ಉತ್ತರ ಕನ್ನಡದ ಶಿರಸಿ ತಾಲೂಕಿನಲ್ಲಿ ಅಡಿಕೆ ಸುಲಿಯುವ ಯಂತ್ರಕ್ಕೆ ಸೀರೆ ಸಿಲುಕಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೆಗಡೆ ಹೊಸಬಾಳೆ ಅವರ ಪತ್ನಿ ಶೋಭಾ ಹೆಗಡೆ ಮೃತಪಟ್ಟಿದ್ದಾರೆ. ಹೊಸಬಾಳೆ ನಿವಾಸಿಯಾದ ಅವರು, ಅಡಿಕೆ ಸುಲಿಯುವ ಕೆಲಸದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತಿ ವೆಂಕಟೇಶ ಹೆಗಡೆ ಹಾಗೂ ಪುತ್ರನನ್ನು ಅಗಲಿದ್ದಾರೆ.

ಉತ್ತರ ಕನ್ನಡ (ಮಾ.27):  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಪತ್ನಿ ಶೋಭಾ ಹೆಗಡೆ ಹೊಸಬಾಳೆ ಅವರು ಅಡಿಕೆ ಸುಲಿಯುವ ಯಂತ್ರಕ್ಕೆ ಸೀರೆಯ ಸೆರಗು ಸಿಲುಕಿ, ಯಂತ್ರದೊಳಗೆ ಹೋಗಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಶಿರಸಿ ತಾಲೂಕಿನ ಹೊಸಬಾಳೆ ನಿವಾಸಿ ಶೋಭಾ ಹೆಗಡೆ ಆಕಸ್ಮಿಕ ಅವಘಡದಲ್ಲಿ ಬುಧವಾರ ನಿಧನರಾಗಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿ.ಪಂ. ಮಾಜಿ ಸದಸ್ಯ, ಪ್ರಗತಿಪರ ಕೃಷಿಕ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಧರ್ಮ ಪತ್ನಿಯಾಗಿದ್ದ ಶೋಭಾ ಹೆಗಡೆ ಅವರು ಕೃಷಿ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಮನೆಯಲ್ಲಿ ಅಡಿಕೆ ಸುಲಿಯುವ ಕೆಲಸ ನಡೆಯುತ್ತಿತ್ತು. ಶೋಭಾ ಹೆಗಡೆ ಅವರು ಕೆಲಸಗಾರರು ಕೆಲಸದ ಮೇಲ್ವಿಚಾರಣೆ ನೋಡಿಕೊಳ್ಳಲು ಹೋಗಿದ್ದರು.

ಈ ವೇಳೆ ಚಾಲಿ ಸುಲಿಯುವ ಯಂತ್ರಕ್ಕೆ ಆಕಸ್ಮಿಕವಾಗಿ ಸೀರೆಯ ಸೆರಗು ಸಿಲುಕಿದ್ದು, ಯಂತ್ರ ತನ್ನತ್ತ ಸೆಳೆದು ಬಿಸಾಕಿದ ಪರಿಣಾಮ ಶೋಭಾ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಕೆಲಸಗಾರರು ಅಲ್ಲಿಯೇ ಇದ್ದರೂ ಕ್ಷಣಾರ್ಧದಲ್ಲಿ ಘಟನೆ ಸಂಭವಿಸಿದೆ. ಕಳೆದ ಮೂರು ವರ್ಷಗಳಿಂದ ಚಾಲಿ ಸುಲಿಯುವ ವೇಳೆ ಶೋಭಾ ಹೆಗಡೆ ಅವರೇ ದೇಖರೇಖು ನೋಡಿಕೊಳ್ಳುತ್ತಿದ್ದರು. ಆದರೆ, ಬುಧವಾರ ವಿಧಿ ಕೈಕೊಟ್ಟಿದ್ದು, ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಈ ಘಟನೆ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗ್ಯಾರಂಟಿ ಎಂಟಾಣೆ ತೋರಿಸಿ ಜನರನ್ನ ಲಂಗೋಟಿ ಮೇಲೆ ನಿಲ್ಲಿಸಿದ ಸರ್ಕಾರ, 22 ತಿಂಗಳ ಅಧಿಕಾರದಲ್ಲಿ 'ಬೆಲೆ ಏರಿಕೆ'ಯದ್ದೇ ಕಾರುಬಾರು!

ಶೋಭಾ ಹೆಗಡೆ ಅವರು ತಮ್ಮ ಪತಿಯ ಸಮಾಜಸೇವೆ ಮತ್ತು ರಾಜಕೀಯ ಕಾರ್ಯಗಳಿಗೆ ಪ್ರೋತ್ಸಾಹಕರಾಗಿ ಬೆಂಬಲವಾಗಿ ನಿಂತಿದ್ದರು. ಶೋಭಾ ಹೆಗಡೆ ಅವರು ಪತಿ ವೆಂಕಟೇಶ ಹೆಗಡೆ, ಪುತ್ರ ನಾಗರಾಜ ಹಾಗೂ ಕುಟುಂಬಸ್ಥರನ್ನು ಅಗಲಿದ್ದು, ಮೃತರ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ ಹೊಸಬಾಳೆಯಲ್ಲಿ ನಡೆದಿದೆ.