯರ್ಥಿಗಳ ಹೆಸರುಗಳ ನಡುವೆ ಕೆಲವರನ್ನು ಸೇರಿಸಲಾಗಿದೆ. ಕೆಲವು ಕಡೆ ಒಂದರ ನಂತರ ಒಂದರಂತೆ ಹೆಸರುಗಳಿವೆ. ಈ ಹಿನ್ನೆಲೆಯಲ್ಲಿ ಇನ್ನಿತರ ಆಕಾಂಕ್ಷಿಗಳು ಕೆಪಿಎಸ್‌ಸಿಗೆ ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಒಟ್ಟು 1112 ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 1:3 ಅನುಪಾತದಂತೆ ಪಟ್ಟಿಬಿಡುಗಡೆ ಮಾಡಲಾಗಿದೆ. 3,852 ಮಂದಿ ಆಯ್ಕೆಯಾಗಿದ್ದಾರೆ. ಈ ಫಲಿತಾಂಶ ಹಲವರಿಗೆ ಗಾಬರಿಯನ್ನುಂಟು ಮಾಡಿದೆ. ಒಂದೇ ಸಮುದಾಯದವರು ಆಯ್ಕೆಯಾಗಿರುವ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರಬೇಕು. ಇಲ್ಲವೇ ನಕಲು ಮಾಡಲು ಅವಕಾಶ ಕಲ್ಪಿಸಿರಬೇಕು. ಒಂದೇ ಪರೀಕ್ಷಾ ಕೇಂದ್ರದಲ್ಲೇ ಈ ಸಮುದಾಯದವರೆಲ್ಲ ಆಯ್ಕೆಯಾಗಿರಬಹುದು ಎಂದು ಇತರೆ ಆಕಾಂಕ್ಷಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್‌ಸಿ ಆಯ್ಕೆ ಪಟ್ಟಿಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಹಣಕ್ಕಾಗಿ ಕೆಪಿಎಸ್‌ಸಿ ಸರ್ಕಾರಿ ಹುದ್ದೆಗಳನ್ನು ಮಾರಿಕೊಂಡಿದೆ ಎಂದು ಪ್ರತಿಕ್ರಿಯೆಗಳು ಬರುತ್ತಿವೆ. ಈ ಬಗ್ಗೆ ಅಭ್ಯರ್ಥಿಗಳನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಅಕ್ರಮ ನಡೆದಿದ್ದಲ್ಲಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಉದ್ಯೋಗಾಕಾಂಕ್ಷಿಗಳು ಆಗ್ರಹಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ:

ಎಫ್‌ಡಿಎ ಪರೀಕ್ಷೆಯಡಿ ಕನ್ನಡ ವ್ಯಾಸಂಗ ಮಾಡದವರಿಗಾಗಿ 2021ರ ಜ.23ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು. ಜ.24ರಂದು ಸಾಮಾನ್ಯ ಪ್ರಶ್ನೆಪತ್ರಿಕೆಗಳಿಗೆ ಪರೀಕ್ಷೆ ನಡೆಯಬೇಕಿತ್ತು. ಆದರೆ ಜ.23ರಂದು ಸಂಜೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಸೋರಿಕೆಯಾದ ತಕ್ಷಣ ಎಚ್ಚೆತ್ತುಕೊಂಡಿದ್ದ ಆಯೋಗ ಪರೀಕ್ಷೆಯನ್ನು ಮುಂದೂಡಿತ್ತು. ಬಳಿಕ ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಿತ್ತು. 3.74 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದಲ್ಲಿ ಕೆಪಿಎಸ್‌ಸಿ ಪರೀಕ್ಷಾ ವಿಭಾಗದ ಶ್ರೀಘ್ರ ಲಿಪಿಗಾರ್ತಿ ಸನಾ ಬೇಡಿ ಸೇರಿ 18 ಮಂದಿ ಆರೋಪಿಗಳನ್ನು ಸಿಸಿಬಿ ವಿಚಾರಣೆ ನಡೆಸುತ್ತಿದೆ.

ಕೆಪಿಎಸ್‌ಸಿ ವಿವರಣೆ ನೀಡಲಿ

ಕಳೆದ ಮೂರು ವರ್ಷಗಳಿಂದ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದೇನೆ. ಆಯ್ಕೆಗೆ ಅಗತ್ಯ ಅಂಕಗಳನ್ನು ಗಳಿಸಲು ಆಗುತ್ತಿಲ್ಲ. ಆದರೆ, ಒಂದೇ ಸಮುದಾಯಕ್ಕೆ ಸೇರಿದ ಹಲವು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರಬೇಕು. ಇಲ್ಲವೇ, ನಕಲು ಮಾಡಲು ಅವಕಾಶ ನೀಡರಬೇಕು. ಈ ಬಗ್ಗೆ ಕೆಪಿಎಸ್‌ಸಿ ಸ್ಪಷ್ಟವಾದ ವಿವರಣೆ ನೀಡಬೇಕಾಗಿದೆ.

- ಹೆಸರು ಹೇಳಲಿಚ್ಛಿಸದ ಉದ್ಯೋಗಾಕಾಂಕ್ಷಿ

ಅವ್ಯವಹಾರಕ್ಕೆ ಅವಕಾಶ ಇಲ್ಲ

ಪರೀಕ್ಷೆ ನಡೆಸಿ ಓಎಂಆರ್‌ ಪ್ರತಿಯನ್ನು ಸ್ಕಾ್ಯನ್‌ ಮಾಡಿದ ಬಳಿಕ ಅಂಕ ವಿವರಗಳು ಕೆಪಿಎಸ್‌ಸಿಗೆ ಬರುತ್ತವೆ. ಅದರ ಆಧಾರದಲ್ಲಿ ಆಯ್ಕೆ ಪಟ್ಟಿನಿಗದಿಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿಯ ಯಾವುದೇ ಪಾತ್ರ ಇರುವುದಿಲ್ಲ. ಅಲ್ಲದೆ, ಪರೀಕ್ಷೆಯನ್ನು ಅತ್ಯಂತ ಸುರಕ್ಷಿತವಾಗಿ ನಡೆಸಲಾಗಿದ್ದು, ಎಲ್ಲಿಯೂ ಅವ್ಯವಹಾರಕ್ಕೆ ಅವಕಾಶ ನೀಡಿಲ್ಲ. ಆರೋಪ ಸಂಬಂಧ ಯಾರಾದರೂ ಲಿಖಿತ ದೂರು ನೀಡಿದಲ್ಲಿ ಪರಿಶೀಲಿಸಲಾಗುವುದು.

-ಎಂ.ಕನಗವಲ್ಲಿ, ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕಿ

ಅಕ್ರಮದ ಶಂಕೆ ಏಕೆ?

- ಕೆಪಿಎಸ್‌ಸಿಯಿಂದ ಎಫ್‌ಡಿಎ ಹುದ್ದೆಗೆ 3852 ಜನರ ಅರ್ಹತಾ ಪಟ್ಟಿಪ್ರಕಟ

- ಇವರಲ್ಲಿ 1:3 ಅನುಪಾತದಲ್ಲಿ 1112 ಅಭ್ಯರ್ಥಿಗಳು ಶೀಘ್ರ ಅಂತಿಮ ಆಯ್ಕೆ

- ಅರ್ಹತಾ ಪಟ್ಟಿಗೆ ನಾಯ್ಕ್ ಸಮುದಾಯದ 70ಕ್ಕೂ ಹೆಚ್ಚು ಜನರ ಆಯ್ಕೆ ಹೇಗೆ?

- ಒಂದೇ ಕೇಂದ್ರದಿಂದ ಇವರೆಲ್ಲ ಪಾಸಾಗಿರುವ ಅಥವಾ ನಕಲು ಮಾಡಿರುವ ಶಂಕೆ

- ಪಟ್ಟಿಯಲ್ಲಿ ಕ್ರಮವಾಗಿರುವ ಇವರ ಹೆಸರುಗಳ ಮಧ್ಯೆ ಇತರ ಕೆಲ ಹೆಸರು ಸೇರ್ಪಡೆ?

Follow Us:
Download App:
  • android
  • ios