*  ಪ್ರತಿಭಟನೆ ನಡೆಸಿದವರ ಜೊತೆ ಸಂಧಾನವೆಮದರೆ ತಪ್ಪಾಗಿದೆ ಎಂದೇ ಅರ್ಥ*  ಸಂಧಾನ ನಡೆಸುತ್ತಾರೆಂದರೆ ಏನರ್ಥ?*  ಕೋಮಲ್‌, ಜಗ್ಗೇಶ್‌ ಬಗ್ಗೆ ಮಾತನಾಡಲ್ಲ

ಬೆಂಗಳೂರು(ಆ.26):ಬಿಜೆಪಿ ಸರ್ಕಾರ ಸದಾ ಹಗರಣ, ಭ್ರಷ್ಟಾಚಾರಗಳಿಂದ ಕೂಡಿರುವ ಕೂಪ. ಔಷಧ, ವೆಂಟಿಲೇಟರ್‌, ಆ್ಯಂಬುಲೆನ್ಸ್‌, ಆಹಾರ ಕಿಟ್‌ ಹಗರಣದ ಬಳಿಕ ಮಕ್ಕಳ ಸ್ವೆಟರ್‌ನಲ್ಲೂ ಹಗರಣ ನಡೆಸಿರುವುದು ನಾಚಿಕೆಗೇಡಿನ ಸಂಗತಿ. ಪ್ರತಿಭಟನೆ ನಡೆಸುತ್ತಿದ್ದವರ ಜತೆ ಸಂಧಾನ ನಡೆಸುತ್ತಾರೆ ಎಂದರೆ ತಪ್ಪಾಗಿದೆ ಎಂದೇ ಅರ್ಥವಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವಿದ್ಯಾರ್ಥಿಗಳಿಗೆ ಸ್ವೆಟರ್‌ ವಿತರಿಸಿರುವುದಾಗಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿದ್ದಾರೆ. ಕೊರೋನಾ ಅವಧಿಯಲ್ಲಿ ಯಾವ ಮಕ್ಕಳಿಗೆ ವಿತರಣೆ ಮಾಡಿದ್ದಾರೆ ಎಂಬುದು ದಾಖಲೆ ಬಿಡುಗಡೆ ಮಾಡಲಿ. ಬೆಂಗಳೂರು ನಗರದ ಉಸ್ತುವಾರಿಯನ್ನು ಮುಖ್ಯಮಂತ್ರಿಯವರೇ ಹೊತ್ತಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಕೋಮಲ್ ಮಸ್ತ್ ಕಮಾಲ್...ಸ್ವೆಟರ್ ಹಗರಣ ಒಂದೆರಡು ಲಕ್ಷದ್ದಲ್ಲ!

ಕೋಮಲ್‌, ಜಗ್ಗೇಶ್‌ ಬಗ್ಗೆ ಮಾತನಾಡಲ್ಲ:

ಶಾಲಾ ಮಕ್ಕಳಿಗೆ ಸ್ವೆಟರ್‌ ನೀಡುವ ಹಗರಣದಲ್ಲಿ ಕೋಮಲ್‌, ಜಗ್ಗೇಶ್‌ ಅವರು ಭಾಗಿಯಾಗಿದ್ದಾರೋ, ಇಲ್ಲವೋ ಎಂಬುದರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಸರ್ಕಾರ ಮಕ್ಕಳಿಗೆ ಸ್ವೆಟರ್‌ ನೀಡಲು ಟೆಂಡರ್‌ ಕರೆದಿತ್ತು. ಟೆಂಡರ್‌ ಆಗಿ ಹಣವನ್ನೂ ನೀಡಿದ್ದಾರೆ. ಹಾಗಾದರೆ ಆ ಸ್ವೆಟರ್‌ಗಳು ಎಲ್ಲಿವೆ? ಯಾವ ಮಕ್ಕಳಿಗೆ ಸಿಕ್ಕಿವೆ? ಶಾಲೆ ಯಾವಾಗ ಆರಂಭವಾಗಿದೆ? ಎಂಬುದರ ಬಗ್ಗೆ ಪಾಲಿಕೆಯವರು ತಿಳಿಸಬೇಕು. ಈ ವಿಚಾರವಾಗಿ ಮುಖ್ಯಮಂತ್ರಿಗಳೇ ಜವಾಬ್ದಾರಿ ಹೊತ್ತು ಉತ್ತರ ನೀಡಬೇಕು ಎಂದರು.

ಸಂಧಾನ ನಡೆಸುತ್ತಾರೆಂದರೆ ಏನರ್ಥ?

ಹಗರಣದ ಬಗ್ಗೆ ಪ್ರತಿಭಟನೆ ನಡೆಸದಂತೆ ಆಯುಕ್ತರೇ ಸಂಧಾನ ಸಭೆ ನಡೆಸಿದ್ದಾರೆ ಎಂದರೆ ಅವರಿಂದ ವೈಫಲ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಮಟ್ಟಕ್ಕೆ ಬಿಬಿಎಂಪಿ ಆಯುಕ್ತರು ಇಳಿಯಬಾರದು. ಈ ವಿಚಾರದಲ್ಲಿ ಎಲ್ಲವೂ ನ್ಯಾಯ ಸಮ್ಮತವಾಗಿದ್ದರೆ ಆಯುಕ್ತರು ಎಲ್ಲವನ್ನೂ ನಿರ್ಭೀತಿಯಿಂದ ಎದುರಿಸಬೇಕು. ಅದನ್ನು ಬಿಟ್ಟು ಸಂಧಾನ ಮಾಡಿರುವುದು ನೋಡಿದರೆ ಇಲ್ಲಿ ಏನೋ ತಪ್ಪು ನಡೆದಿದೆ ಎಂಬುದು ರುಜುವಾತಾಗುತ್ತದೆ ಎಂದು ದೂರಿದರು.