ತುಂಗಾ ನದಿ ಮಡಿಲು ಸೇರುತ್ತಿದೆ ರಾಶಿ ರಾಶಿ ಶೃಂಗೇರಿ ತ್ಯಾಜ್ಯ!
ಮಳೆ ಬಂದರೆ ತ್ಯಾಜ್ಯವೆಲ್ಲ ಮಲೆನಾಡ ಜೀವನದಿ ತುಂಗೆ ಒಡಲಿಗೆ ಸೇರುತ್ತದೆ. ದಿನೇ ದಿನೇ ತ್ಯಾಜ್ಯ ಸಂಗ್ರಹ ಹೆಚ್ಚುತ್ತಲೇ ಇದೆ. ಎಚ್ಚೆತ್ತುಕೊಳ್ಳದ ಅಧಿಕಾರಿಗಳು.
ನೆಮ್ಮಾರ್ ಅಬೂಬಕರ್
ಶೃಂಗೇರಿ (ಮೇ.8): ಇಲ್ಲಿ ಎಲ್ಲೆಲ್ಲೂ ತ್ಯಾಜ್ಯಗಳ ರಾಶಿ, ಪ್ಲಾಸ್ಟಿಕ್, ಕಸಕಡ್ಡಿಗಳು,ಇಡೀ ಪ್ರದೇಶವೇ ತ್ಯಾಜ್ಯಮಯವಾಗಿದೆ. ಸ್ವಚ್ಚತೆ ಎಂಬುದೇ ಕಂಡು ಬರುತ್ತಿಲ್ಲ. ಮಳೆ ಬಂದರೆ ತ್ಯಾಜ್ಯವೆಲ್ಲ ಮಲೆನಾಡ ಜೀವನದಿ ತುಂಗೆ ಒಡಲಿಗೆ ಸೇರುತ್ತದೆ. ದಿನೇ ದಿನೇ ತ್ಯಾಜ್ಯ ಸಂಗ್ರಹ ಹೆಚ್ಚುತ್ತಲೇ ಇದೆ. ಮೈದಾನ ಪ್ರದೇಶಲವಲ್ಲದೇ ತುಂಗೆ ದಡದುದ್ದಕ್ಕೂ ರಾಶಿ ರಾಶಿ ತ್ಯಾಜ್ಯ ಸಂಗ್ರಹ.
ಇದು ಪಟ್ಟಣದ ಗಾಂಧಿ ಮೈದಾನ ಪ್ರದೇಶದ ದುಸ್ಥಿತಿ. ಶೃಂಗೇರಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ಇಲ್ಲಿ ಪ್ರತೀ ವರ್ಷ 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಗಾಂಧಿ ಮೈದಾನ ವಾಹನ ನಿಲುಗಡೆ ಪ್ರದೇಶವೂ ಆಗಿದ್ದು, ಇಲ್ಲಿ ಹಗಲಿಡೀ ಜನಸಂಚಾರವಿದೆ. ಒಂದೆಡೆ ಜನ ಸಂಚಾರ, ಇನ್ನೊಂದೆಡೆ ವಾಹನಗಳು, ವಿವಿಧೆಡೆಗಳಿಂದ ಬರುವ ವಾಹನಗಳು ಇಲ್ಲಿಯೇ ನಿಲುಗಡೆಯಾಗುತ್ತದೆ.
ಸುಡುಗಾಡು ಸಿದ್ದರಿಗೆ ಹೊಸ ಬಡಾವಣೆ ಸಿಗೋದು ಯಾವಾಗ? ಜೋಪಡಿಯಲ್ಲಿದೆ 50ಕ್ಕೂ ಹೆಚ್ಚಿನ ಕುಟುಂಬ!
ಆದರೆ ಈ ಪ್ರದೇಶ ಸಂಪೂರ್ಣ ತ್ಯಾಜ್ಯಮಯವಾಗಿದ್ದು ಸ್ವಚ್ಛ ಅಭಿಯಾನ್‌ಗೆ ಅಪವಾದವಾಗಿದೆ. ಮೈದಾನಕ್ಕೆ ಹೋಗುವ ದಾರಿ ಆರಂಭದಿಂದ ಅಲ್ಲಲ್ಲಿ ಬಿದ್ದ ಕಸಕಡ್ಡಿ ತ್ಯಾಜ್ಯ ತುಂಗಾ ನದಿ ದಡದುದ್ದಕ್ಕೂ ಕಾಣಸಿಗುತ್ತವೆ. ಪ್ಲಾಸ್ಟಿಕ್ ಬಾಟಲ್‌ಗಳು, ಪರಿಕರಗಳು, ಸೇರಿದಂತೆ ವಿವಿಧ ರೀತಿ ತ್ಯಾಜ್ಯಗಳು, ಇಡೀ ಮೈದಾನ ತುಂಬೆಲ್ಲ ಬಿದ್ದಿವೆ. ಪ್ರವಾಸಿಗರ ವಾಹನಗಳು ನಿಲುಗಡೆ ಸೇರಿದಂತೆ ಪ್ರವಾಸಿಗರ ಓಡಾಟ ಎಲ್ಲವೂ ಇಲ್ಲಿಯೆ.
ಪ್ರವಾಸಿಗರು ಸೇರಿದಂತೆ ಸುತ್ತಮುತ್ತಲ ತ್ಯಾಜ್ಯವೆಲ್ಲ ಇಲ್ಲಿಯೇ ರಾಶಿರಾಶಿಯಾಗಿ ಬಿದ್ದಿವೆ. ನದಿ ದಡದಲ್ಲಿ ತ್ಯಾಜ್ಯದ ರಾಶಿಯೇ ಇದೆ. ಮಳೆ ಬಂದರೆ ಇಡೀ ಮೈದಾನ ತ್ಯಾಜ್ಯವೆಲ್ಲ ತುಂಗಾ ನದಿಗೆ ಸೇರುತ್ತದೆ. ಇನ್ನು ಹೊಲಸು ವಾತಾವರಣ, ಕೇಳುವವರೆ ಇಲ್ಲ. ಸ್ವಚ್ಛತೆ ಬಗ್ಗೆ ಪ್ರಶ್ನಿಸುವವರೇ ಇಲ್ಲ. ರಾತ್ರಿ ಸಂಚರಿಸುವ ಬಸ್‌ಗಳು ಹಗಲಿಂದ ಸಂಜೆಯವರೆಗೂ ಇಲ್ಲಿಯೇ ನಿಂತಿರುತ್ತದೆ. ಸಮೀಪದಲ್ಲೇ ಉದ್ಯಾನವನವಿದ್ದು ಅದೂ ಕೂಡ ತ್ಯಾಜ್ಯಮಯವಾಗಿದೆ.
ಹಾಸನ: ಅನುಮಾನಸ್ಪದ ಸಾವು, ಅಂತ್ಯಸಂಸ್ಕಾರ ಮಾಡಿದ ಶವ 6 ತಿಂಗಳ ಬಳಿಕ ಹೊರತೆಗೆದು ಪರೀಕ್ಷೆ!
ಇನ್ನು ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯೂ ಇಲ್ಲೆ ಹಾದುಹೋಗಿರುವುದರಿಂದ ರಸ್ತೆ ಪಕ್ಕದಲ್ಲಿ ನದಿ ದಡದುದ್ದಕ್ಕೂ ತ್ಯಾಜ್ಯ, ಕೊಳಕುಗಳು, ಪ್ಲಾಸ್ಟಿಕ್ ಎಲ್ಲವೂ ರಾಶಿ ರಾಶಿಯಾಗಿ ಬಿದ್ದಿವೆ. ಇವು ಕೂಡ ಮಳೆ ಬಂದರೆ ನದಿ ಒಡಲಿಗೆ ಸೇರಲಿದೆ. ಶೃಂಗೇರಿ ಪಟ್ಟಣದ ಕಸವೆಲ್ಲ ಸಂಗ್ರಹವಾಗಿ ಕಸವಿಲೇವಾರಿ ಘಟಕಕ್ಕೆ ಸೇರಿದರೆ ಗಾಂಧಿ ಮೈದಾನದ ತ್ಯಾಜ್ಯವೆಲ್ಲ ಮಲೆನಾಡ ಜೀವನದಿ ತುಂಗೆ ಮಡಿಲಿಗೆ ಸೇರುತ್ತಿದೆ. ಸ್ಥಳೀಯ ಆಡಳಿತವಾಗಲೀ, ಯಾವುದೇ ಇಲಾಖೆಯಾಗಲಿ ಈ ಬಗ್ಗೆ ಇನ್ನೂ ತಲೆಕೆಡಿಸಿಕೊಳ್ಳುತ್ತಿಲ್ಲ.
ತುಂಗಾನದಿ ದಡದಲ್ಲಿ ರಾಶಿಯಾಗಿ ಬಿದ್ದಿರುವ ತ್ಯಾಜ್ಯ ಕಂಡರೆ ಕಸವಿಲೇವಾರಿ ಘಟಕವೇ ನೋಡಿದಂತಾಗುತ್ತದೆ. ಸ್ವಚ್ಛತೆಯೂ ಇಲ್ಲ, ಕ್ರಮವೂ ಇಲ್ಲ ಆದರೆ ದಿನಕಳೆದಂತೆ ತ್ಯಾಜ್ಯ ರಾಶಿ ಹೆಚ್ಚುತ್ತಲೇ ಹೋಗುತ್ತಿದೆ. ಇಲ್ಲಿಗೆ ಬರುವ ಪ್ರಸಾಸಿಗರ ಸಂಖ್ಯೆಯೂ ಹೆಚ್ಚಿರುವುದರಿಂದ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡದಿರುವದು ಅಚ್ಚರಿಯೇ ಸರಿ.
ಮಲೇರಿಯಾ, ಡೆಂಗ್ಯೂ ಸಾಂಕ್ರಮಿಕ ರೋಗಗಳು ಹರಡಲು ಕಾರಣವಾಗುವಂತಿದೆ. ಈ ಪ್ರದೇಶ ಸ್ವಚ್ ಭಾರತ್ ಅಭಿಯಾನ್ ಗೆ ತದ್ವಿರುದ್ಧವಾಗಿದೆ. ಇಡೀ ಶೃಂಗೇರಿ ಪಟ್ಟಣಕ್ಕೆ ಅಲ್ಲದೇ ಎಲ್ಲೆಡೆ ತುಂಗಾ ನದಿಯೇ ಕುಡಿಯುವ ನೀರಿನ ಮೂಲಾಧಾರ. ಗಂಗಾ ಸ್ನಾನಂ ತುಂಗಾಪಾನಂ ಎಂಬ ನಾಣ್ನುಡಿಯಂತೆ ಪವಿತ್ರ ತುಂಗಾ ನದಿ ಈ ತ್ಯಾಜ್ಯ ರಾಶಿಯಿಂದ ಮಲೀನಗೊಳ್ಳುತ್ತಿರುವ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಅಚ್ಚರಿಯೇ ಸರಿ.
ಪ್ರವಾಸಿ ಕ್ಷೇತ್ರವಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಆಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಈ ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡಿ ತ್ಯಾಜ್ಯ ತೆರವುಗೊಳಿಸಿ, ಇಲ್ಲಿ ತ್ಯಾಜ್ಯ ಹಾಕದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. ತುಂಗೆ ಮಲೀನಗೊಳ್ಳದಂತೆ ಜನರಲ್ಲಿ ಜನಜಾಗೃತಿ ಮೂಡಿಸಬೇಕಿದೆ.
ಸ್ವಚ್ಛತೆಗೆ ಆದ್ಯತೆ ಅಗತ್ಯ: ತಾಲೂಕಿಗೆ ಕುಡಿವ ನೀರಿಗೆ ಆಧಾರ ತುಂಗಾನದಿ. ಗಾಂಧಿ ಮೈದಾನ ಪ್ರದೇಶದಲ್ಲಿ ಈ ರೀತಿ ತ್ಯಾಜ್ಯಗಳು ಸಂಗ್ರವಾಗುತ್ತಿರುವುದರಿಂದ ತುಂಗಾ ನದಿ ಮಲೀನಗೊಳ್ಳುತ್ತಿರುವ ಜೊತೆಗೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಸಾಂಕ್ರಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಸ್ಥಳೀಯ ಆಡಳಿತ, ಸಂಬಂಧಪಟ್ಟ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ ಎಂದು ಕೆ.ಎಂ.ರಾಮಣ್ಣ ಕರುವಾನೆ ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಸಿಗರಲ್ಲಿ ಅರಿವು ಮೂಡಿಸಲಿ: ಈಗಾಗಲೇ ಸಂಗ್ರಹವಾಗುತ್ತಿರುವ ತ್ಯಾಜ್ಯವನ್ನು ವಿಲೆವಾರಿಗೆ ಕ್ರಮಕೈಗೊಂಡು ಪ್ರವಾಸಿಗರಲ್ಲಿ ಅರಿವು ಮೂಡಿಸಬೇಕು. ಕಸ ತ್ಯಾಜ್ಯಗಳು ಹಾಕದಂತೆ ನಾಮಪಲಕ ಅಳವಡಿಸಬೇಕು. ಕಸದ ತೊಟ್ಟಿಗಳನ್ನು ಅಳವಡಿಸಬೇಕು. ಈ ಪ್ರದೇಶದ ಪರಿಸರ ನೈರ್ಮಲ್ಯ ಕಾಪಾಡಬೇಕು ಎಂದು ಪರಿಸರ ವಿಜ್ಞಾನ ಉಪನ್ಯಾಸಕ ಮನು ಜಿ ಹೇಳಿದರು.