ಬೆಂಗಳೂರು(ನ.09): ನೋಟು ಅಮಾನ್ಯೀಕರಣ ಮಾಡಿ ನಾಲ್ಕು ವರ್ಷ ಕಳೆದಿದ್ದು ನೋಟು ರದ್ದತಿಯ ಯಾವ ಉದ್ದೇಶವೂ ಸಫಲವಾಗಿಲ್ಲ. ಬದಲಿಗೆ ನೂರಾರು ಸಮಸ್ಯೆಗಳು ಸೃಷ್ಟಿಯಾಗಿ ದೇಶದ ಆರ್ಥಿಕತೆ ಕುಸಿದು ಜನರು ಪರದಾಡುವಂತಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಟೀಕಿಸಿದೆ.

ನೋಟು ರದ್ದತಿಗೆ ಭಾನುವಾರ 4 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ನೋಟು ರದ್ದತಿಯಿಂದ ಭಯೋತ್ಪಾದನೆ ನಿಯಂತ್ರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಬಳಿಕವೂ ಪುಲ್ವಾಮಾ, ಪಠಾಣ್‌ಕೋಟ್‌, ಉರಿ, ಗಡ್‌ ಚಿರೋಲಿ ಸೇರಿದಂತೆ ಸಾವಿರಾರು ಭೀಕರ ಭಯೋತ್ಪಾದಕ ದಾಳಿಗಳು ನಡೆದಿವೆ. ಹಾಗಾದರೆ ನೋಟು ರದ್ದತಿ ನೈಜ ಉದ್ದೇಶ ಸಾಕಾರಗೊಂಡಿದ್ದು ಹೇಗೆ? ಎಂದು ಪ್ರಶ್ನಿಸಿದೆ.

'ನೋಟ್‌ ಬ್ಯಾನ್‌ನಿಂದ ಪಾರದರ್ಶಕತೆ ಹೆಚ್ಚಿದೆ, ಪ್ರಗತಿ ಆಗಿದೆ'

105 ಮಂದಿ ಬಡವರನ್ನು ಬಲಿಪಡೆದ ನೋಟ್‌ ಬ್ಯಾನ್‌ ಒಂದು ‘ಕರಾಳ ತೀರ್ಮಾನ’. ಇದರಿಂದ ದೇಶದ ಜನಸಾಮಾನ್ಯರು ಮಾನಸಿಕ, ದೈಹಿಕ ನೋವು, ಕಷ್ಟ ಅನುಭವಿಸಿದರೂ ಅವರಿಗೆ ಏನೂ ಸಿಗಲಿಲ್ಲ. ಇನ್ನು ಕಪ್ಪು ಹಣ, ಭಯೋತ್ಪಾದನೆ, ಖೋಟಾ ನೋಟು, ಭ್ರಷ್ಟಾಚಾರ ನಿಯಂತ್ರಿಸಿ ಕ್ಯಾಶ್‌ಲೆಸ್‌ ಎಕಾನಮಿ ಮಾಡುವುದಾಗಿ ಹೇಳಿದ್ದ ಭರವಸೆಯೂ ಹುಸಿಯಾಗಿದೆ. ಬದಲಿಗೆ ಆರ್ಥಿಕತೆ, ಬೇಡಿಕೆ ಪಾತಾಳಕ್ಕೆ ಬಿದ್ದು, ಉದ್ಯೋಗ ನಷ್ಟ ಉಂಟಾಗಿ ನಿರುದ್ಯೋಗ ಹಾಗೂ ಬಡತನ ಹೆಚ್ಚಾಗಿದೆ. ಆರ್ಥಿಕ ಕುಸಿತ, ಬೆಲೆ ಏರಿಕೆ, ಅಭಿವೃದ್ಧಿ ಕುಂಠಿತದಿಂದಾಗಿ ಉದ್ದಿಮೆಗಳು ಮುಚ್ಚಿವೆ ಎಂದು ತರಾಟೆಗೆ ತೆಗೆದುಕೊಂಡಿದೆ.