ಬೆಂಗಳೂರು :  ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು ಹೋಗುವುದು ಸರಿಯಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಯಾರೊಬ್ಬರೂ ಪಕ್ಷಗಳ ಬಗ್ಗೆ ಬಹಿರಂಗ ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ಮಾಡಿದ್ದಾರೆ. ಇದು ಮಿತ್ರ ಪಕ್ಷ ಜೆಡಿಎಸ್‌ ನಾಯಕರಿಗೂ ಅನ್ವಯವಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಹಳೆ ಮೈಸೂರು ಭಾಗದ ಕಾಂಗ್ರೆಸ್‌ ನಾಯಕರೊಂದಿಗೆ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಶಾಸಕರ ಟೀಕೆಗಳು ಹಾಗೂ ಇದಕ್ಕೆ ಪ್ರತಿಯಾಗಿ ಜೆಡಿಎಸ್‌ ಸಚಿವರು ನೀಡುತ್ತಿರುವ ಹೇಳಿಕೆಗಳನ್ನು ಖಂಡಿಸಿದರು.

ಕಾಂಗ್ರೆಸ್‌ ಶಾಸಕರು ಅಥವಾ ನಾಯಕರು ಇನ್ನು ಮುಂದೆ ಬಹಿರಂಗವಾಗಿ ಯಾರೊಬ್ಬರ ಬಗ್ಗೆಯೂ ವೈಯಕ್ತಿಕ ಹೇಳಿಕೆ ನೀಡುವಂತಿಲ್ಲ. ಏನೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಇದು ಜೆಡಿಎಸ್‌ ನಾಯಕರಿಗೂ ಅನ್ವಯವಾಗುತ್ತದೆ. ಜೆಡಿಎಸ್‌ ನಾಯಕರನ್ನು ಜೆಡಿಎಸ್‌ ವರಿಷ್ಠರು ನಿಯಂತ್ರಿಸುವ ವಿಶ್ವಾಸವಿದೆ ಎಂದು ಹೇಳಿದರು. ಈ ಮೂಲಕ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದ ಸಿ.ಎಸ್‌. ಪುಟ್ಟರಾಜು ಹಾಗೂ ಬಂಡೆಪ್ಪ ಕಾಶೆಂಪೂರ್‌ ವಿರುದ್ಧವೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಮೈತ್ರಿ ಧರ್ಮ ಕಾಂಗ್ರೆಸ್‌ಗೆ ಸೀಮಿತವಲ್ಲ:

ಇದಕ್ಕೂ ಮೊದಲು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ನಾಯಕರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಮೈತ್ರಿ ಧರ್ಮ ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಜೆಡಿಎಸ್‌ಗೂ ಮೈತ್ರಿ ಧರ್ಮ ಅನ್ವಯಿಸುತ್ತದೆ. ಹೀಗಾಗಿ ಜೆಡಿಎಸ್‌ ನಾಯಕರೂ ಕೂಡ ಕಾಂಗ್ರೆಸ್‌ ವಿರುದ್ಧ ಹೇಳಿಕೆ ನೀಡದಂತೆ ತಡೆಯಿರಿ’ ಎಂದು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದ್ದಕ್ಕೆ ಜೆಡಿಎಸ್‌ ನಾಯಕರು ಮೈತ್ರಿ ಧರ್ಮ ಉಲ್ಲಂಘನೆ ಎಂದು ಮಾತನಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ ನಾಯಕರ ಬಗ್ಗೆ ಜೆಡಿಎಸ್‌ ನಾಯಕರೂ ಸಹ ಬಹಿರಂಗವಾಗಿ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಮೈತ್ರಿ ಧರ್ಮ ಎಂಬುದು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಸೀಮಿತವಲ್ಲ ಅದು ಜೆಡಿಎಸ್‌ಗೂ ಅನ್ವಯವಾಗುತ್ತದೆ. ಹೀಗಾಗಿ ಮೊದಲು ಅವರ ಹೇಳಿಕೆಗಳನ್ನು ತಡೆಯಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಕಳೆದ ಐದು ವರ್ಷದಲ್ಲಿ ಉತ್ತಮ ಆಡಳಿತ ನೀಡಿದ್ದರು ಎಂದು ಕಾಂಗ್ರೆಸ್‌ನ ಕೆಲ ಮುಖಂಡರು ಹೇಳಿದ್ದಾರೆ. ಪಕ್ಷದ ನಾಯಕರ ಬಗ್ಗೆ ಇರುವ ಗೌರವದಿಂದ ಹೇಳಿರುವ ಮಾತುಗಳವು. ಅವರಾರ‍ಯರೂ ಕುಮಾರಸ್ವಾಮಿ ವಿರುದ್ದ ಯಾವುದೇ ಆರೋಪ ಮಾಡಿಲ್ಲ. ಹೀಗಿದ್ದರೂ ಜೆಡಿಎಸ್‌ ನಾಯಕರು ಪದೇ ಪದೇ ಕಾಂಗ್ರೆಸ್‌ ನಾಯಕರನ್ನು ಉದ್ದೇಶಿಸಿ ನೇರ ವಾಗ್ದಾಳಿ ನಡೆಸುವುದು ತರವಲ್ಲ. ಮೈತ್ರಿ ಧರ್ಮವನ್ನು ಅವರೂ ಪಾಲಿಸಬೇಕು ಎಂದು ಕಿಡಿ ಕಾರಿದರು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಈ ಬಗ್ಗೆ ಜೆಡಿಎಸ್‌ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸುತ್ತೇವೆ. ಮೈತ್ರಿ ಸರ್ಕಾರ ಎಂಬುದು ಹೈಕಮಾಂಡ್‌ ತೀರ್ಮಾನ. ಹೀಗಾಗಿ ಇದಕ್ಕೆ ಬೆಲೆ ನೀಡಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಬಗ್ಗೆಯೂ ಗೌರವವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು ಎಂದು ತಿಳಿದುಬಂದಿದೆ.

ಮುಕ್ತವಾದ ಚರ್ಚೆ ನಡೆದಿದೆ- ದಿನೇಶ್‌:

ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಜಿಲ್ಲಾ ರಾಜಕಾರಣ, ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಸ್ಥಿತಿಗತಿ ಬಗ್ಗೆ ಮುಕ್ತವಾದ ಚರ್ಚೆ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸೀಟು ಗೆಲ್ಲಬೇಕು. ಇದಕ್ಕೆ ಸಂಘಟನೆ ಹಾಗೂ ಕಾರ್ಯಕರ್ತರ ಪಾತ್ರ ಮುಖ್ಯ ಎಂಬುದನ್ನು ಚರ್ಚೆ ಮಾಡಿದ್ದೇವೆ ಎಂದರು.

ಪ್ರಸ್ತುತ ಹತ್ತು ಕಡೆ ಕಾಂಗ್ರೆಸ್‌ ಸಂಸದರು ಹಾಗೂ ಎರಡು ಕಡೆ ಜೆಡಿಎಸ್‌ ಸಂಸದರು ಇದ್ದಾರೆ. ಉಳಿದ ಹದಿನಾರು ಕಡೆ ಯಾವ ಪಕ್ಷದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಉಭಯ ಪಕ್ಷದ ವರಿಷ್ಠರು ಕುಳಿತು ಚರ್ಚೆ ನಡೆಸುತ್ತೇವೆ. ಗೆಲ್ಲುವ ಅವಕಾಶ ಯಾರಿಗೆ ಹೆಚ್ಚಿದೆಯೋ ಅವರಿಗೆ ಅವಕಾಶ ನೀಡಲಾಗುವುದು. ಜೆಡಿಎಸ್‌ಗೆ ಅವಕಾಶ ನೀಡಿದರೆ ಕಾಂಗ್ರೆಸ್‌ ಸಂಪೂರ್ಣ ಬೆಂಬಲ ಸೂಚಿಸಬೇಕು. ಕಾಂಗ್ರೆಸ್‌ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಜೆಡಿಎಸ್‌ ಸಂಪೂರ್ಣ ಬೆಂಬಲ ಸೂಚಿಸಬೇಕು. ಹಾಗಾದರೆ ಮಾತ್ರ ಮೈತ್ರಿ ಯಶಸ್ವಿಯಾಗಲಿದ್ದು, ಈ ಬಗ್ಗೆ ನಾಯಕರಿಗೆ ತಿಳಿ ಹೇಳಿದ್ದೇವೆ ಎಂದು ತಿಳಿಸಿದರು.

ಅಭ್ಯರ್ಥಿಗಳು, ಕ್ಷೇತ್ರ ಹಂಚಿಕೆ ಚರ್ಚೆಯಾಗಿಲ್ಲ:

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಕೆಲವು ಅಭ್ಯರ್ಥಿಗಳಿಗೆ ಅವಕಾಶ ನೀಡುವ ಬಗ್ಗೆ ಪ್ರಸ್ತಾವನೆ ಬಂದಿವೆ. ಆದರೆ, ಫೆ.6 ರಂದು ನಡೆಯಲಿರುವ ಕಾಂಗ್ರೆಸ್‌ ಸಾಮಾನ್ಯ ಸದಸ್ಯರ ಸಭೆ ಹಾಗೂ ಜಂಟಿ ಶಾಸಕಾಂಗ ಸಭೆಯ ಬಳಿಕ ಉಭಯ ಪಕ್ಷಗಳ ವರಿಷ್ಠರು ಕುಳಿತು ಈ ಬಗ್ಗೆ ಚರ್ಚಿಸುತ್ತಾರೆ. ಈ ವೇಳೆ ಯಾರಿಗೆ ಎಷ್ಟುಸೀಟು ಎಂಬುದಕ್ಕಿಂತಲೂ ಹೆಚ್ಚಾಗಿ ಮೈತ್ರಿ ಪಕ್ಷಗಳು ಹೆಚ್ಚು ಸ್ಥಾನ ಗೆಲ್ಲುವುದನ್ನೇ ಆದ್ಯತೆಯಾಗಿ ಇಟ್ಟುಕೊಳ್ಳುತ್ತೇವೆ ಎಂದು ಹೇಳಿದರು.