ಅರಣ್ಯ ವಾಸಿಗಳಿಗೆ ಸೀಮೆಎಣ್ಣೆ ಪೂರೈಕೆ: ಸಚಿವ ಕತ್ತಿ
- ಅರಣ್ಯ ವಾಸಿಗಳಿಗೆ ಸೀಮೆ ಎಣ್ಣೆ ಪೂರೈಕೆಗೆ ಖಾಸಗಿ ಏಜೆನ್ಸಿಗಳಿಗೆ ಪರವಾನಿಗೆ ನೀಡಲಾಗುವುದು
- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ
ವಿಧಾನ ಪರಿಷತ್ (ಸೆ.15): ಅರಣ್ಯ ವಾಸಿಗಳಿಗೆ ಸೀಮೆ ಎಣ್ಣೆ ಪೂರೈಕೆಗೆ ಖಾಸಗಿ ಏಜೆನ್ಸಿಗಳಿಗೆ ಪರವಾನಿಗೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಬಿಜೆಪಿ ಸದಸ್ಯ ಶಾಂತಾರಾಮ ಸಿದ್ದಿ ಅವರು ನಿಯಮ 72ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿ ಪ್ರತಿಕ್ರಿಯೆ ನೀಡಿದ ಅವರು, ಅರಣ್ಯ ವಾಸಿಗಳು ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ ಅಡುಗೆ ಸಿದ್ಧಪಡಿಸಲು 2 ಲೀಟರ್ ಮತ್ತು ದೀಪಕ್ಕಾಗಿ 1 ಲೀಟರ್ ಸೀಮೆ ಎಣ್ಣೆ ನೀಡಲಾಗುತ್ತಿದೆ. ಆದರೆ, ಹೆಚ್ಚುವರಿ ಸೀಮೆಎಣ್ಣೆ ಅಗತ್ಯವಿದ್ದು, ಖಾಸಗಿ ಸಂಸ್ಥೆಗಳ ಪರವಾನಿಗೆ ನೀಡಲಾಗುವುದು. ಆ ಮೂಲಕ ಅರಣ್ಯವಾಸಿಗಳಿಗೆ ಅಗತ್ಯ ಪ್ರಮಾಣದ ಸೀಮೆ ಎಣ್ಣೆ ವಿತರಣೆ ಮಾಡಲಾಗುವುದು ಎಂದರು.
ಒಬ್ಬ ವ್ಯಕ್ತಿಗೆ 1 ತಿಂಗಳಿಗೆ 5 ಕೆಜಿ ಅಕ್ಕಿ ಸಾಕು, 10 ಕೆಜಿ ಕೊಟ್ರೆ ಸರ್ಕಾರದ ಬೊಕ್ಕಸಕ್ಕೆ ಹೊರೆ: ಕತ್ತಿ ಮಾತು
ಕೇಂದ್ರ ಸರ್ಕಾರದ ಉಜ್ವಲ ಮತ್ತು ರಾಜ್ಯ ಸರ್ಕಾರದಿಂದ ಅನಿಲ ಭಾಗ್ಯ ಯೋಜನೆಗಳ ಮೂಲಕ ಅರಣ್ಯ ವಾಸಿಗಳಿಗೆ ಎಲ್‌ಪಿಜಿ ಗ್ಯಾಸ್ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 11,658 ಪಡಿತರ ಕುಟುಂಬಗಳಿದ್ದು, 34,974 ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಂತಾರಾಮ ಸಿದ್ದಿ, ಅರಣ್ಯ ವಾಸಿಗಳಲ್ಲಿ ವಿದ್ಯುತ್ ಸೌಲಭ್ಯ ಇಲ್ಲವಾಗಿದೆ. ಇದರಿಂದ ಸೀಮೆಎಣ್ಣೆ ದೀಪವನ್ನು ಅವಲಂಬಿಸಿದ್ದಾರೆ. ಆದರೆ, ಸರ್ಕಾರದಿಂದ ಪ್ರತಿ ತಿಂಗಳ 1 ಲೀಟರ್ ಮಾತ್ರ ಸೀಮೆಎಣ್ಣೆ ನೀಡಲಾಗುತ್ತಿದೆ. ಇದು ಸಾಕಾಗುತ್ತಿಲ್ಲ. ಹೀಗಾಗಿ ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ. ಆದ್ದರಿಂದ ಅರಣ್ಯ ವಾಸಿಗಳ ಮಕ್ಕಳ ಹಿತ ದೃಷ್ಟಿಯಿಂದ ಹೆಚ್ಚುವರಿ ಸೀಮೆಎಣ್ಣೆ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.