ಕೋಲಾರದ ವಿದ್ಯಾರ್ಥಿಗಳ ಟೂರ್ ಬಸ್ ಉತ್ತರ ಕನ್ನಡದಲ್ಲಿ ಪಲ್ಟಿ; 34 ವಿದ್ಯಾರ್ಥಿಗಳಿಗೆ ಗಾಯ!
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಕೋಲಾರದಿಂದ ಪ್ರವಾಸಕ್ಕೆ ಬಂದಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿಯಾಗಿ 34 ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹೊನ್ನಾವರ ಮತ್ತು ಮಣಿಪಾಲ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಉತ್ತರ ಕನ್ನಡ/ ಕೋಲಾರ (ಡಿ.20): ಕೋಲಾರದಿಂದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಹೋಗಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಪುನಃ ಕೋಲಾರದಿಂದ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಹೋಗಿದ್ದ ಮತ್ತೊಂದು ಬಸ್ ಪಲ್ಟಿಯಾಗಿದೆ. ಈ ಅವಘಡದಲ್ಲಿ 40 ವಿದ್ಯಾರ್ಥಿಗಳ ಪೈಕಿ 34 ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೋಲಾರದಿಂದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಬಸ್ ಪಲ್ಟಿಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆರೋಳ್ಳಿ ತಿರುವಿನಲ್ಲಿ ಶುಕ್ರವಾರ ಸಂಜೆ ವೇಳೆ ನಡೆದಿದೆ. ಈ ಘಟನೆಯಲ್ಲಿ 30ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಹಳ್ಳಿಯ ಕರ್ನಾಟಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು. ಪ್ರವಾಸ ವಾಹನವು ಜಿಲ್ಲಾ ಪ್ರವಾಸ ಮುಗಿಸಿ ಗೋಕರ್ಣದಿಂದ ಮತ್ತೆ ಕೋಲಾರಕ್ಕೆ ತೆರಳುತ್ತಿತ್ತು.
ಇದನ್ನೂ ಓದಿ: ಮುರುಡೇಶ್ವರ ದುರಂತ: ಮೃತ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಘೋಷಣೆ!
ಈ ವೇಳೆ ಎರಡು ವಾಹನಗಳ ಪೈಕಿ ಒಂದು ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವಾಹನದಲ್ಲಿದ್ದ 40 ಶಾಲಾ ಮಕ್ಕಳ ಪೈಕಿ 34 ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಹೊನ್ನಾವರದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಗಂಭೀರವಾಗಿ ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.