ಲಾಕ್‌ನಿಂದ ಈಗಾಗಲೇ ಜನ ತತ್ತರಿಸಿದ್ದಾರೆ| ಲಾಕ್‌ಡೌನ್‌ ಹೊರತಾದ ಪರಾರ‍ಯಯ ಕ್ರಮ ಅಗತ್ಯ| ಸರ್ವಪಕ್ಷ ಸಭೆಗೆ ಹೋಗುವ ಬಗ್ಗೆ ಚರ್ಚಿಸಿ ನಿರ್ಧಾರ| ಸರ್ಕಾರ ಲಸಿಕೆ ರಫ್ತು ನಿಲ್ಲಿಸಿ ದೇಶದ ಜನರಿಗೆ ಮೊದಲು ನೀಡಲಿ: ಡಿಕೆಶಿ| 

ಬೆಂಗಳೂರು(ಏ.19): ರಾಜ್ಯದಲ್ಲಿ ಲಾಕ್‌ಡೌನ್‌ ಅವಶ್ಯಕತೆ ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಕೊರೋನಾ ತೀವ್ರ ಗತಿಯಲ್ಲಿ ಹರಡದಂತೆ ಮುನ್ನೆಚ್ಚರಿಕೆಗೆ ಯಾವ್ಯಾವ ಕ್ರಮ ಬೇಕೋ ಕೈಗೊಳ್ಳಲಿ. ಲಾಕ್‌ಡೌನ್‌ನಿಂದ ಯಾರಿಗೂ ಅನುಕೂಲ ಆಗುವುದಿಲ್ಲ. ಈ ಹಂತದಲ್ಲಿ ಜೀವನ ಹಾಗೂ ಜೀವನ ಎರಡೂ ಮುಖ್ಯ ಎಂಬುದು ಅರಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಇನ್ನು ಕೊರೊನಾ ವಿಚಾರವಾಗಿ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದು ಕೇವಲ ನನ್ನ ನಿರ್ಧಾರವಲ್ಲ. ಇದು ರಾಜ್ಯದ ವಿಚಾರ. ಈ ಬಗ್ಗೆ ನಮ್ಮ ನಾಯಕರ ಕುರಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದೂ ಅವರು ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲ. ಜನರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಅವರಿಗೆ ಆರ್ಥಿಕ ನೆರವನ್ನೂ ನೀಡುತ್ತಿಲ್ಲ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಿಸಿತ್ತು. ರಾಜ್ಯ ಸರ್ಕಾರದಿಂದ 1600 ಕೋಟಿ ಪ್ಯಾಕೇಜ್‌ ಎಂದರು. ಆದರೆ, ಯಾರಿಗೂ ಸಹಾಯವಾಗಲಿಲ್ಲ. ಒಂದು ಕಡೆ ಜೀವ, ಮತ್ತೊಂದು ಕಡೆ ಜೀವನ. ಇವೆರಡರ ನಡುವೆ ಜನ ಸಿಲುಕಿದ್ದಾರೆ ಎಂಬುದನ್ನು ಅರಿಯಬೇಕು’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರಲ್ಲಿ ಲಾಕ್‌ಡೌನ್ : ಈಗಲೇ ಬೇಡ ಎಂದ ಶಾಸಕರು

ಕೊರೋನಾ ಲಾಕ್‌ಡೌನ್‌ ಬಳಿಕ ಉದ್ಯೋಗಸ್ಥರು ಮತ್ತು ಉದ್ಯೋಗದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಬ್ಯಾಂಕ್‌ ಸಾಲದಲ್ಲಿ 6 ತಿಂಗಳಿಂದ ಒಂದು ವರ್ಷದವರೆಗೂ ಬಡ್ಡಿ ಮನ್ನಾ ಮಾಡಲು ಆಗಿಲ್ಲ. ಎಲ್ಲಾ ವ್ಯಾಪಾರಸ್ಥರೂ ತಮ್ಮ ಹೋಟೆಲ್‌ ಮತ್ತಿತರ ವ್ಯಾಪಾರಗಳನ್ನು ಮಾರಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ಸರ್ಕಾರ ಪರಿಹಾರ ನೀಡುತ್ತೇವೆ ಎಂದವರಿಗೆ ಸರಿಯಾಗಿ ಪರಿಹಾರ ತಲುಪಿಲ್ಲ. ಎರಡೂವರೆ ಲಕ್ಷ ಚಾಲಕರಿಗೆ ಪರಿಹಾರ ಎಂದರು ಆದರೆ ಯಾರಿಗೂ ಕೊಟ್ಟಿಲ್ಲ. ಯಾರಿಗೆ ಕೊಟ್ಟಿದ್ದೀರಿ ಎಂದು ಪಟ್ಟಿಕೊಡಿ ಅಂತಾ ಕೇಳಿದೆವು. ಸಂಪ್ರದಾಯ ವೃತ್ತಿ ಅವಲಂಭಿಸಿರುವವರಿಗೂ ಯಾವುದೇ ಪರಿಹಾರ ಕೊಟ್ಟಿಲ್ಲ. ಇದೆಲ್ಲದರ ಮಧ್ಯೆ ಬೆಲೆ ಏರಿಕೆ ಆಗಿದೆ. ರಸಗೊಬ್ಬರ ಬೆಲೆ ಶಿಖರಕ್ಕೇರಿದೆ. ಸೀಮೆಂಟ್‌, ಕಬ್ಬಿಣ ಎಲ್ಲವೂ ಬೆಲೆ ಹೆಚ್ಚಾಗಿದೆ. ಹೀಗಾಗಿ ಲಾಕ್ಡೌನ್‌ ಬೇಡ’ ಎಂದು ಅಭಿಪ್ರಾಯಪಟ್ಟರು.

ಪರಿಸ್ಥಿತಿ ಕೈಮೀರಿದಾಗ ಸರ್ವಪಕ್ಷ ಸಭೆ: ಡಿಕೆಶಿ

‘ಸರ್ಕಾರ ಈವರೆಗೂ ನಮ್ಮ ಸಲಹೆ ಕೇಳಿಲ್ಲ. ಅವರ ಇಚ್ಛೆಯಂತೆ ನಿರ್ಧಾರ ತೆಗೆದುಕೊಂಡಿದ್ದಾರೆ. ಪರಿಸ್ಥಿತಿ ಕೈಮೀರಿರುವ ಹಿನ್ನೆಲೆಯಲ್ಲಿ ಈಗ ಸರ್ವಪಕ್ಷ ಸಭೆ ಕರೆದಿದ್ದಾರೆ. ಅವರು ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ. ನಮಗೆ ಇನ್ನು ಅಧಿಕೃತವಾಗಿ ಮಾಹಿತಿ ಬಂದಿಲ್ಲ’ ಎಂದು ಇದೇ ವೇಳೆ ಶಿವಕುಮಾರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೊರೋನಾ ಹೆಸರಿನಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಅದನ್ನು ನಾವು ಪ್ರಶ್ನೆ ಮಾಡಿದರೂ ಲೆಕ್ಕಿಸದೆ, ನೀವು ಎಷ್ಟಾದರೂ ಅರಚಿಕೊಳ್ಳಿ ನಾವು ಮಾಡಿದ್ದೆ ಸರಿ ಎಂಬ ಧೋರಣೆ ಅನುಸರಿಸಿದ್ದಾರೆ. ಅವೈಜ್ಞಾನಿಕ ರಾತ್ರಿ ಕರ್ಫ್ಯೂ ಅಗತ್ಯವಿರಲಿಲ್ಲ. ಆದರೂ ಜಾರಿಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಲಸಿಕೆ ರಫ್ತು ನಿಲ್ಲಿಸಿ ದೇಶದ ಜನರಿಗೆ ಮೊದಲು ನೀಡಲಿ’ ಎಂದು ಸಲಹೆ ನೀಡಿದರು.