ಕೆಎಂಎಫ್ ನೌಕರರು ಫೆಬ್ರವರಿ 1 ರಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ, ಹಾಲಿನ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಬೆಂಗಳೂರು: ಕೆಎಂಎಫ್ ಆಡಳಿತ ಮಂಡಳಿ ವಿರುದ್ಧ ಅಧಿಕಾರಿಗಳು ಹಾಗೂ ನೌಕರರು ಸಮರ ಸಾರಿದ್ದು, ಫೆಬ್ರವರಿ 1ರಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧಾರ ಮಾಡಿದ್ದಾರೆ. ಒಂದು ವೇಳೆ ಅಧಿಕಾರಿಗಳು ಮತ್ತು ನೌಕರರು ಮುಷ್ಕರಕ್ಕೆ ಮುಂದಾದ್ರೆ ಕೆಎಂಎಫ್ ಉತ್ಪನ್ನಗಳ ಪೂರೈಕೆಯಲ್ಲಿ ದೊಡ್ಡಮಟ್ಟದ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ. ಮುಷ್ಕರಕ್ಕೆ ಮುಂದಾಗಿರುವ ಅಧಿಕಾರಿಗಳು ಮತ್ತು ನೌಕರರು ಏಳನೇ ವೇತನ ಆಯೋಗ ವರದಿಯಂತೆ ವೇತನ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಆದ್ರೆ ನೌಕರರು ಮನವಿಗೆ ಕೆಎಂಎಫ್ ಆಡಳಿತ ಮಂಡಳಿ ಸ್ಪಂದಿಸಿಲ್ಲ ಎನ್ನಲಾಗಿದೆ.
ಹೀಗಾಗಿ ಫೆ 1 ರಿಂದ ಕೆಎಂಎಫ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧಾರ ಮಾಡಿದ್ದಾರೆ. ರಾಜ್ಯಾದ್ಯಂತ 1300 ಕ್ಕೂ ಹೆಚ್ಚು ಅಧಿಕಾರಿ-ನೌಕರರು ಕೆಎಂಎಫ್ ನಲ್ಲಿ ಸೇವೆಯಲ್ಲಿದ್ದಾರೆ . ಕಳೆದ ಎರಡ್ಮೂರು ತಿಂಗಳಿನಿಂದ ಮನವಿ ಸಲ್ಲಿಸಿದರೂ ಆಡಳಿತ ಮಂಡಳಿಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಬ್ಬಂದಿಗಳಿಗೆ ಸಿಕ್ಕದ ಹಿನ್ನೆಲೆ ಆಕ್ರೋಶಗೊಂಡಿದ್ದಾರೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ, ನೌಕರರಿಗೆ ಈಗಾಗಲೇ ಏಳನೇ ವೇತನ ಆಯೋಗದ ವರದಿ ಶಿಫಾರಸಿನಂತೆ ಪೂರ್ಣ ಪ್ರಮಾಣದಲ್ಲಿ ಪರಿಷ್ಕೃತ ವೇತನ ಜಾರಿ ಮಾಡಲಾಗಿದೆ. ಕೆಎಂಎಫ್ ಅಧಿಕಾರಿ, ನೌಕರರಿಗೆ ಕೇವಲ ಶೇ.17ರಷ್ಟು ಮಾತ್ರ ವೇತನ ಹೆಚ್ಚಳ ಮಾಡಲಾಗಿದ್ದು, ಇನ್ನೂ ಶೇ.8ರಷ್ಟು ವೇತನ ಹೆಚ್ಚಳ ಬಾಕಿ ಉಳಿದಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಪೂರ್ಣ ಪ್ರಮಾಣದಲ್ಲಿ ವೇತನ ಹೆಚ್ಚಿಸುವಂತೆ ಒತ್ತಾಯಿಸಿದರೂ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಸಂಘ ಆರೋಪಿಸಿದೆ.
ಪರಿಷ್ಕೃತ ಶ್ರೇಣಿ- ವೇತನ ಸೌಲಭ್ಯಗಳನ್ನ 2024 ಅಕ್ಟೋಬರ್ 1 ರಿಂದ ಜಾರಿಗೊಳಿಸಲು ಆದೇಶಿಸಬೇಕು ಎಂಬುವುದು ನೌಕರರ ಆಗ್ರಹವಾಗಿದೆ. ತಾಂತ್ರಿಕ ನೆಪವೊಡ್ಡಿ ಕೆಎಂಎಫ್ ಹಾಗೂ ಒಕ್ಕೂಟಗಳು ಯಥಾವತ್ ಯೋಜನೆ ಜಾರಿ ಮಾಡಲು ಹಿಂದೇಟು ಹಾಕುತ್ತಿವೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಕಾರಣಗಳಿಂದ ಕೆಎಂಎಫ್ ಅಧಿಕಾರಿ ಮತ್ತು ನೌಕರರ ಸಂಘದಿಂದ ಒಮ್ಮತದಿಂದ ಫೆಬ್ರವರಿ 1 ರಿಂದ ಕೆಎಂಎಫ್ ಚಟುವಟಿಕೆ ಸ್ಥಗಿತಗೊಳಿಸಲು ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಮತ್ತೆ ಬೀದಿಗಿಳಿದ ಅಂಗನವಾಡಿ ಕಾರ್ಯಕರ್ತೆಯರು: ಮೈ ಕೊರೆಯುವ ಚಳಿಯಲ್ಲೂ ಧರಣಿ
ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಕೆಎಂಎಫ್ ಅಧಿಕಾರಿ ಮತ್ತು ನೌಕರರಿಗೆ ಬಾಕಿಯಿರುವ ವೇತನವನ್ನು ಹೆಚ್ಚಳ ಮಾಡಿಕೊಡುತ್ತೇವೆ ಎಂದಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಸದ್ಯದಲ್ಲೇ ಸಮಸ್ಯೆ ಇತ್ಯರ್ಥ ಪಡಿಸುತ್ತೇವೆ. ಫೆ.1ಕ್ಕೆ ಯಾವುದೇ ಮುಷ್ಕರ ಇರುವುದಿಲ್ಲ. ಎಂದಿನಂತೆ ಹಾಲು, ಮೊಸರು ಸೇರಿ ಹಾಲಿನ ಉತ್ಪನ್ನಗಳ ಸರಬರಾಜು, ಮಾರಾಟ ಇರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಿವಾಸಿಗಳೇ ನಿಮ್ಮ ಆಸ್ತಿಯ ಅಂತಿಮ 'ಬಿಬಿಎಂಪಿ ಇ-ಖಾತಾ' ಪಡೆಯಲು ಸೂಚನೆ!
