ತುಂಗಭದ್ರಾ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಿಂದಾಗಿ ಗಂಗಾವತಿ ತಾಲೂಕಿನಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ನಾಡದೋಣಿ ಚಾಲಕರು ಪ್ರವಾಸಿಗರನ್ನು ಪ್ರವಾಹದ ನಡುವೆಯೂ ತೆಪ್ಪದಲ್ಲಿ ಕರೆದೊಯ್ಯುತ್ತಿದ್ದು, ಜಿಲ್ಲಾಡಳಿತದ ಎಚ್ಚರಿಕೆಯನ್ನು ಉಲ್ಲಂಘಿಸುತ್ತಿದ್ದಾರೆ. 

ಕೊಪ್ಪಳ (ಜುಲೈ.29) ತುಂಗಭದ್ರಾ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಕಡೆಬಾಗಿಲದ ಬೇಲಿ ಬಳಿಯ ತುಂಗಭದ್ರಾ ನದಿಯಲ್ಲಿ ಪ್ರವಾಹದ ಸನ್ನಿವೇಶ ನಿರ್ಮಾಣವಾಗಿದೆ. ಈ ಸ್ಥಿತಿಯಲ್ಲೂ ಕೆಲವು ನಾಡದೋಣಿ ಚಾಲಕರು ಹಣದ ಆಸೆಗೆ ಬಿದ್ದು, ಪ್ರವಾಸಿಗರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆತಂಕಕಾರಿ ಘಟನೆ ನಡೆದಿದೆ.

ಜಿಲ್ಲಾಡಳಿತವು ನದಿಪಾತ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಿದ್ದರೂ, ಈ ಆದೇಶವನ್ನು ಕೆಲವರು ಗಾಳಿಗೆ ತೂರಿದ್ದಾರೆ. ಈ ಮಧ್ಯೆ, ತುಂಗಭದ್ರಾ ಡ್ಯಾಮ್‌ನಿಂದ 1 ಲಕ್ಷ ಕ್ಯೂಸೆಕ್‌ಗಿಂತಲೂ ಹೆಚ್ಚು ನೀರು ಬಿಡುಗಡೆಯಾಗಿರುವ ಕಾರಣ ಕಂಪ್ಲಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಕಂಪ್ಲಿ-ಗಂಗಾವತಿ ನಡುವಿನ ನೇರ ಸಂಪರ್ಕ ಸ್ಥಗಿತಗೊಂಡಿದೆ. ಸೇತುವೆಯ ಮೇಲ್ಭಾಗದವರೆಗೂ ನೀರು ತಲುಪಿರುವುದರಿಂದ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

40 ವರ್ಷಗಳ ಹಿಂದೆ ನಿರ್ಮಾಣವಾದ ಈ ಸೇತುವೆ ಪ್ರತಿ ಬಾರಿಯೂ ಜಲಾಶಯದಿಂದ ನೀರು ಬಿಡುಗಡೆಯಾದಾಗ ಮುಳುಗಡೆಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ದುರ್ಬಲವಾಗುತ್ತಿದೆ. ಈ ಸೇತುವೆಯನ್ನು ಮರುನಿರ್ಮಾಣ ಮಾಡಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.

ಜಿಲ್ಲಾಡಳಿತದ ಎಚ್ಚರಿಕೆಯನ್ನು ಗಾಳಿಗೆ ತೂರುತ್ತಿರುವ ನಾಡದೋಣಿ ಚಾಲಕರು, ಪ್ರವಾಹದ ನಡುವೆಯೂ ತೆಪ್ಪದ ಮೇಲೆ ಪ್ರವಾಸಿಗರನ್ನು ಕರೆದೊಯ್ಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರವಾಸಿಗರ ಜೀವಕ್ಕೆ ಯಾರು ಹೊಣೆ?