ರಾಜ್ಯದ ಹಲೆವೆಡೆ ಭಾರಿ ಮಳೆ ಅಲರ್ಟ್ ನೀಡಲಾಗಿದೆ. ಹವಾಮಾನ ಇಲಾಖೆ ಮಹತ್ವದ ಸೂಚನೆ ನೀಡಿದ ಬೆನ್ನಲ್ಲೇ ರಾಜ್ಯದ ಈ ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ.
ಬೆಂಗಳೂರು (ಜು.17) ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಕೊಂಚ ತಗ್ಗಿದ್ದ ಮಳೆರಾಯನ ಆರ್ಭಟ ಮತ್ತೆ ಆರಂಭಗೊಂಡಿದೆ. ಇದೀಗ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಸೂಚಿಸಿದೆ. ಈ ಪೈಕಿ ಕೊಡಗು ಜಿಲ್ಲೆಯಲ್ಲಿ ಇಂದು ಹಾಗೂ ನಾಳೆ ಭಾರಿ ಮಳೆಯಾಗಲಿದೆ. ಹೀಗಾಗಿ ರೆಡ್ ಅಲರ್ಟ್ ಸೂಚಿಸಿದೆ. ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚನೆ ಬೆನ್ನಲ್ಲೇ ಕೊಡಗು ಜಿಲ್ಲಾಧಿಕಾರಿ ನಾಳೆ (ಜು.18) ಕೊಡಗಿನ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ನಾಳೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜಿಗೆ ರಜೆ
ಕೊಡುಗ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ 204.5 ಮಿಲಿ ಮೀಟರ್‌ಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಎಂದು ಇಲಾಖೆ ಸೂಚಿಸಿದೆ. ಮುನ್ನಚ್ಚೆರಿಕಾ ಕ್ರಮವಾಗಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ನಾಳೆ (ಜು.18) ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ಜ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಲ್ಲೂ ಭಾರಿ ಮಳೆ ಸಾಧ್ಯತೆ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದಲ್ಲಿ ಭಾರಿ ಗಾಳಿ ಸೇರಿದಂತೆ ಮಳೆಯಾಗುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ದಗೊಂಡಿದೆ. ನಾಡದೋಣಿ ಸೇರಿದಂತೆ ಯಾರೂ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿತ್ತು. ಜುಲೈ 14 ರಿಂದ 17 ರ ವರೆಗೆ ಅರಬ್ಬಿ ಸಮುದ್ರದ ಪ್ರಕ್ಷುಬ್ಧ ಸಾಧ್ಯತೆ ಎಂದು ತಿರುವನಂತಪುರಂನ ಭಾರತೀಯ ಹವಾಮಾನ ಇಲಾಖೆ ಕಚೇರಿ ಸೂಚನೆ ನೀಡಿತ್ತು. ಇದೀಗ ಭಾರಿ ಮಳೆ ಗಾಳಿ ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಡ್ಯಾಂ ಹೊರಹರಿವು ಹೆಚ್ಚಳ ; ಅಧಿಕಾರಿಗಳಿಂದ ಅಲರ್ಟ್
ಜಯಪುರ ಜಿಲ್ಲೆಯ ಆಲಮಟ್ಟಿ ಡ್ಯಾಂನಿಂದ ಹೊರವು ಏಕಾಏಕಿ ಹೆಚ್ಚಳ ಮಾಡಲಾಗಿದೆ. ಈ ಕುರಿತು ಅಲರ್ಟ್ ಸಂದೇಶ ನೀಡಿರುವ ಆಲಮಟ್ಟಿ ಡ್ಯಾಂ ಅಧಿಕಾರಿಗಳು, 70 ಸಾವಿರ ಕ್ಯೂಸೆಕ್ ನಿಂದ 90 ಸಾವಿರ ಕ್ಯೂಸೆಕ್‌ಗೆ ಹೊರ ಹರಿವಿನ ಪ್ರಮಾಣವನ್ನ ಹೆಚ್ಚಳ ಮಾಡಲಾಗಿದೆ. ಅಪಾರ ಪ್ರಮಾಣದ ನೀರು ಕೃಷ್ಣಾನದಿಯ ಮೂಲಕ ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯ ಸೇರುತ್ತದೆ.. ಈ ಹಿನ್ನೆಲೆ ಕೃಷ್ಣಾನದಿ ಪಾತ್ರದ ಗ್ರಾಮಗಳಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಜನ ಜಾನುವಾರು ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ..
