ಕೊಪ್ಪಳದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 'ಗ್ಯಾರಂಟಿ ಉತ್ಸವ'ದ ವೇಳೆ, ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಬೃಹತ್ ಬೋರ್ಡ್ ಏಕಾಏಕಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ನೂರಾರು ಜನರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಪ್ಪಳ (ಫೆ. 17): ಕೊಪ್ಪಳ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 'ಗ್ಯಾರಂಟಿ ಉತ್ಸವ'ದ ಸಂಭ್ರಮದ ನಡುವೆಯೇ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕಾರ್ಯಕ್ರಮದ ಬೃಹತ್ ಸ್ವಾಗತ ಕೋರುವ ಬೋರ್ಡ್ ಏಕಾಏಕಿ ನೆಲಕ್ಕುರುಳಿದ್ದು, ಕೆಳಗೆ ನಿಂತಿದ್ದ ಹಲವು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ

ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ಮಧುಶ್ರೀ ಗಾರ್ಡನ್ ಮುಂಭಾಗದಲ್ಲಿ ಈ ಘಟನೆ ಸಂಭವಿಸಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 'ಗ್ಯಾರಂಟಿ ಕಾರ್ಯಾಗಾರ ಹಾಗೂ ಗ್ಯಾರಂಟಿ ಉತ್ಸವ'ಕ್ಕೆ ಸ್ವಾಗತ ಕೋರಲು ಬೃಹತ್ ಬೋರ್ಡ್ ಅಳವಡಿಸಲಾಗಿತ್ತು. ಕಾರ್ಯಕ್ರಮ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಈ ಬೋರ್ಡ್ ಬಿದ್ದಿದ್ದು, ಅಲ್ಲಿ ನೆರೆದಿದ್ದ ನೂರಾರು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಳಿಗೆ ನೆಲಕ್ಕುರುಳಿದ ಸಿಎಂ-ಡಿಸಿಎಂ ಫೋಟೋ ಇದ್ದ ಬೋರ್ಡ್

ಬೋರ್ಡ್ ಬಿದ್ದ ಸ್ಥಳದಲ್ಲಿ ಕೆಲವೇ ಕ್ಷಣಗಳ ಹಿಂದೆ ನೂರಾರು ಜನರು ನಿಂತಿದ್ದರು. ಏಕಾಏಕಿ ಬೋರ್ಡ್ ಕುಸಿದು ನೆಲಕ್ಕೆ ಬಿದ್ದಿದೆ. ಈ ಬೋರ್ಡ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಭಾವಚಿತ್ರಗಳಿದ್ದವು. ಅದೃಷ್ಟವಶಾತ್ ಬೋರ್ಡ್ ಬೀಳುವ ವೇಳೆಗೆ ಕೆಳಗೆ ನಿಂತಿದ್ದ ಜನ ಪಕ್ಕಕ್ಕೆ ಸರಿದಿದ್ದಾರೆ, ಇಲ್ಲದಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.

ಸರ್ಕಾರಿ ಕಾರ್ಯಕ್ರಮದ ಹಿನ್ನೆಲೆ ಇಷ್ಟು ದೊಡ್ಡ ಮಟ್ಟದ ಬೋರ್ಡ್‌ಗಳನ್ನು ಅಳವಡಿಸುವಾಗ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಧುಶ್ರೀ ಗಾರ್ಡನ್ ಆವರಣದಲ್ಲಿ ನೂರಾರು ಫಲಾನುಭವಿಗಳು ನೆರೆದಿದ್ದ ಸಮಯದಲ್ಲಿಯೇ ಈ ಅವಘಡ ಸಂಭವಿಸಿರುವುದು ಆತಂಕ ಮೂಡಿಸಿದೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸದ ಕಾರಣ ಅಧಿಕಾರಿಗಳೂ ನಿಟ್ಟುಸಿರು ಬಿಟ್ಟಿದ್ದಾರೆ.

YouTube video player