ನಾವು 28 ವರ್ಷಗಳಿಂದ 3000 ಜನರು ಕೋಗಿಲು ಬಡಾವಣೆಯಲ್ಲಿ ವಾಸವಿದ್ದೇವೆ. ಸರ್ಕಾರ ನಮ್ಮನ್ನ ತೆರವು ಮಾಡಿದ್ದು ಸ್ವಂತ ಮನೆಯನ್ನು ಕೊಡಲೇಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಕ್ರಮ ನಿವಾಸಿಗಳ ಅರ್ಜಿ ಮತ್ತು ವಾದ ಮಂಡನೆಗೆ ಸರ್ಕಾರವೇ ಶಾಕ್ ಆಗಿದೆ.

ಬೆಂಗಳೂರು (ಜ.07): ನಗರದ ಕೋಗಿಲು ಬಡಾವಣೆಯಲ್ಲಿ ಅಕ್ರಮ ವಸತಿಗಳನ್ನು ತೆರವುಗೊಳಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹಾಗೂ ಸೂಕ್ತ ಪುನರ್ವಸತಿ ಮತ್ತು ಪರಿಹಾರ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದೆ. ಜೈಬಾ ತಬಸ್ಸುಮ್ ಮತ್ತಿತರರು ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ವೇಳೆ ಸರ್ಕಾರ ಮತ್ತು ಅರ್ಜಿದಾರರ ನಡುವೆ ತೀವ್ರ ವಾದ-ಪ್ರತಿವಾದಗಳು ನಡೆದವು.

ಅರ್ಜಿದಾರರ ವಾದ

ಅರ್ಜಿದಾರರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ, 'ಕೋಗಿಲು ಬಡಾವಣೆಯ ವಸೀಂ ಮತ್ತು ಫಕೀರ್ ಕಾಲೋನಿಗಳಲ್ಲಿ ಕಳೆದ 28 ವರ್ಷಗಳಿಂದ ಸುಮಾರು 3 ಸಾವಿರ ಜನರು ವಾಸಿಸುತ್ತಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ತೆರವುಗೊಳಿಸಿರುವುದರಿಂದ ಸಾವಿರಾರು ಕುಟುಂಬಗಳು ರಸ್ತೆಗೆ ಬಿದ್ದಿವೆ. ಅವರಿಗೆ ಸೂಕ್ತ ಪುನರ್ವಸತಿ ಹಾಗೂ ಪರಿಹಾರ ನೀಡಬೇಕು' ಎಂದು ಕೋರಿದರು. ಅಲ್ಲದೆ, ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪುಗಳನ್ನು ಈ ಪ್ರಕರಣಕ್ಕೆ ಅನ್ವಯಿಸಬೇಕೆಂದು ಮನವಿ ಮಾಡಿದರು. ಇದರಿಂದ ರಾಜ್ಯ ಸರ್ಕಾರ ಒಮ್ಮೆಲೇ ತಬ್ಬಿಬ್ಬು ಆಗಿದೆ. ಸರ್ಕಾರವೇ ಮಾನವೀಯತೆ ಆಧಾರದಲ್ಲಿ ಅರ್ಹರಿಗೆ ಸ್ವಂತ ಸೂರು ಕೊಡುವುದಕ್ಕೆ ಮುಂದಾದರೆ, ಇವರು ಸರ್ಕಾರದ ವಿರುದ್ಧವೇ ಅರ್ಜಿ ಸಲ್ಲಿಕೆ ಮಾಡಿ, ಸ್ವಂತ ಮನೆ ಪಡೆಯುವುದಕ್ಕೆ ಕೈ ಹಾಕಿದ್ದಾರೆ.

ಸರ್ಕಾರದ ಪರ ಎಜಿ ಪ್ರತಿವಾದ

ಅರ್ಜಿದಾರರ ವಾದಕ್ಕೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. '28 ವರ್ಷಗಳಿಂದ ವಾಸಿಸುತ್ತಿದ್ದಾರೆ ಎಂಬುದು ಸಂಪೂರ್ಣ ಸುಳ್ಳು ಮಾಹಿತಿ. ಅಕ್ರಮವಾಗಿ ನಿರ್ಮಿಸಲಾದ ಪ್ರತಿ ಮನೆಯ ಬಗ್ಗೆ ನಮ್ಮ ಬಳಿ ಉಪಗ್ರಹ ಆಧಾರಿತ ಫೋಟೋಗಳಿವೆ (Satellite Photos). ಇದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು' ಎಂದು ಸ್ಪಷ್ಟಪಡಿಸಿದರು. ಮುಂದುವರಿದು, ಸುಪ್ರೀಂ ಕೋರ್ಟ್‌ನ ತೀರ್ಪುಗಳು ಈ ಅಕ್ರಮ ಒತ್ತುವರಿ ಪ್ರಕರಣಕ್ಕೆ ಅನ್ವಯಿಸುವುದಿಲ್ಲ. ಆದರೂ, ಮಾನವೀಯ ನೆಲೆಯಲ್ಲಿ ನಿರ್ವಸತಿಕರಾದವರಿಗೆ ಸರ್ಕಾರದಿಂದ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ, ಊಟ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ವಿಚಾರಣೆ ಮುಂದೂಡಿಕೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾದ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಒಂದು ವಾರ ಕಾಲಾವಕಾಶ ಕೋರಿತು. ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಜನವರಿ 22ಕ್ಕೆ ನಿಗದಿಪಡಿಸಿದೆ. ಅಲ್ಲಿಯವರೆಗೆ ಸರ್ಕಾರವು ಸಂತ್ರಸ್ತರಿಗೆ ಕಲ್ಪಿಸಿರುವ ಮೂಲಭೂತ ಸೌಕರ್ಯಗಳ ವರದಿಯನ್ನು ನೀಡುವ ಸಾಧ್ಯತೆಯಿದೆ.