ಕೊಪ್ಪಳ ಹಿಂದೂ ಯುವಕ ಗವಿಸಿದ್ದಪ್ಪನ ಕೊಲೆ ಪ್ರಕರಣದ ಆರೋಪಿ ಸಾದಿಕ್ ಪೋಷಕರು ಘಟನೆ ಕುರಿತು ಮಾತನಾಡಿದ್ದಾರೆ. ಗವಿಸಿದ್ದಪ್ಪ ನನ್ನ ಮಗನಿಗಿಂತ ಹೆಚ್ಚು, ನನ್ನ ಮಗ ಸಾದಿಕ್‌ಗೆ ಶಿಕ್ಷೆಯಾಗಲಿ. ಆತ ನಮ್ಮ ಪಾಲಿಗೆ ಸತ್ತಿದ್ದಾನೆ ಎಂದು ಸಾದಿಕ್ ಪೋಷಕರು ಪ್ರತಿಕ್ರಿಯಿಸಿದ್ದಾರೆ.
ಕೊಪ್ಪಳ (ಆ.04) ಹಿಂದೂ ಯುವಕ ಗವಿಸಿದ್ಧಪ್ಪ ಕೊನೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಗವಿಸಿದ್ದಪ್ಪ ಬರ್ಬರವಾಗಿ ಹತ್ಯೆಯಾಗಿದ್ದ. ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸಾದಿಕ್ ಅರೆಸ್ಟ್ ಆಗಿದ್ದಾನೆ. ಇದೀಗ ಆರೋಪಿ ಸಾದಿಕ್ ಪೋಷಕರು ಏಶಿಯಾನೆಟ್ ಸುವರ್ಣ ನ್ಯೂಸ್ ಪ್ರತಿಕ್ರಿಯಿಸಿದ್ದಾರೆ. ಸಾದಿಕ್ ನಮ್ಮ ಪಾಲಿಗೆ ಸತ್ತಿದ್ದಾನೆ. ಆತ ನಮ್ಮ ಮಾತು ಕೇಳುತ್ತಿರಲಿಲ್ಲ. ಸಾದಿಕ್‌ಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದು ಆರೋಪಿ ತಂದೆ ಮೌಲಾಹುಸೇನ್,ತಾಯಿ ರಮೀಜಾಬೇಗಂ ಒತ್ತಾಯಿಸಿದ್ದಾರೆ.
ಗವಿಸಿದ್ದಪ್ಪ ನನ್ನ ಮಗನಿಗಿಂತ ಹೆಚ್ಚು
ಗವಿಸಿದ್ದಪ್ಪ ನನ್ನ ಮಗನಿಂದ ಹೆಚ್ಚು. ಗವಿಸಿದ್ದಪ್ಪ ಉತ್ತಮ ಸ್ವಭಾವದ ವ್ಯಕ್ತಿ. ಆತ ಯಾರ ತಂಟೆಗೂ ಹೋದವನಲ್ಲ. ಗವಿಸಿದ್ದಪ್ಪ ಹತ್ಯೆಯಾಗಿದೆ ಎಂದು ತಿಳಿದಾಗ ನಮಗೆ ತೀವ್ರ ದುಖವಾಗಿದೆ. ಆದರೆ ನನ್ನ ಮಗ ಸಾಧಿಕ್ ನಮ್ಮ ಮಾತು ಕೇಳುತ್ತಿರಲಿಲ್ಲ. ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ನನ್ನ ಹತ್ತಿರ ಕೆಲಸ ಮಾಡೋದು ಬಿಟ್ಟು ಒಂದೂವರೆ ವರ್ಷ ಕಳೆದಿದೆ. ಏನಾದರೂ ಸಾದಿಕ್‌ಗೆ ಬುದ್ದಿವಾದ ಹೇಳಿದರೆ ನಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುತ್ತಿದ್ದ. ಯಾವ ವಿಚಾರಕ್ಕೂ ಆತನ ಮಾತನಾಡಿಸಲು ಆಗುತ್ತಿರಲಿಲ್ಲ ಎಂದು ಪೋಷಕರು ಹೇಳಿದ್ದಾರೆ.
ಒಂದು ಜೀವ ಸಾಮಾನ್ಯದ ಮಾತಲ್ಲ
ಒಂದು ಜೀವ ಹೋಗುವುದು ಸಾಮಾನ್ಯ ಮಾತಲ್ಲ. ಆದನ್ನ ಮಗ ತೆಗೆದಿದ್ದಾನೆ ಎಂದರೆ ಸಹಿಸುವುದು ಹೇಗೆ ಎಂದು ಸಾದಿಕ್ ಪೋಷಕರು ಹೇಳಿದ್ದಾರೆ. ನಮ್ಮ ಮಗ ಸಾದಿಕ್ ಯಾರನ್ನು ಪ್ರೀತಿಸುತ್ತಿದ್ದ ಅನ್ನೋದರ ಮಾಹಿತಿ ನಮಗಿಲ್ಲ. ಆತ ಈ ಕುರಿತು ನಮ್ಮ ಬಳಿ ಹೇಳಿಕೊಂಡಿಲ್ಲ. ಆದರೆ ನಮಗೆ ಹೆಜ್ಜೆ ಹೆಜ್ಜೆಗೂ ಕಷ್ಟ ಕೊಟ್ಟಿದ್ದಾನೆ. ಪ್ರತಿ ದಿನ ನೋವು ಅನುಭವಿಸಿದ್ದೇವೆ. ಆತನ ನೋಡಿ ನಮಗೆ ನೋವಾಗುತ್ತಿತ್ತು. ನನ್ನ ಮಗ ರೀತಿ ಮಾಡಬಾರದು ಎಂದು ಆರೋಪಿ ಸಾದಿಕ್ ಪೋಷಕರು ಹೇಳಿದ್ದಾರೆ.
ಇದರ ಹಿಂದಿರುವ ಎಲ್ಲರಿಗೂ ಶಿಕ್ಷೆಯಾಗಬೇಕು
ನನ್ನ ಮಗನಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ನಮ್ಮ ಮಾತು ಕೇಳುತ್ತಲೇ ಇರಲಿಲ್ಲ. ಇದೀಗ ಈ ರೀತಿ ಕೃತ್ಯ ಮಾಡಿದ್ದಾನೆ. ಈ ಹತ್ಯೆ ಹಿಂದೆ 20 ಮಂದಿ ಇದ್ದಾರೆ ಎಂದು ಹೇಳುತ್ತಿದ್ದಾರೆ. ಅವರೆಲ್ಲರಿಗೂ ಶಿಕ್ಷೆಯಾಗಲಿ ಎಂದು ಆರೋಪಿ ಸಾದಿಕ್ ಪೋಷಕರು ಮನವಿ ಮಾಡಿದ್ದಾರೆ.
ಹಿಂದೂ ಜಾಗರಣ ವೇದಿಕೆಯಿಂದ ತುರ್ತು ಸಭೆ
ಕೊಪ್ಪಳದ ಹಿಂದೂ ಯುವಕ ಗವಿಸಿದ್ದಪ್ಪ ಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣ ಸಂಬಂಧ ಹಿಂದೂ ಜಾಗರಣ ವೇದಿಕೆ ತುರ್ತು ಸಭೆ ನಡೆಸಿದೆ. ಕೊಪ್ಪಳ ನಗರದ ಈಶ್ವರ ಪಾರ್ಕ ದೇವಸ್ಥಾನದಲ್ಲಿ ಸಭೆ ನಡೆಸಲಾಗಿದೆ. ಮುಸ್ಲಿಮ್ ಯುವತಿ ಪ್ರೀತಿ ವಿಚಾರಕ್ಕೆ ಕೊಲೆಯಾಗಿದೆ. ಈ ಘಟನೆ ಕುರಿತು ಎಲ್ಲಾ ಹಿಂದೂಗಳು ಒಂದಾಗಿ ಹೋರಾಟ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.ಪ್ರಮುಖವಾಗಿ ಘಟನೆ ಹಿಂದಿರುವ ಶಕ್ತಿಗಳನ್ನು ಪೊಲೀಸರು ಬಂಧಿಸಿಲ್ಲ. ಕೇವಲ ಆರೋಪಿ ಸಾದಿಕ್ ಮಾತ್ರ ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದ ಹಿಂದೆ ಹಲವರಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಹೇಳಿದೆ. ಮತ್ತೊಂದು ಸುತ್ತಿನ ಚರ್ಚೆ ಬಳಿಕ ಮುಂದಿನ ಹೋರಾಟದ ಬಗ್ಗೆ ಅಂತಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಹೇಳಿದೆ.
ಕೊಪ್ಪಳದಲ್ಲಿ ಪ್ರತಿಭಟನೆ
ಗವಿಸಿದ್ದಪ್ಪನ ಕೊಲೆ ಖಂಡಿಸಿ ಕೊಪ್ಪಳದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆದಿದೆ. ಗವಿಸಿದ್ದಪ್ಪನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಏಕಾಏಕಿ ಅಶೋಕ ವೃತ್ತಕ್ಕೆ ಆಗಮಿಸಿ ಗವಿಸಿದ್ದಪ್ಪನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಕೊಲೆಗಾರರ ವಿರುದ್ಧ ಕಠಿಣ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ಮನವೊಲಿಸಿದ್ದಾರೆ.
