ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಬಂದಿದ್ದು ಬೊಮ್ಮಸಂದ್ರದಿಂದ: ಮಾಜಿ ಕಾರು ಚಾಲಕನ ಮೇಲೆ ಶಂಕೆ
ನಗರದ ಹೊಸೂರು ರಸ್ತೆಯ ಬೊಮ್ಮಸಂದ್ರದ ವಾಟರ್ ಟ್ಯಾಂಕ್ ಸಮೀಪದಿಂದ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಮನೆಗೆ ಎರಡು ಅನಾಮಧೇಯ ಬೆದರಿಕೆ ಪತ್ರಗಳು ಪೋಸ್ಟ್ ಆಗಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು (ಏ.07): ನಗರದ ಹೊಸೂರು ರಸ್ತೆಯ ಬೊಮ್ಮಸಂದ್ರದ ವಾಟರ್ ಟ್ಯಾಂಕ್ ಸಮೀಪದಿಂದ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಮನೆಗೆ ಎರಡು ಅನಾಮಧೇಯ ಬೆದರಿಕೆ ಪತ್ರಗಳು ಪೋಸ್ಟ್ ಆಗಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೊಮ್ಮಸಂದ್ರದ ವಾಟರ್ ಟ್ಯಾಂಕ್ ಸಮೀಪದ ಅಂಚೆ ಪೆಟ್ಟಿಗೆಗೆ ಮಾ.28ರಂದು ಬೆದರಿಕೆ ಪತ್ರ ಹಾಕಲಾಗಿದೆ. ಅಲ್ಲಿಂದ ಮರು ದಿನ ಜೆ.ಪಿ.ನಗರ 6ನೇ ಹಂತದ ಕೆ.ಆರ್.ಲೇಔಟ್ 17ನೇ ಕ್ರಾಸ್‌ನಲ್ಲಿರುವ ಸುದೀಪ್ ಮನೆಗೆ ಬೆದರಿಕೆ ಪತ್ರಗಳು ತಲುಪಿವೆ. ಆದರೆ ಪತ್ರದಲ್ಲಿ ಬರೆದವನ ಹೆಸರು ಉಲ್ಲೇಖವಾಗಿಲ್ಲ.
ಹೀಗಾಗಿ ಪತ್ರ ಯಾರು ಬರೆದಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಸುಲಭವಾಗಿಲ್ಲ. ಈ ಸಂಬಂಧ ಸುದೀಪ್ ಅವರಿಂದ ಕೂಡ ಮಾಹಿತಿ ಪಡೆಯಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಸುದೀಪ್ ಅವರಿಗೆ ರಾಜಕೀಯ ಕಾರಣಗಳಿಗಿಂತ ವೈಯಕ್ತಿಕ ವಿಚಾರವಾಗಿ ಪತ್ರ ಬರೆದಿರುವ ಬಗ್ಗೆ ಶಂಕೆ ಇದೆ. ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ವ್ಯಕ್ತಿಗಳಿಂದ ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದಿರಬಹುದು. ಇದೇ ರೀತಿ ಅನುಮಾನವನ್ನು ಸುದೀಪ್ ಕೂಡ ವ್ಯಕ್ತಪಡಿಸಿದ್ದಾರೆ. ಆದರೆ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಟ ಸುದೀಪ್ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ: ಸತೀಶ್ ಜಾರಕಿಹೊಳಿ
ಸುದೀಪ್ ಮಾಜಿ ಕಾರು ಚಾಲಕನ ಮೇಲೆ ಶಂಕೆ: ಬೆದರಿಕೆ ಪತ್ರಗಳ ಪ್ರಕರಣದಲ್ಲಿ ನಟ ಸುದೀಪ್ ಅವರ ಮಾಜಿ ಕಾರು ಚಾಲಕನ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕರ್ತವ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿ ಕಾರಣಕ್ಕೆ ಆರು ತಿಂಗಳ ಹಿಂದೆ ಕಾರು ಚಾಲಕನನ್ನು ಕೆಲಸದಿಂದ ಸುದೀಪ್ ತೆಗೆದು ಹಾಕಿದ್ದರು. ಇದೇ ಕೋಪದಿಂದ ಆತ ಬೆದರಿಕೆ ಪತ್ರ ಬರೆದಿರಬಹುದು ಎಂದ ಗುಮಾನಿ ಮೂಡಿದೆ. ಆದರೆ ಇದುವರೆಗೆ ಚಾಲಕನನ್ನು ವಿಚಾರಣೆ ನಡೆಸಿಲ್ಲ ಎಂದು ಸಿಸಿಬಿ ಮೂಲಗಳು ಹೇಳಿವೆ.
ನಟ ಸುದೀಪ್‌ಗೆ ಅವಾಚ್ಯ ನಿಂದನೆ: ಬುಧವಾರವಷ್ಟೇ ಬಿಜೆಪಿಗೆ ಬೆಂಬಲ ಪ್ರಕಟಿಸಿದ ಕನ್ನಡ ಚಿತ್ರರಂಗದ ನಟ ಸುದೀಪ್ ಹಾಗೂ ಅವರ ಪೋಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ರಾಸಲೀಲೆ ವಿಡಿಯೋ ಬಹಿರಂಗಪಡಿಸುವುದಾಗಿ ಅನಾಧಮೇಯ ವ್ಯಕ್ತಿಯಿಂದ ಬೆದರಿಕೆ ಪತ್ರಗಳು ಬಂದಿರುವ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆ.ಪಿ.ನಗರದಲ್ಲಿ ಸುದೀಪ್ ಅವರ ಮನೆಗೆ ಮಾ.29 ರಂದು ಅನಾಮಧೇಯ ವ್ಯಕ್ತಿಯಿಂದ ಅಂಚೆ ಮೂಲಕ ಈ ಬೆದರಿಕೆ ಪತ್ರಗಳು ಬಂದಿದ್ದು, ಸುದೀಪ್ ಅವರ ಮ್ಯಾನೇಜರ್ ಹಾಗೂ ನಿರ್ಮಾಪಕ ಮಂಜುನಾಥ್ ಅಲಿಯಾಸ್ ಜಾಕ್ ಮಂಜು ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಅವರು, ಈ ಸಂಬಂಧ ಸಿಸಿಬಿ ತನಿಖೆಗೆ ಆದೇಶಿಸಿದ್ದಾರೆ.
ನನ್ನನ್ನು ಬಿಜೆಪಿ ಪಕ್ಷ ಕರೆದಿಲ್ಲ, ಬೊಮ್ಮಾಯಿ ಮಾಮ ಕರೆದಿದ್ದಾರೆ: ಸುದೀಪ್
ಜೆ.ಪಿ.ನಗರದ 6ನೇ ಹಂತದ ಕೆ.ಆರ್. ಲೇಔಟ್ 17ನೇ ಕ್ರಾಸ್‌ನಲ್ಲಿ ತಮ್ಮ ಪೋಷಕರ ಜತೆ ಸುದೀಪ್ ನೆಲೆಸಿದ್ದಾರೆ. ಮಾ.29ಕ್ಕೆ ಸುದೀಪ್ ಅವರ ವಿಳಾಸಕ್ಕೆ ಅಂಚೆ ಮೂಲಕ ಎರಡು ಪತ್ರಗಳು ಬಂದಿದ್ದವು. ಇವುಗಳನ್ನು ಸ್ವೀಕರಿಸಿದ ಸುದೀಪ್ ಕುಟುಂಬದವರು, ಅವುಗಳನ್ನು ತೆರೆದು ಓದಿದಾಗ ಅವಾಚ್ಯ ಶಬ್ದಗಳ ನಿಂದನೆ ಹಾಗೂ ರಾಸಲೀಲೆ ವಿಡಿಯೋ ವಿಷಯಗಳ ಬಗ್ಗೆ ಆತಂಕಗೊಂಡಿದ್ದಾರೆ. ಕೂಡಲೇ ಸುದೀಪ್ ಅವರ ಗಮನಕ್ಕೆ ತಂದಿದ್ದಾರೆ. ಸುದೀಪ್ ಸೂಚನೆ ಮೇರೆಗೆ ಪುಟ್ಟೇನಹಳ್ಳಿ ಠಾಣೆಗೆ ಅವರ ಮ್ಯಾನೇಜರ್ ದೂರು ನೀಡಿದ್ದಾರೆ. ಅದರನ್ವಯ ಅಪರಾಧಿಕ ಸಂಚು (ಐಪಿಸಿ 120ಬಿ) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.