* ಸಾವಿನಲ್ಲೂ ಸಾರ್ಥಕತೆಗೆ ಮೆರೆದ 22 ವರ್ಷದ ನರ್ಸ್‌* ಕುಸಿದುಬಿದ್ದು ನರ್ಸ್‌ ಬ್ರೇನ್‌ಡೆಡ್‌ ಅಂಗಾಂಗ ದಾನ ಮಾಡಿದ ಕುಟುಂಬ* ಕುಟುಂಬಕ್ಕೆ ಸಚಿವ ಸುಧಾಕರ್‌ ಶ್ಲಾಘನೆ

ಬೆಂಗಳೂರು(ಫೆ.14): ವೃತ್ತಿ ಜೀವನದಲ್ಲಿ ಸಾವಿರಾರು ರೋಗಿಗಳ ಸೇವೆ ಮಾಡಬೇಕು ಎಂಬ ಆಶಯ ಹೊತ್ತಿದ್ದ 22 ವರ್ಷದ ಶುಶ್ರೂಷಕಿಯೊಬ್ಬರು ಹಠಾತ್‌ ನಿಧನರಾಗಿದ್ದು, ಅಂಗಾಂಗ ದಾನದ ಮೂಲಕ ಆರು ಮಂದಿಗೆ ಜೀವ ದಾನ ಮಾಡಿದ್ದಾರೆ.

ಆ ಶುಶ್ರೂಷಕಿ ಹೆಸರು ಟಿ.ಕೆ.ಗಾನವಿ. ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ ತಾಲೂಕಿನ ಹೊಸಕೊಪ್ಪ ಮೂಲದವರಾಗಿದ್ದು, ಶಿವಮೊಗ್ಗದ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಫೆ.8ರಂದು ರಾತ್ರಿ ಪಾಳಿ ಮಾಡುತ್ತಿರುವ ಸಂದರ್ಭದಲ್ಲಿ ದಿಢೀರ್‌ ಕುಸಿದು ಜ್ಞಾನ ತಪ್ಪಿದ್ದರು. ಹೆಚ್ಚುವರಿ ಚಿಕಿತ್ಸೆಗೆ ಬೆಂಗಳೂರು ಮೆಡಿಕಲ್‌ ಕಾಲೇಜಿನ ಪಿಎಂಎಸ್‌ಎಸ್‌ವೈ ಆಸ್ಪತ್ರೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಚಿಕಿತ್ಸೆ ಬಳಿಕವೂ ಚೇತರಿಕೆ ಕಾಣದ ಹಿನ್ನೆಲೆ ಫೆ.12ರಂದು ಮೆದುಳು ನಿಷ್ಕಿ್ರಯ ಎಂದು ವೈದ್ಯರು ಘೋಷಿಸಿದ್ದರು. ಶುಶ್ರೂಷಕಿಯ ಕುಟುಂಬಸ್ಥರು ಸ್ಥಳದಲ್ಲಿಯೇ ಅಂಗಾಂಗ ದಾನಕ್ಕೆ ಅನುಮತಿ ನೀಡಿದ್ದಾರೆ.

ದಾನಿಯ ದೇಹವನ್ನು ಗ್ಯಾಸ್ಟೊ್ರೕ ಎಂಟ್ರೋಲಜಿ ಸೈನ್ಸಸ್‌ ಆಂಡ್‌ ಆರ್ಗನ್‌ ಟ್ರಾನ್ಸ್‌ಪ್ಲಾಂಟ್‌ (ಐಜಿಒಟಿ) ಆಸ್ಪತ್ರೆಗೆ ವರ್ಗಾಯಿಸಿ ಶನಿವಾರ ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಗಿದೆ. ಯಕೃತ್‌, ಎರಡು ಮೂತ್ರಪಿಂಡ (ಕಿಡ್ನಿ), ಹೃದಯ ನಾಳಗಳು, ಎರಡು ಕಾರ್ನಿಯಾವನ್ನು ದಾನವಾಗಿ ಪಡೆಯಲಾಗಿದೆ. ಇವುಗಳನ್ನು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆರು ಮಂದಿಗೆ ಕಸಿ ಮಾಡುವ ಕಾರ್ಯ ನಡೆಯುತ್ತಿದೆ.

ಈಗಾಗಲೇ ‘ಸಕ್ರಾ ಆಸ್ಪತ್ರೆಯ 48 ವರ್ಷದ ವ್ಯಕ್ತಿಗೆ ಯಕೃತ್‌, ಮಣಿಪಾಲ್‌ ಆಸ್ಪತ್ರೆಯ 40 ವರ್ಷದ ಮಹಿಳೆಗೆ ಬಲಭಾಗದ ಮೂತ್ರಪಿಂಡ, ಐಎನ್‌ಯು ಆಸ್ಪತ್ರೆಯ 35 ವರ್ಷದ ಪುರುಷನಿಗೆ ಎಡಭಾಗದ ಮೂತ್ರಪಿಂಡ ಕಸಿ ಮಾಡಲಾಗಿದೆ. ಮಣಿಪಾಲ್‌ ಆಸ್ಪತ್ರೆಗೆ ಹೃದಯ ನಾಳಗಳನ್ನು ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಗೆ ಕಾರ್ನಿಯಾಗಳನ್ನು ಕಳಿಸಿದ್ದು, ಅರ್ಹ ಮೂರು ಮಂದಿಗೆ ಕಸಿ ಮಾಡಲಾಗುವುದು’ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಆರೋಗ್ಯ ಸಚಿವರಿಂದ ಶ್ಲಾಘನೆ:

ಈ ಕುರಿತು ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ‘ಗಾನವಿ ಗುಣಮುಖರಾಗಿದ್ದರೆ ಹಲವು ರೋಗಿಗಳ ಸೇವೆ ಮಾಡುತ್ತಿದ್ದರು. ಸಾವಿನ ನಂತರವು ತನ್ನ ಅಂಗಾಂಗಗಳನ್ನು ಅಂಗಾಂಗ ವೈಫಲ್ಯದಿಂದಾಗಿ ಸಾವಿನ ಹಾದಿಯಲ್ಲಿದ್ದ ಹಲವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅಂಗಾಂಗ ದಾನಕ್ಕೆ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ದುಃಖದ ಸಂದರ್ಭದಲ್ಲಿಯೂ ಅಂಗಾಂಗ ದಾನ ನಿರ್ಧಾರ ಕೈಗೊಂಡ ಕುಟುಂಬಸ್ಥರ ನಡೆ ಶ್ಲಾಘನೀಯ.

ಮೂರು ದಿನ ಮೂರು ಘಟನೆ

ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ನಿತ್ಯ ಒಬ್ಬರು ಮೆದುಳು ನಿಷ್ಕಿ್ರಯಗೊಂಡು ಬಹುಅಂಗಾಂಗ ದಾನ ಮಾಡಿದ್ದಾರೆ. ಫೆ.11ರಂದು ಕೊಡಗಿನಲ್ಲಿ ರಸ್ತೆ ಅಪಘಾತದಿಂದ, ಫೆ.12 ರಂದು ಕೋಲಾರದ ಶ್ರೀನಿವಾಸಪುರದಲ್ಲಿ 26 ವರ್ಷದ ಮದುಮಗಳು, ಫೆ.13 ರಂದು ಚಿಕ್ಕಮಗಳೂರಿನ ಗಾನವಿ ದಿಢೀರ್‌ ಅನಾರೋಗ್ಯಕ್ಕೀಡಾಗಿ ಮೆದುಳು ನಿಷ್ಕಿ್ರಯವಾಗಿ ಅಂಗಾಂಗ ದಾನ ಮಾಡಿದ್ದಾರೆ.