R Dhruvanarayan Passes Away: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೃದಯಾಘಾತದಿಂದ ನಿಧನ
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ ಇಂದು ಬೆಳಗಿನ ಜಾವ ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.
ಮೈಸೂರು (ಮಾ.11): ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ ಇಂದು ಬೆಳಗಿನ ಜಾವ ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಧ್ರುವನಾರಾಯಣರಿಗೆ ಹಠಾತ್ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಮೈಸೂರಿನ ಡಿಆರ್ಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಧ್ರುವನಾರಾಯಣರಿಗೆ ಬೆಳಗಿನ ಜಾವ 6.30ಕ್ಕೆ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ವೈದ್ಯರಿಗೆ ಕರೆ ಮಾಡಿ ಎದೆನೋವು ಕಾಣಿಸಿಕೊಂಡಿದೆ ಆಸ್ಪತ್ರೆಗೆ ಬರ್ತಿದ್ದೇವೆ ಎಂದು ಹೇಳಿದ್ದರು. ನಿಮಗಾಗಿ ನಾನು ಕಾಯುತ್ತೇನೆ ಬನ್ನಿ ಎಂದು ಖ್ಯಾತ ಹೃದಯ ತಜ್ಞ ಸದಾನಂದ ಹೇಳಿ, ತುರ್ತು ಚಿಕಿತ್ಸಾ ಘಟಕದಲ್ಲಿ ಕಾಯುತ್ತಿದ್ದರು. ತಕ್ಷಣ ಪಕ್ಕದ ಮನೆಯವರು ಆಸ್ಪತ್ರೆ ಧ್ರುವನಾರಾಯಣರನ್ನು ಶಿಫ್ಟ್ ಮಾಡುವ ವೇಳೆ ಎದೆಉರಿಯಿಂದ ಹೃದಯದಲ್ಲಿ ಬ್ಲಡ್ ಬ್ಲೀಡಿಂಗ್ ಆಗಿ 7 ಗಂಟೆಗೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಧ್ರುವನಾರಾಯಣ ಕೊನೆಯುಸಿರೆಳೆದಿದ್ದಾರೆ. ಇಂದೇ ಧ್ರುವನಾರಾಯಣ ಅಂತ್ಯ ಸಂಸ್ಕಾರ ಅವರ ಹುಟ್ಟೂರಿನಲ್ಲಿ ನಡೆಯಲಿದೆ.
ಬಿಜೆಪಿ ಸರ್ಕಾರ ಏಕೆ ಮೇಲ್ಮನವಿ ಸಲ್ಲಿಸಿಲ್ಲ?: ಧ್ರುವನಾರಾಯಣ್ ಪ್ರಶ್ನೆ
ಮಂಡ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ಧ್ರುವನಾರಾಯಣ ನಿಧನದ ಹಿನ್ನಲೆಯಲ್ಲಿ ರಾಮನಗರದಲ್ಲಿ ಇಂದು ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆ ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಮೈಸೂರಿನತ್ತ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್ ನಾಯಕರು ಆಗಮಿಸಲಿದ್ದಾರೆ. ಧ್ರುವನಾರಾಯಣ ನಿಧನದ ಬಗ್ಗೆ ಸಂಸದ ಪ್ರತಾಪ್ ಸಿಂಹ ತಮ್ಮ ಟ್ವೀಟರ್ ಖಾತೆಯಲ್ಲಿ ಇಂಥಾ ಒಳ್ಳೆಯ ವ್ಯಕ್ತಿಯನ್ನೂ ಕಿತ್ತುಕೊಂಡೆಯಲ್ಲಾ ದೇವರೇ... ಓಂ ಶಾಂತಿ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವ ನಾರಾಯಣ ಅವರು ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಮತದಾರರನ್ನು ಭೇಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದರು.
ಇನ್ನು ರಾಣೆಬೆನ್ನೂರಿನಲ್ಲಿ ನಡೆಯಲಿರುವ ಪ್ರಜಾಧ್ವನಿ ಸಮಾವೇಶವನ್ನು ಮುಂದೂಡುವ ಸಾಧ್ಯತೆಯಿದ್ದು, ಧ್ರುವನಾರಾಯಣ ಅವರಿಗೆ ನಂಜನಗೂಡು ಕ್ಷೇತ್ರಕ್ಕೆ ಬಹುತೇಕ ಟಿಕೆಟ್ ಖಚಿತವಾಗಿತ್ತು. ಮಹಾದೇವಪ್ಪ ಹಾಗೂ ಧ್ರುವನಾರಾಯಣ ನಡುವೆ ಸಿದ್ದರಾಮಯ್ಯ, ಡಿಕೆಶಿ ಸಂಧಾನ ಕೂಡ ಮಾಡಿದ್ದರು. ಇನ್ನು 1983ರಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷ ಸೇರಿದ ಆರ್. ಧ್ರುವನಾರಾಯಣ ಅವರು ಕಾಲಾಂತರದಲ್ಲಿ ಪಕ್ಷದ ಮುಖಂಡನಾಗಿ ಬೆಳೆದರು. 2004ರಲ್ಲಿ ಸಂತೇಮರಹಳ್ಳಿ ವಿಧಾನ ಸಭಾ ಕ್ಷೇತ್ರ ಹಾಗೂ 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳಿಂದ ಸತತ ಎರಡು ಬಾರಿ ಶಾಸಕರಾಗಿ ಜಯ ಗಳಿಸಿದ್ದರು.
ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರ: ಆರ್.ಧ್ರುವನಾರಾಯಣ್ ಆರೋಪ
1999ರಲ್ಲಿ ಸಂತೇಮರಹಳ್ಳಿ ಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎ.ಆರ್. ಕೃಷ್ಣಮೂರ್ತಿ ಅವರ ಎದುರು ಪರಾಜಿತರಾದರು. ಆದರೆ ಇದೇ ಕೃಷ್ಣಮೂರ್ತಿ ಅವರನ್ನು 2004ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 1 ಮತದಿಂದ ಧೃವನಾರಾಯಣ ಸೋಲಿಸಿದ್ದರು. ಹಾಗೆಯೇ 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕೂಡ ಕೃಷ್ಣಮೂರ್ತಿ ಅವರನ್ನು ಸೋಲಿಸಿ ಸಂಸದರಾದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ಧ್ರುವನಾರಾಯಣ ಮೂಲತಃ ವೃತ್ತಿಯಿಂದ ಕೃಷಿಕರು.