ಕೆಪಿಎಸ್‌ಸಿ ಹೆಸರಲ್ಲಿ ಮತ್ತೊಂದು ಕರ್ಮಕಾಂಡ; ಸರ್ಕಾರದ ಆದೇಶವನ್ನೇ ನಕಲು ಮಾಡಿ ಮಹಿಳೆಗೆ 4 ಕೋಟಿ ರೂ. ವಂಚನೆ
ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯತ್ವ ಕೊಡಿಸುವುದಾಗಿ ಹೇಳಿ ಸರ್ಕಾರದ ನಕಲಿ ಆದೇಶ ಪತ್ರವನ್ನು ರಚಿಸಿ ಮಹಿಳೆಯೊಬ್ಬರಿಗೆ 4 ಕೋಟಿ ರೂ. ವಂಚನೆ ಮಾಡಿದ್ದಾರೆ.
ಬೆಂಗಳೂರು (ಏ.02): ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ)ವನ್ನು ಭ್ರಷ್ಟಾಚಾರದ ಬಿಳಿ ಆನೆ ಎಂತಲೇ ಕರೆಯುವ ಕಾಲವೊಂದಿತ್ತು. ಈಗ ಕೆಪಿಎಸ್‌ಸಿಯಲ್ಲಿ ಹಗರಣಗಳು ನಡೆಯುತ್ತಿವೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಕೆಪಿಎಸ್‌ಸಿ ಹೆಸರನಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ಹಾಗೂ ವಂಚನೆ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯೊಬ್ಬರಿಗೆ ಕೆಪಿಎಸ್‌ಸಿ ಸದಸ್ಯತ್ವ ಕೊಡಿಸುವುದಾಗಿ ಹೇಳಿ ಬರೋಬ್ಬರಿ 4 ಕೋಟಿ ರೂ. ಪಡೆದು ಸರ್ಕಾರದ ನಕಲಿ ಆದೇಶವನ್ನು ನೀಡಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಕೆಪಿಎಸ್ ಸಿ ಸದಸ್ಯತ್ವ ಕೊಡಿಸುವುದಾಗಿ ವಂಚನೆ ಮಾಡಿರುವ ಪ್ರಕರಣದ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್ ಅವರ ನಕಲಿ ಲೆಟರ್ ಹೆಡ್ ಹಾಗೂ ನಕಲಿ ಸಹಿ ಬಳಸಿ ವಂಚನೆ ಮಾಡಲಾಗಿದೆ. ಇನ್ನು ನೀವು ಕೆಪಿಎಸ್‌ಸಿ ಸದಸ್ಯರಾಗಿದ್ದೀರಿ ಎಂದು ಮಹಿಳೆಗೆ ನಕಲಿ ಲೆಟರ್ ಹೆಡ್ ನೀಡಿ ಆ ಮಹಿಳೆಯಿಂದ 4 ಕೋಟಿ ಹಣ ಪಡೆದು ವಂಚನೆ ಮಾಡಲಾಗಿದೆ. ಈ ಸಂಬಂಧವಾಗಿ ಸಿಸಿಬಿ ಪೊಲೀಸರು ಮೂವರನ್ನ ಬಂಧಿಸಿದ್ದಾರೆ.
ಕೆಪಿಎಸ್‌ಸಿ ಕಚೇರಿಯಿಂದ ಆಯ್ಕೆ ಪಟ್ಟಿಯೇ ನಾಪತ್ತೆ..!
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯತ್ವ ಕೊಡಿಸಲು 5 ಕೋಟಿ ರೂ. ನೀಡುವಂತೆ ಆಮಿಷವೊಡ್ಡಿದ್ದರು. ನಂತರ, ನಾಲ್ವರು ಆರೋಪಿಗಳು ಮಹಿಳೆಯಿಂದ 4.10 ಕೋಟಿ ರೂ. ಹಣ ಪಡೆದಿದ್ದರು. ಇನ್ನು ಮಹಿಳೆ ಕೆಪಿಎಸ್‌ಸಿ ಕಚೇರಿಗೆ ಹೋಗಲು ಮುಂದಾದಾಗ ಆರೋಪಿಗಳ ಚಲನವಲನ ಬಗ್ಗೆ ಸಂಶಯ ಬಂದಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಿದಾಗ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ರಿಯಾಜ್ ಅಹ್ಮದ್, ಯೂಸುಫ್, ಚಂದ್ರಪ್ಪ ಹಾಗೂ ರುದ್ರೇಶ್ ಎಂಬ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಆರೋಪಿಗಳು ಮಹಿಳೆಗೆ ಕೆಪಿಎಸ್‌ಸಿ ಸದಸ್ಯತ್ವ ಕೊಡಿಸಿದ್ದೇವೆ ಎಂದು ನಂಬಿಸಲು ರಾಜ್ಯ ಸರ್ಕಾರದ ನಡಾವಳಿಗಳು, ಟಿಪ್ಪಣಿಯನ್ನ ನಕಲು ಮಾಡಿದ್ದರು. ನೇಮಕಾತಿ ಬಗ್ಗೆ ನಕಲಿ ಟಿಪ್ಪಣಿ ತಯಾರಿಸಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ನಕಲಿ ಸಹಿಯನ್ನೂ ಬಳಕೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ಮಾರ್ಚ್ 26 ರಂದು ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಆರೋಪಿಗಳು ನಕಲಿ ನೇಮಕಾತಿ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಬೆಂಗಳೂರು: ರಾತ್ರಿ ಕಾರ್ ಹಿಂಬಾಲಿಸಿ ಮಹಿಳೆಗೆ ಕಿರುಕುಳ, ಪುಂಡರ ಹೆಡೆಮುರಿ ಕಟ್ಟಿದ ಖಾಕಿ ಪಡೆ...!
ಸರ್ಕಾರಿ ನೌಕರರ ನೇಮಕಾತಿ ಕಡತವೇ ನಾಪತ್ತೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿಯಲ್ಲಿ ಬಹುದೊಡ್ಡ ಅಕ್ರಮ ನಡೆಸಿದೆ. ನೇಮಕಾತಿ ಪಟ್ಟಿಯೇ ನಾಪತ್ತೆ ಆಗಿರುವುದೇ ಇದಕ್ಕೆ ಸಾಕ್ಷಿ ಎಂದು ಬಿಜೆಪಿ ಆರೋಪಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕಲೆಕ್ಷನ್, ಕಮಿಷನ್, ಟ್ರಾನ್ಸ್‌ಫರ್ ದಂಧೆ ನಡೆಸುತ್ತಿರುವ ಮಜಾವಾದಿ ಸಿದ್ದರಾಮಯ್ಯ ಸರ್ಕಾರ, ಇದೀಗ ಕೆಪಿಎಸ್‌ಸಿ ನೇಮಕಾತಿಯಲ್ಲೂ ಅಕ್ರಮ ನಡೆಸಿದೆ. ಈ ಅಕ್ರಮ ಬಯಲಿಗೆ ಬರಬಾರದು ಎಂದು ನೇಮಕಾತಿ ಪಟ್ಟಿಯನ್ನೇ ಕಳ್ಳತನ ಮಾಡಿ ನಾಪತ್ತೆ ಆಗಿದೆ ಎಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ ಎಂದು ಆರೋಪಿಸಿದೆ.